ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಶುಕ್ರವಾರ ಬೆಳಗ್ಗೆಯಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿಯ ಮನೆಯೊಂದ ಗೋಡೆ ಕುಸಿದು ಗಾಢ ನಿದ್ರೆಯಲ್ಲಿದ್ದ ಬಾಲಕನೋರ್ವ ಸ್ಥಳದಲ್ಲೇ ಸಾವಿಗೀಡಾಗಿದ್ದು, ಮತ್ತೋರ್ವ ಬಾಲಕ ಗಂಭೀರ ಗಾಯಗೊಂಡ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.ದರ್ಶನ ನಾಗಪ್ಪ ಲಾತೂರ (11) ಮೃತ ಬಾಲಕ. ಸಹೋದರ ಶ್ರೀಶೈಲ ನಾಗಪ್ಪ ಲಾತೂರ (8) ಗಂಭೀರ ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಲಕನ ತಾಯಿ ರೂಪಾ, ಸಹೋದರಿ ಪ್ರೀತಿ ಪ್ರಾಣಾಪಾಯದಿಂದ ಪಾರಾಗಿದ್ದು, ಬಾಲಕನ ತಂದೆ ನಾಗಪ್ಪ ಮನೆಯಲ್ಲಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತಂದೆ-ತಾಯಿ, ಸಹೋದರಿಯರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ದರ್ಶನ ಕಲಿಯುತ್ತಿದ್ದ ವಿವೇಕಾನಂದ ಶಾಲೆಯ ಶಿಕ್ಷಕಿಯರು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಾವಂತ ವಿದ್ಯಾರ್ಥಿಯ ದುರಂತ ಸಾವಿಗೆ ಕಂಬನಿ ಮಿಡಿದರು.
ಶಾಸಕ ಸಿದ್ದು ಸವದಿ ಭೇಟಿ, ಪರಿಹಾರ ಭರವಸೆ:ತೇರದಾಳ ಶಾಸಕ ಸಿದ್ದು ಸವದಿ ಶನಿವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಶಿಥಿಲಾವಸ್ಥೆಯಲ್ಲಿರುವ ಮನೆ ಕಂಡು, ಸೂರಿಲ್ಲದವರಿಗೆ ಮತ್ತು ಶಿಥಿಲಗೊಂಡ ಮನೆಗಳ ದುರುಸ್ತಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉಚಿತ ಮನೆ ಕಟ್ಟಿಸುವ ಯೋಜನೆ ಜಾರಿಗೊಳಿಸಿವೆ. ಎಷ್ಟೋ ಪರಿವಾರಗಳಿಗೆ ಮಾಹಿತಿ ಕೊರತೆ ಇದೆ. ಯೋಜನೆಯ ಲಾಭ ಪಡೆದು ಮನೆ ದುರುಸ್ತಿ ಮಾಡಿಕೊಂಡಿದ್ದರೆ ಬಾಲಕನ ಅಮೂಲ್ಯ ಜೀವ ಉಳಿಸಬಹುದಾಗಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ಶಾಸಕರು, ಮುಖಂಡರು ಸೇರಿ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಶೈಲನ ಆರೋಗ್ಯ ವಿಚಾರಿಸಿದರು.
ಮೃತ ಬಾಲಕನ ಕುಟುಂಬಕ್ಕೆ ₹ ೫ ಲಕ್ಷ ಮತ್ತು ಮನೆ ವಿಕೋಪ ನಿಧಿಯಿಂದ ₹೧.೨೦ ಲಕ್ಷ ಸರ್ಕಾರದಿಂದ ಮಂಜೂರಿ ಮಾಡಿಸಿ ಸೋಮವಾರ ಅಥವಾ ಮಂಗಳವಾರ ಚೆಕ್ ನೀಡಲಾಗುವುದು ಎಂದು ಭರವಸೆ ನೀಡಿದರು. ಆಶ್ರಯ ಯೋಜನೆಯಡಿ ಮನೆ ಹಾಗೂ ಸರ್ಕಾರದಿಂದ ಸಿಗಬೇಕಾದ ಇತರೆ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.ಪುರಸಭೆ ಸದಸ್ಯ ಶೇಖರ ಅಂಗಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಮಹಾಲಿಂಗಪ್ಪ ಲಾತೂರ, ಶಿವಾನಂದ ಅಂಗಡಿ, ನ್ಯಾಯವಾದಿ ವಿಷ್ಣು ಲಾತೂರ, ಮಹೇಶ ಜಿಡ್ಡಿಮನಿ, ಮುತ್ತಪ್ಪ ಲಾತೂರ, ನಂದು ಲಾತೂರ, ಶಂಕರ ಮುಗಳಖೋಡ, ಬಸವರಾಜ ಮಡಿವಾಳ ಸೇರಿದಂತೆ ರಬಕವಿ ಬನಹಟ್ಟಿ ತಾಲೂಕ ದಂಡಾಧಿಕಾರಿ ಗಿರೀಶ ಸ್ವಾದಿ, ಮುಖ್ಯಾಧಿಕಾರಿ ನಾಮದೇವ ಲಮಾಣಿ,ತಲಾಠಿ ಸೌರಭ ಮೇತ್ರಿ, ಹಿರಯ ಆರೋಗ್ಯ ನಿರೀಕ್ಷಕರು ಎಂ.ಎಸ್. ಮುಗಳಖೋಡ, ಪಿಎಸ್‌ಐ ಕಿರಣ ಸತ್ತಿಗೇರಿ ಮತ್ತು ಸಿಬ್ಬಂದಿ ಇದ್ದರು.