ಬೆಂಗಳೂರು ಮೆಟ್ರೋ : 9.17 ಲಕ್ಷ ಪ್ರಯಾಣಿಕರೊಂದಿಗೆ ಹೊಸ ದಾಖಲೆ -ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ

| Published : Aug 16 2024, 01:49 AM IST / Updated: Aug 16 2024, 09:49 AM IST

ಬೆಂಗಳೂರು ಮೆಟ್ರೋ : 9.17 ಲಕ್ಷ ಪ್ರಯಾಣಿಕರೊಂದಿಗೆ ಹೊಸ ದಾಖಲೆ -ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಆಗಸ್ಟ್ 14 ರಂದು ಬೆಂಗಳೂರು ಮೆಟ್ರೋ 9.17 ಲಕ್ಷ ಪ್ರಯಾಣಿಕರನ್ನು ದಾಖಲಿಸಿದ್ದು, ಹಿಂದಿನ ದಾಖಲೆಯನ್ನು ಮುರಿದಿದೆ. ಹೊಸ ಮಾರ್ಗಗಳು ತೆರೆದುಕೊಳ್ಳುವುದರೊಂದಿಗೆ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

 ಬೆಂಗಳೂರು :  ನಮ್ಮ ಮೆಟ್ರೋ ಆ.14ರಂದು 9.17 ಲಕ್ಷ ಪ್ರಯಾಣಿಕರಿಗೆ ಸೇವೆ ಕಲ್ಪಿಸುವ ಮೂಲಕ ಹತ್ತು ದಿನಗಳ ಹಿಂದೆ ಸಾಧಿಸಿದ್ದ (ಆ.6ರಂದು 8.26 ಲಕ್ಷ) ದಾಖಲೆಯನ್ನು ಮೀರಿದೆ. ಶೀಘ್ರವೇ 10 ಲಕ್ಷ ಪ್ರಯಾಣಿಕರ ಮೈಲಿಗಲ್ಲು ಸ್ಥಾಪನೆಯ ನಿರೀಕ್ಷೆಯಿದೆ.

ಆಗಸ್ಟ್ 14ರಂದು ನಮ್ಮ ಮೆಟ್ರೋದ ಪೂರ್ವ-ಪಶ್ಚಿಮ ಕಾರಿಡಾರ್ ವೈಟ್‌ಫೀಲ್ಡ್‌ನಿಂದ ಚಲ್ಲಘಟ್ಟ ಟರ್ಮಿನಲ್‌ವರೆಗೆ ‘ನೇರಳೆ’ ಮಾರ್ಗದಲ್ಲಿ 4,43,343 ಜನ ಸಂಚರಿಸಿದ್ದಾರೆ. ಉತ್ತರ-ದಕ್ಷಿಣ ಕಾರಿಡಾರ್ ಉತ್ತರದಲ್ಲಿ ನಾಗಸಂದ್ರದಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ‘ಹಸಿರು’ ಮಾರ್ಗದಲ್ಲಿ 3,01,775 ಜನ ಸಂಚಾರ ಮಾಡಿದ್ದಾರೆ. ಮೆಜೆಸ್ಟಿಕ್‌ ಕೆಂಪೇಗೌಡ ಇಂಟರ್‌ಚೇಂಜ್‌ನಲ್ಲಿ 1,72,247 ಜನ ಪ್ರಯಾಣಿಸಿದ್ದಾರೆ. ಈ ಮೂಲಕ ಒಟ್ಟಾರೆ 9,17,365 ಜನ ಪ್ರಯಾಣಿಸಿದಂತಾಗಿದೆ.

ಕಳೆದ ಒಂದು ವಾರದ ಹಿಂದೆ 8 ಲಕ್ಷದ ಆಸುಪಾಸಿನಲ್ಲಿದ್ದ ನಿತ್ಯ ಪ್ರಯಾಣಿಸುವವರ ಸಂಖ್ಯೆ ಪ್ರಸಕ್ತ ವಾರ ಒಂದು ಲಕ್ಷ ಹೆಚ್ಚಳ ಕಂಡಿದೆ. ಈ ಮೂಲಕ ಹೊಸ ದಾಖಲೆಯಾಗಿದೆ. ಮೆಟ್ರೋ ಪ್ರಾರಂಭವಾದ 12 ವರ್ಷದಲ್ಲೇ ಬುಧವಾರ ಅತಿ ಹೆಚ್ಚು ಮಂದಿ ಮೆಟ್ರೋ ರೈಲುಗಳಲ್ಲಿ ಪ್ರಯಾಣ ಮಾಡಿದ್ದಾರೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ. ಈ ವರ್ಷ ಮೆಟ್ರೋದಲ್ಲಿ ಜನವರಿಯಲ್ಲಿ 7.48 ಲಕ್ಷ, ಫೆಬ್ರವರಿಯಲ್ಲಿ 7.05 ಲಕ್ಷ, ಮೇ 7.18 ಲಕ್ಷ ಪ್ರಯಾಣಿಕರು ಸಂಚರಿಸಿದ್ದರು.

ಸೆಪ್ಟೆಂಬರ್‌ ಅಂತ್ಯಕ್ಕೆ ಉದ್ಘಾಟನೆ ಆಗಲಿರುವ ಹಸಿರು ಮಾರ್ಗ ವಿಸ್ತರಿತ ನಾಗಸಂದ್ರ- ಮಾದವಾರ ಹಾಗೂ ವರ್ಷಾಂತ್ಯದ ವೇಳೆಗೆ ಜನಸಂಚಾರಕ್ಕೆ ಮುಕ್ತವಾಗಲಿರುವ ಆರ್‌.ವಿ.ರಸ್ತೆ- ಬೊಮ್ಮಸಂದ್ರ ಸಂಪರ್ಕಿಸುವ ಹಳದಿ ಮಾರ್ಗ ತೆರೆದುಕೊಂಡ ಬಳಿಕ ಮೆಟ್ರೋ ಪ್ರಯಾಣಿಕರ ಸಂಖ್ಯೆ 12-13 ಲಕ್ಷ ತಲುಪಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.