ಸಾರಾಂಶ
ಧಾರವಾಡ:
ಇಲ್ಲಿಯ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ವಿವಿ 74ನೇ ಘಟಿಕೋತ್ಸವದಲ್ಲಿ ಆಶಾ ಕಾರ್ಯಕರ್ತೆ ಮತ್ತು ಗ್ರಾಮ ಪಂಚಾಯಿತಿ ಸಿಪಾಯಿಯ ಸುಪುತ್ರಿ ಜಯಶ್ರೀ ತಳವಾರ ಬರೋಬ್ಬರಿ ಒಂಭತ್ತು ಚಿನ್ನದ ಪದಕ ತನ್ನ ಉಡಿಗೆ ಹಾಕಿಕೊಳ್ಳುವ ಮೂಲಕ ಸಾಧನೆ ತೋರಿದಳು.ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ 2022ರಲ್ಲಿ ಪ್ರವೇಶ ಪಡೆದು, 2023-24ನೇ ಬ್ಯಾಚ್‌ನ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ಜಯಶ್ರೀಗೆ 74ನೇ ವಾರ್ಷಿಕ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ ಪದಕ ಪ್ರದಾನ ಮಾಡಿದರು. ಮೂಲತಃ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಕೊಡಗಲಿ ಗ್ರಾಮದ ಜಯಶ್ರೀ, ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದಿದ್ದಾರೆ. ಇವರ ತಾಯಿ ಮಂಜುಳಾ ತಳವಾರ ಆಶಾ ಕಾರ್ಯಕರ್ತೆಯಾಗಿದ್ದಾರೆ. ತಂದೆ ಮಹಾಂತೇಶ ಹಿರೇಕೊಡಗಲಿ ಗ್ರಾಪಂ ಗ್ರೂಪ್ ಡಿ ದರ್ಜೆಯ ಸಿಪಾಯಿ.
ಬಡತನದ ಕುಟುಂಬದಿಂದ ಬಂದಿದ್ದರೂ ಛಲತೊಟ್ಟು ಓದಿದ ಜಯಶ್ರೀ ಇದೀಗ ಚಿನ್ನದ ಹುಡುಗಿಯಾಗಿ ಮಿಂಚಿದ್ದಾಳೆ.ಗದಗ ಜಿಲ್ಲೆಯ ರೋಣ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಪೂರೈಸಿದ್ದಾಳೆ. ಧಾರವಾಡದ ಹುರುಕಡ್ಲಿ ಮಹಿಳಾ ಕಾಲೇಜಿನಲ್ಲಿ ಪಿಯುಸಿ ಮತ್ತು ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಓದಿದ್ದಾಳೆ. ಹಾಸ್ಟೆಲ್‌ನಲ್ಲಿದ್ದು ಓದಿರುವ ಜಯಶ್ರೀಯು ಹಳ್ಳಿ ಹುಡುಗಿಯಾಗಿ ಚಿನ್ನದ ಪದಕ ಗಿಟ್ಟಿಸಿರುವುದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಸಂಗತಿ.
ತಾಯಿಯ ಶ್ರಮವೇ ಸ್ಫೂರ್ತಿ:ನನ್ನ ತಾಯಿಯ ದುಡಿಮೆ, ಅವಳು ರೂಢಿಸಿಕೊಂಡ ಪ್ರಾಮಾಣಿಕತೆ, ಒಳ್ಳೆಯವರಾಗಿ ಬಾಳಬೇಕು ಎನ್ನುವ ಅವರ ಉತ್ತಮ ವಿಚಾರಗಳು ನನಗೆ, ನನ್ನ ಓದಿಗೆ ಸದಾಕಾಲ ಸ್ಫೂರ್ತಿಯಾಗಿದೆ. ಧಾರವಾಡ ಕವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕರು ತೋರಿದ ಮಾರ್ಗದರ್ಶನದಿಂದಾಗಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಈ ಸಾಧನೆಗೆ ಸದಾಕಾಲ ಒತ್ತಾಸೆಯಾದ ಎಲ್ಲ ಸ್ನೇಹಿತರ ಪ್ರೀತಿಗೆ ಅಭಿನಂದನೆ. ಹಳ್ಳಿಯ ಹುಡುಗಿಯರೂ ಸಾಧನೆ ಮಾಡಬಲ್ಲರು ಎನ್ನುವಂತೆ ನನ್ನಂಥವರಿಗೆ ಓದಿನ ರುಚಿ ಹತ್ತಿಸುವ ಈ ಧಾರವಾಡ ಮಣ್ಣಿಗೆ, ನೆಲಕ್ಕೆ ನಾನು ಸದಾ ಋಣಿ. ನಮ್ಮಂಥ ಬಡ ಹುಡುಗಿಯರಿಗೆ ತಾಯಿ ಪ್ರೀತಿ ತೋರಿ ಕರುಣಿಸಿದ ಧಾರವಾಡ ಜನರ ಪ್ರೀತಿಯನ್ನು ಎಂದಿಗೂ ಮರೆಯಲಾರೆ ಎನ್ನುತ್ತಾರೆ ಜಯಶ್ರೀ ತಳವಾರ.