ಸಾರಾಂಶ
ಬೆಂಗಳೂರು : ಶುಕ್ರವಾರದ ವರಮಹಾಲಕ್ಷ್ಮಿ ಹಬ್ಬಕ್ಕೆ ನಗರ ಸಜ್ಜುಗೊಂಡಿದ್ದು, ಹೂವು ಹಣ್ಣುಗಳ ಬೆಲೆ ದುಪ್ಪಟ್ಟಾಗಿದ್ದರೂ ಜನತೆ ಮುಗಿಬಿದ್ದು ಖರೀದಿ ಮಾಡಿದ್ದಾರೆ.
ಹಬ್ಬಕ್ಕೆ ಅಗತ್ಯವಾದ ಲಕ್ಷ್ಮಿ ಮೂರ್ತಿಗಳನ್ನು ಜನರು ಈಗಾಗಲೇ ಖರೀದಿ ಮಾಡಿದ್ದು, ಮಂಟಪಕ್ಕಾಗಿ ಬಾಳೆ ಕಂದು, ಮಾವಿನಸೊಪ್ಪು, ಅಲಂಕಾರ ಸಾಮಗ್ರಿಗಳು, ಹೂವು ಹಣ್ಣುಗಳನ್ನು ಜನತೆ ಖರೀದಿ ಮಾಡಿದರು.
ಇಷ್ಟು ದಿನ ಮಾರುಕಟ್ಟೆಗೆ ಅಗತ್ಯದಷ್ಟು ಹೂವುಗಳ ಪೂರೈಕೆ ಆಗದ ಕಾರಣ ಹೂವುಗಳ ಬೆಲೆ ಏರಿಕೆಯಾಗಿತ್ತು. ಹಬ್ಬಕ್ಕಾಗಿ ಬೆಂಗಳೂರು ಗ್ರಾಮಾಂತರ, ತುಮಕೂರು, ಕುಣಿಗಲ್, ಶಿವಮೊಗ್ಗ ಸೇರಿ ಹಲವೆಡೆಗಳಿಂದ ಹೂವು ಬಂದಿದೆ. ಆದರೂ ಬೆಲೆ ಹೆಚ್ಚಾಗಿಯೇ ಇದೆ. ತರಕಾರಿ ದರ ಎಂದಿನಂತೆ ಇದ್ದು, ಹಣ್ಣುಗಳ ಬೆಲೆಯೂ ಹೆಚ್ಚಿತ್ತು ಎಂದು ವರ್ತಕರು ಹೇಳಿದರು.
ಹಬ್ಬದ ಹಿನ್ನೆಲೆಯಲ್ಲಿ ಕೆ.ಆರ್.ಮಾರುಕಟ್ಟೆಯಲ್ಲಿ ಗುರುವಾರವೂ ಗ್ರಾಹಕರಿಂದ ಗಿಜಿಗುಟ್ಟಿತು. ಯಶವಂತಪುರ, ಜಯನಗರ, ಮಲ್ಲೇಶ್ವರ, ವಿಜಯನಗರ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್ ಸೇರಿದಂತೆ ಎಲ್ಲ ಮಾರುಕಟ್ಟೆಗಳಲ್ಲೂ ಹಬ್ಬದ ಖರೀದಿ ಜೋರಾಗಿತ್ತು. ಮಾತ್ರವಲ್ಲದೆ, ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ, ಪಾದಚಾರಿ ಮಾರ್ಗಗಳಲ್ಲಿ ಹಳ್ಳಿಗಳಿಂದ ಬಂದ ರೈತರು ಮಾವಿನ ಎಲೆ , ಬಾಳೆಕಂದುಗಳನ್ನು ಮಾರಾಟ ಮಾಡಿದರು.
ದರ ದುಪ್ಪಟ್ಟು
ಹೂವುಗಳ ಬೆಲೆ ಕಳೆದ ವಾರಕ್ಕೆ ಹೋಲಿಸಿದರೆ ಹೆಚ್ಚಾಗಿದ್ದು, ಕನಕಾಂಬರ ಕೇಜಿಗೆ ₹4,000, ಮಲ್ಲಿಗೆ ₹1600, ಗುಲಾಬಿ ₹300, ಸೇವಂತಿಗೆ ₹250, ಸುಗಂಧರಾಜ ₹400 ಬೆಲೆಯಿತ್ತು. ಇನ್ನು, ಹಣ್ಣುಗಳು ಸೇಜು ಕೆಜಿಗೆ ₹200, ದಾಳಿಂಬೆ ₹100, ಏಲಕ್ಕಿ ಬಾಳೆ ₹120, ಸೀತಾಫಲ ಹಾಗೂ ಸಪೋಟಾ ₹100, ಅನಾನಸ್ ₹80ಕ್ಕೆ ಎರಡು ಮಾರಾಟವಾಯಿತು. ಬಾಳೆಕಂದು ಜೋಡಿಗೆ ₹80, ಮಾವಿನ ತೋರಣಕ್ಕೆ ₹20, 100 ವಿಳ್ಯದೆಲೆಗೆ ₹120 ಬೆಲೆಯಿತ್ತು.