ಬೆಳಗಾವಿ ಬ್ಯಾಂಕ್‌ಗೆ ಜಾರಕಿಹೊಳಿಬಣದ 9 ಮಂದಿ ಅವಿರೋಧ ಆಯ್ಕೆ

| Published : Oct 14 2025, 01:01 AM IST

ಬೆಳಗಾವಿ ಬ್ಯಾಂಕ್‌ಗೆ ಜಾರಕಿಹೊಳಿಬಣದ 9 ಮಂದಿ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತೀವ್ರ ಕುತೂಹಲ ಕೆರಳಿಸಿದ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಜಾರಕಿಹೊಳಿ ಪೆನಲ್‌ನಲ್ಲಿ ಗುರುತಿಸಿಕೊಂಡಿರುವ 9 ಜನರು ಸಹ ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ಜಾರಕಿಹೊಳಿ ಪೆನಲ್‌ ಬಿಡಿಸಿಸಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ತೀವ್ರ ಕುತೂಹಲ ಕೆರಳಿಸಿದ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳ ಚುನಾವಣೆಯಲ್ಲಿ 16 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಜಾರಕಿಹೊಳಿ ಪೆನಲ್‌ನಲ್ಲಿ ಗುರುತಿಸಿಕೊಂಡಿರುವ 9 ಜನರು ಸಹ ಅವಿರೋಧ ಆಯ್ಕೆಯಾಗಿದ್ದಾರೆ. ಈ ಮೂಲಕ ಜಾರಕಿಹೊಳಿ ಪೆನಲ್‌ ಬಿಡಿಸಿಸಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆಯಿದೆ.

ಬಿಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದ್ದ ಸೋಮವಾರ ಅಚ್ಚರಿಯ ಬೆಳವಣಿಗೆಯಲ್ಲಿ ಅಥಣಿ ಶಾಸಕ ಲಕ್ಷ್ಮಣ ಸವದಿ ಜೊತೆ ಗುರುತಿಸಿಕೊಂಡಿದ್ದ ಕಾಗವಾಡ ಶಾಸಕ ಭರಮಗೌಡ (ರಾಜು) ಕಾಗೆ ಅವರು ಜಾರಕಿಹೊಳಿ ಪೆನಲ್‌ಗೆ ಹಾರಿದ್ದಾರೆ. ಶಾಸಕ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಮಧ್ಯಸ್ಥಿಕೆ ವಹಿಸಿ, ರಾಜು ಕಾಗೆ ಅವರನ್ನು ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ಅವಿರೋಧ ಆಯ್ಕೆ ಮಾಡುವಲ್ಲಿ ಶ್ರಮಿಸಿದರು. ಶ್ರೀನಿವಾಸ ಪಾಟೀಲ ತಮ್ಮ ನಾಮಪತ್ರ ವಾಪಸ್‌ ಪಡೆದ ಹಿನ್ನೆಲೆಯಲ್ಲಿ ಕಾಗೆ ಅವರ ಆಯ್ಕೆ ಸುಗಮವಾಯಿತು.

ಅವಿರೋಧವಾಗಿ ಆಯ್ಕೆಯಾದವರು:

ಶಾಸಕ ಬಾಲಚಂದ್ರ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ಅಮರನಾಥ ಜಾರಕಿಹೊಳಿ (ಗೋಕಾಕ), ರಾಹುಲ್‌ ಜಾರಕಿಹೊಳಿ (ಬೆಳಗಾವಿ), ಮಾಜಿ ಶಾಸಕ ಅರವಿಂದ ಪಾಟೀಲ (ಖಾನಾಪುರ), ನೀಲಕಂಠ ಕಪ್ಪಲಗುದ್ದಿ (ಮೂಡಲಗಿ), ಸವದತ್ತಿ ಶಾಸಕ ವಿಶ್ವಾಸ ವೈದ್ಯ (ಯರಗಟ್ಟಿ), ವಿರುಪಾಕ್ಷಿ ಮಾಮನಿ (ಸವದತ್ತಿ), ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ (ಇತರೆ ಕ್ಷೇತ್ರ) ಹಾಗೂ ಸಚಿವ ಸತೀಶ ಜಾರಕಿಹೊಳಿ ಬಣದಲ್ಲಿ ಗುರುತಿಸಿಕೊಂಡಿರುವ ಶಾಸಕ ಭರಮಗೌಡ (ರಾಜು) ಕಾಗೆ (ಕಾಗವಾಡ) ಮತ್ತು ಶಾಸಕ ಗಣೇಶ ಹುಕ್ಕೇರಿ (ಚಿಕ್ಕೋಡಿ) ಅವರು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. 20 ಜನ ನಾಮಪತ್ರ ವಾಪಸ್‌:ರಾಮದುರ್ಗ ಶಾಸಕ ಅಶೋಕ ಪಟ್ಟಣ ಸೇರಿದಂತೆ 20 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ರಾಮದುರ್ಗ, ಬೈಲಹೊಂಗಲ, ಕಿತ್ತೂರು, ನಿಪ್ಪಾಣಿ, ಅಥಣಿ, ಹುಕ್ಕೇರಿ, ರಾಯಬಾಗ ತಾಲೂಕುಗಳಲ್ಲಿ ಅ.19 ರಂದು ಚುನಾವಣೆ ನಡೆಯಲಿದೆ. ಬಿಡಿಸಿಸಿ ಬ್ಯಾಂಕಿನ ಚುನಾವಣೆಯ ನಾಮಪತ್ರ ಮರಳಿ ಪಡೆಯುವ ಕೊನೆಯ ದಿನ ಶಾಸಕ ಅಶೋಕ್ ಪಟ್ಟಣ್ ತಮ್ಮ ನಾಮಪತ್ರವನ್ನು ಹಿಂದಕ್ಕೆ ಪಡೆದರು.ಚನ್ನರಾಜ್‌ಗೆ ಖುಲಾಯಿಸಿದ ಅದೃಷ್ಟ: ತಾವು ಡಿಸಿಸಿ ಬ್ಯಾಂಕ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕಣಕ್ಕಿಳಿಯುವ ಮುನ್ನವೇ ಸ್ಪಷ್ಟಪಡಿಸಿದ್ದ ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರಿಗೆ ಎರಡೇ ವಾರದಲ್ಲಿ ಅದೃಷ್ಟ ಖುಲಾಯಿಸಿದೆ. ಇತರೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚನ್ನರಾಜ ಹಟ್ಟಿಹೊಳಿ ಅವರು ಪ್ರತಿಸ್ಪರ್ಧಿಯಾಗಿದ್ದ ಇಬ್ಬರು ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ. ಇತರೆ ಕ್ಷೇತ್ರದಿಂದ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಪ್ರತಿಸ್ಪರ್ಥಿಯಾಗಿದ್ದ ಇಬ್ಬರು ಅಭ್ಯರ್ಥಿಗಳು ತಮ್ಮ ನಾಮಪತ್ರ ಹಿಂಪಡೆದ ಹಿನ್ನೆಲೆಯಲ್ಲಿ ಚನ್ನರಾಜ್‌ ಅವರು ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.