ತನ್ನ ಸ್ನೇಹಿತರ ಜತೆ ಪಾರ್ಟಿಗೆ ಹೋಗಿದ್ದಾಗ ಬಾರ್ ಆ್ಯಂಡ್ ರೆಸ್ಟೋರೆಂಟ್ ಶೌಚಾಲಯದಲ್ಲಿ ಕುಸಿದು ಬಿದ್ದು ಖಾಸಗಿ ಬ್ಯಾಂಕ್‌ನ ವ್ಯವಸ್ಥಾಪಕರೊಬ್ಬರು ಮೃತಪಟ್ಟಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು : ತನ್ನ ಸ್ನೇಹಿತರ ಜತೆ ಪಾರ್ಟಿಗೆ ಹೋಗಿದ್ದಾಗ ಬಾರ್ ಆ್ಯಂಡ್ ರೆಸ್ಟೋರೆಂಟ್ ಶೌಚಾಲಯದಲ್ಲಿ ಕುಸಿದು ಬಿದ್ದು ಖಾಸಗಿ ಬ್ಯಾಂಕ್‌ನ ವ್ಯವಸ್ಥಾಪಕರೊಬ್ಬರು ಮೃತಪಟ್ಟಿರುವ ಘಟನೆ ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉಲ್ಲಾಳದ ನಿವಾಸಿ ಮೇಘರಾಜ್‌ (32) ಮೃತ ದುರ್ದೈವಿ. ಆರ್.ಆರ್‌. ನಗರದ ಬಾರ್‌ ಆ್ಯಂಡ್ ರೆಸ್ಟೋರೆಂಟ್‌-1522ರಲ್ಲಿ ತನ್ನ ಮೂವರು ಸ್ನೇಹಿತರ ಜತೆ ಅವರು ಪಾರ್ಟಿಗೆ ಹೋಗಿದ್ದರು. ಊಟ ಮುಗಿಸಿ ಹೊರಡುವಾಗ ಶೌಚಕ್ಕೆ ತೆರಳಿದ್ದ ಮೇಘರಾಜ್ ಅವರು ಕುಸಿದು ಬಿದ್ದು ಅರೆ ಪ್ರಜ್ಞರಾಗಿದ್ದಾರೆ. ಕೂಡಲೇ ಸಮೀಪದ ಆಸ್ಪತ್ರೆಗೆ ಅವರನ್ನು ಸ್ನೇಹಿತರು ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಮೇಘರಾಜ್ ಅವರ ಸಾವು ಹೇಗೆ ಸಂಭವಿಸಿದೆ ಎಂಬುದು ಖಚಿತವಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬಳಿಕ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಬ್ಯಾಂಕ್‌ನಲ್ಲಿ ವ್ಯವಸ್ಥಾಪಕರಾಗಿದ್ದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮೇಘರಾಜ್ ಅವರು, ತನ್ನ ಕುಟುಂಬದ ಜತೆ ಉಲ್ಲಾಳದಲ್ಲಿ ನೆಲೆಸಿದ್ದರು. ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿ ಸ್ನೇಹಿತರು ಬಿಲ್ ಪಾವತಿಸುವಾಗ ಒಂದು ನಿಮಿಷ ಇರಿ ಎಂದು ಹೇಳಿ ಅವರು ಶೌಚಾಲಯಕ್ಕೆ ತೆರಳಿದ್ದರು. ಆದರೆ ತುಂಬಾ ಹೊತ್ತಾದರೂ ಬಾರದೆ ಹೋದಾಗ ಅ‍ವರನ್ನು ಹುಡುಕಿಕೊಂಡು ಶೌಚಾಲಯಕ್ಕೆ ಸ್ನೇಹಿತರು ಹೋಗಿದ್ದರು. ಆಗ ಅಲ್ಲಿ ಮೇಘರಾಜ್ ಕುಸಿದು ಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.