9 ಕಿ.ಮೀ. ದೂರಕ್ಕೆ ಬರಲು 120 ಕಿ.ಮೀ. ಸುತ್ತಾಟ!

| Published : May 18 2025, 01:23 AM IST

ಸಾರಾಂಶ

ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಅತೀ ಹತ್ತಿರದ ಸಂಪರ್ಕವಾಗಿರುವ ಈ ರಸ್ತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿದೆ. ಈ 9 ಕಿ.ಮೀ. ರಸ್ತೆ ಅಭಿವೃದ್ಧಿ ಹೊಂದಿದರೆ ಪರಿಸರದ ಜನರ ಸಹಿತ ಉಭಯ ಜಿಲ್ಲೆಗಳ ಮಂದಿಗೆ ಸಮಯ ಹಾಗೂ ಇಂಧನ ಉಳಿತಾಯದ ಜತೆ ಹೆಚ್ಚಿನ ಅನುಕೂಲವಾಗಲಿದೆ.

ರಸ್ತೆ ಇಲ್ಲದೆ ಎಳನೀರು ನಿವಾಸಿಗಳಿಗೆ ತಾಲೂಕು ಕೇಂದ್ರ ಭಾರಿ ದೂರ । ರಸ್ತೆ ನಿರ್ಮಾಣಕ್ಕೆ ಉಸ್ತುವಾರಿ ಸಚಿವ ಗುಂಡೂರಾವ್‌ ಪತ್ರ । ರಸ್ತೆ ನಿರ್ಮಾಣವಾದರೆ ಪ್ರವಾಸೋದ್ಯಮವೂ ಅಭಿವೃದ್ಧಿ । ಚಿಕ್ಕಮಗಳೂರು-ಬೆಳ್ತಂಗಡಿ ನಡುವೆ ಹತ್ತಿರದ ಸಂಪರ್ಕ

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ತಾಲೂಕಿನ ಗಡಿ ಗ್ರಾಮವಾದ ಎಳನೀರು ಎಂಬ ಪ್ರದೇಶದ ಜನ ಕೇವಲ 9 ಕಿ.ಮೀ. ರಸ್ತೆಯ ಕೊರತೆಯಿಂದ ಬೆಳ್ತಂಗಡಿಗೆ ಬರಬೇಕಾದರೆ 120 ಕಿ.ಮೀ. ಸಂಚರಿಸಿ ಬರಬೇಕು. ಆದರೆ ಇಲ್ಲಿ 9 ಕಿ.ಮೀ. ರಸ್ತೆ ಮಾಡಿದರೆ ತಾಲೂಕು ಕೇಂದ್ರ ಹತ್ತಿರವಾಗುತ್ತದೆ. ಈಗ ವಾಹನ ಸಂಚಾರಕ್ಕೆ 10 ಪಟ್ಟು ಹೆಚ್ಚು ಸುತ್ತಾಡಿ ಬರುವುದು ತಪ್ಪುತ್ತದೆ.

ತಾಲೂಕಿನ ಮಲವಂತಿಗೆ ಗ್ರಾಮದ ವ್ಯಾಪ್ತಿಗೆ ಒಳಪಟ್ಟ ದಿಡುಪೆ ಎಳನೀರು ರಸ್ತೆಯ ಅಭಿವೃದ್ಧಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮೇ 14ರಂದು ಪತ್ರ ಬರೆದಿದ್ದಾರೆ. ಇದು ಇಲ್ಲಿನ ನಿವಾಸಿಗಳ ಸಂತಸಕ್ಕೆ ಕಾರಣವಾಗಿದೆ.

ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲೆಗೆ ಅತೀ ಹತ್ತಿರದ ಸಂಪರ್ಕವಾಗಿರುವ ಈ ರಸ್ತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿದೆ. ಈ 9 ಕಿ.ಮೀ. ರಸ್ತೆ ಅಭಿವೃದ್ಧಿ ಹೊಂದಿದರೆ ಪರಿಸರದ ಜನರ ಸಹಿತ ಉಭಯ ಜಿಲ್ಲೆಗಳ ಮಂದಿಗೆ ಸಮಯ ಹಾಗೂ ಇಂಧನ ಉಳಿತಾಯದ ಜತೆ ಹೆಚ್ಚಿನ ಅನುಕೂಲವಾಗಲಿದೆ.

10 ಪಟ್ಟು ದೂರ ಕ್ರಮಿಸಿ ತಾಲೂಕು ಸಂಪರ್ಕ:

ಪ್ರಸ್ತುತ ದಿಡುಪೆ-ಎಳನೀರು ರಸ್ತೆಯಲ್ಲಿ ಬೇಸಿಗೆ ಕಾಲದಲ್ಲಿ ಕೇವಲ ಜೀಪು, ಬೈಕುಗಳಷ್ಟೇ ಸಂಚರಿಸಲು ಸಾಧ್ಯ. ಮಳೆ ಆರಂಭವಾದರೆ ಈ ರಸ್ತೆಯಲ್ಲಿ ಯಾವುದೇ ವಾಹನಗಳು ಸಂಚರಿಸುವುದಿಲ್ಲ. ಎಳನೀರು ಭಾಗದ ಜನ ತಮ್ಮ ಪಂಚಾಯಿತಿ, ತಾಲೂಕು ಕೇಂದ್ರದ ಕೆಲಸಗಳಿಗೆ 120 ಕಿ.ಮೀ. ದೂರವನ್ನು ಕುದುರೆಮುಖ-ಬಜೆಗೋಳಿ-ಗುರುವಾಯನಕೆರೆ ಮೂಲಕ ಕ್ರಮಿಸಿ ತಲುಪಬೇಕಿದೆ.ಅರಣ್ಯ ಇಲಾಖೆ ಒಪ್ಪಿಗೆ ಇಲ್ಲ:

ಈ ರಸ್ತೆ ಅಭಿವೃದ್ಧಿ ಕುರಿತು ಹಲವು ವರ್ಷಗಳ ಬೇಡಿಕೆಗೆ ಭರವಸೆ ಸಿಗುತ್ತದೆ ಹೊರತು ಅಭಿವೃದ್ಧಿ ಎಂಬುದು ಇಂದಿಗೂ ಗಗನ ಕುಸುಮವಾಗಿದೆ. ರಸ್ತೆ ಅಭಿವೃದ್ಧಿ ಬಗ್ಗೆ ಹಲವಾರು ಸಭೆ, ಸರ್ವೆ, ಮಾತುಕತೆಗಳು ನಡೆದಿದ್ದರೂ ಅವೆಲ್ಲವೂ ಕಡತಗಳಿಗೆ ಮಾತ್ರ ಸೀಮಿತವಾಗಿವೆ. ಮುಖ್ಯವಾಗಿ ಈ ರಸ್ತೆ ಅಭಿವೃದ್ಧಿಗೆ ಅರಣ್ಯ ನೀತಿ ತೊಡಕಾಗಿದೆ. ಹಲವಾರು ಜಲಪಾತ, ಪ್ರವಾಸಿ ಕೇಂದ್ರಗಳು ಈ ರಸ್ತೆ ವ್ಯಾಪ್ತಿಯಲ್ಲಿವೆ. ಜತೆಗೆ ಇಲ್ಲಿ ಕಾಡಾನೆ ಸಹಿತ ಅನೇಕ ವನ್ಯಜೀವಿಗಳ ಓಡಾಟ ಇದೆ. ಸಾಕಷ್ಟು ಚರ್ಚೆಗಳು ನಡೆದರು ಅರಣ್ಯ ಇಲಾಖೆ ರಸ್ತೆ ಅಭಿವೃದ್ಧಿಪಡಿಸಲು ಇನ್ನು ಹಸಿರು ನಿಶಾನೆ ತೋರಿಲ್ಲ.ಶಾಸಕರ ಸಭೆ:

ಸುಮಾರು ಎರಡು ವರ್ಷಗಳ ಹಿಂದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಅವರ ನೇತೃತ್ವದಲ್ಲಿ ರಸ್ತೆ ಅಭಿವೃದ್ಧಿ ಬಗ್ಗೆ ಸಂಸೆಯಲ್ಲಿ ಸಭೆ ನಡೆದಿತ್ತು. ಈ ಸಭೆಯಲ್ಲಿ ವನ್ಯಜೀವಿ ವಿಭಾಗದ ಡಿಎಫ್ ಒ ಸಹಿತ ನಾನಾ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಸಾಕಷ್ಟು ಚರ್ಚೆಗಳ ಬಳಿಕ ರಸ್ತೆ ಅಭಿವೃದ್ಧಿ ಬಗ್ಗೆ ಭರವಸೆಯು ಸಿಕ್ಕಿತ್ತು. ಆದರೆ ಇದು ಸರ್ಕಾರದ ಮಟ್ಟದಲ್ಲಿ ಮುಂದುವರಿಯದ ಕಾರಣ ಯೋಜನೆ ಇಂದಿನವರೆಗೂ ನನೆಗುದಿಗೆ ಬಿದ್ದಿದೆ. ಹಲವು ಅಭಿವೃದ್ಧಿ:

ಕಳೆದ ಅವಧಿಯಲ್ಲಿ ಶಾಸಕ ಹರೀಶ್ ಪೂಂಜ ಮಲವಂತಿಗೆಯ ಎಳನೀರು ಪ್ರದೇಶಕ್ಕೆ ಸುಮಾರು 13 ಕೋಟಿ ರು.ಗಿಂತ ಅಧಿಕ ಅನುದಾನವನ್ನು ನೀಡಿದ್ದು, ರಸ್ತೆ ವ್ಯಾಪ್ತಿಯ ಕಂದಾಯ ವಿಭಾಗದಲ್ಲಿ 3 ಕಿ.ಮೀ. ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಬಂಗಾರಪಲಿಕೆಯಲ್ಲಿ ಕಿಂಡಿ ಅಣೆಕಟ್ಟು ಸಹಿತ ಸೇತುವೆ, ಎಳನೀರು ಜಲಪಾತದ ಬಳಿ ಸುಸಜ್ಜಿತ ಸೇತುವೆ, ಒಡ್ಡಿ ಎಂಬಲ್ಲಿ ಸಂಪರ್ಕ ಸೇತುವೆ, ಅಗತ್ಯ ಪ್ರದೇಶಗಳಲ್ಲಿ ತಡೆಗೋಡೆ ರಚನೆ, ಮೋರಿ ನಿರ್ಮಾಣ ಸೇರಿದಂತೆ ಹಲವಾರು ಕಾಮಗಾರಿಗಳು ನಡೆದಿದೆ. ಶಾಲೆ, ಅಂಗನವಾಡಿ ಅಭಿವೃದ್ಧಿಗೂ ಅನುದಾನ ಬಳಸಲಾಗಿದೆ. ಹತ್ತಿರದ ಸಂಪರ್ಕ:

ದಿಡುಪೆ-ಎಳನೀರು ರಸ್ತೆ ನಿರ್ಮಾಣಗೊಂಡರೆ ಸಂಸೆ ಕಡೆಯ ಜನರಿಗೆ ಧರ್ಮಸ್ಥಳ, ಬೆಳ್ತಂಗಡಿ ಮೊದಲಾದ ಪ್ರದೇಶಗಳು ಹಾಗೂ ಬೆಳ್ತಂಗಡಿ ಭಾಗದ ಜನರಿಗೆ ಕಳಸ, ಶೃಂಗೇರಿ, ಹೊರನಾಡು ಮೊದಲಾದ ಪ್ರದೇಶಗಳಿಗೆ ಪ್ರಯಾಣಿಸಲು ನೂರಾರು ಕಿ.ಮೀ. ಉಳಿತಾಯವಾಗುತ್ತದೆ. ಈ ರಸ್ತೆ ವ್ಯಾಪ್ತಿಯಲ್ಲಿರುವ ಹಲವಾರು ಜಲಪಾತ, ಪ್ರೇಕ್ಷಣೀಯ ಸ್ಥಳಗಳು ಅಭಿವೃದ್ಧಿ ಹೊಂದಿ ಪ್ರವಾಸೋದ್ಯಮ ಇನ್ನಷ್ಟು ಚಿಗುರಿಕೊಳ್ಳಲಿದೆ. ಎರಡು ಜಿಲ್ಲೆಗಳಲ್ಲಿರುವ ಅನೇಕ ಧಾರ್ಮಿಕ ಕೇಂದ್ರಗಳು ಇನ್ನಷ್ಟು ಹತ್ತಿರದ ಸಂಪರ್ಕ ಪಡೆಯಲಿವೆ. -------------------ದಿಡುಪೆ-ಎಳನೀರು ರಸ್ತೆ ಅಭಿವೃದ್ಧಿಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳ ಜತೆ ಸಭೆ ನಡೆಸಿ ಸೂಕ್ತ ಪ್ರಸ್ತಾವನೆ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಸಮನ್ವಯ ಸಾಧಿಸಿ ರಸ್ತೆ ಅಭಿವೃದ್ಧಿಗೆ ಬೇಕಾದ ಅಗತ್ಯ ಕಾರ್ಯ ಹಾಗೂ ‌ಪ್ರಾಧಿಕಾರಗಳಿಂದ ಅನುಮತಿ ಪಡೆಯುವ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗಿದೆ.

। ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ, ದ.ಕ.-----------------

ಈ ರಸ್ತೆ ಅಭಿವೃದ್ಧಿಯ ಕನಸು ಇನ್ನೂ ನನಸಾಗುವ ಹಂತ ತಲುಪಿಲ್ಲ. ತಾಲೂಕು ಕೇಂದ್ರ ಪಂಚಾಯಿತಿಗಳಿಗೆ ದ್ರಾವಿಡ ಪ್ರಾಣಾಯಾಮ ಮಾಡಬೇಕಾದ ನಮ್ಮ ಪರಿಸ್ಥಿತಿಗೆ ಈ ರಸ್ತೆ ಅಭಿವೃದ್ಧಿ ಮೂಲಕ ಮುಕ್ತಿ ಸಿಗಬೇಕಿದೆ. ಇದಕ್ಕಾಗಿ ಹಲವು ದಶಕಗಳಿಂದ ಕಾದು ಕುಳಿತಿದ್ದೇವೆ.

ಜಯರಾಮ್, ಸ್ಥಳೀಯ, ಎಳನೀರು.