ಕಲುಷಿತ ನೀರು ಸೇವಿಸಿ ಒಂದೇ ಕುಟುಂಬದ 9 ಜನ ಅಸ್ವಸ್ಥ

| Published : Apr 02 2025, 01:03 AM IST

ಸಾರಾಂಶ

ಸೋಮವಾರ ಸಂಜೆ ಏಕಾಏಕಿ ವಾಂತಿಬೇಧಿ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಗಂಗಾವತಿ ತಾಲೂಕಾಸ್ಪತ್ರೆಗೆ ತೆರಳಿದ್ದಾರೆ.

ಕನಕಗಿರಿ: ಒಂದೇ ಕುಟುಂಬದ ೯ ಜನ ಅಸ್ವಸ್ಥರಾದ ಘಟನೆ ತಾಲೂಕಿನ ಕೆ.ಮಲ್ಲಾಪೂರ ಗ್ರಾಮದಲ್ಲಿ ಸೋಮವಾರ ನಡೆದಿದ್ದು ಕಲುಷಿತ ನೀರು ಸೇವೆನೆಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕರಡೋಣ ಗ್ರಾಪಂ ವ್ಯಾಪ್ತಿಯ ಕೆ.ಮಲ್ಲಾಪುರ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಲ್ಲಲ್ಲಿ ಸೋರಿಕೆಯಾಗುತ್ತಿದೆ, ಸಿಹಿ ನೀರು, ಬಳಸುವ ನೀರು ಎರಡನ್ನೂ ಮಿಶ್ರಿತಗೊಳಿಸಿ ಪೂರೈಸಲಾಗುತ್ತಿದೆ. ಗ್ರಾಮದ ಗುಡ್ಡಕ್ಕೆ ಹೊಂದಿಕೊಂಡಿರುವ ಈ ಪ್ರದೇಶಕ್ಕೆ ಪ್ರತ್ಯೇಕ ಪೈಪ್‌ಲೈನ್‌ ಮೂಲಕ ನೀರು ಬಿಡಲಾಗುತ್ತಿದ್ದು ಇದರಿಂದಾಗಿಯೇ 9 ಜನರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸೋಮವಾರ ಸಂಜೆ ಏಕಾಏಕಿ ವಾಂತಿಬೇಧಿ ಕಾಣಿಸಿಕೊಂಡಿದ್ದು, ಚಿಕಿತ್ಸೆಗಾಗಿ ಗಂಗಾವತಿ ತಾಲೂಕಾಸ್ಪತ್ರೆಗೆ ತೆರಳಿದ್ದಾರೆ. ಮನೆಯ ಆಹಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಆದರೆ, ಅಸ್ವಸ್ಥರಾದವರು ತಮ್ಮ ಕಾಲನಿಗೆ ಕಲುಷಿತ ನೀರು ಸರಬರಾಜು ಆಗಿದ್ದರಿಂದ ಈ ಸಮಸ್ಯೆಯಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಮುದಿಯಪ್ಪ, ಲಕ್ಷ್ಮೀದೇವಿ, ದೊಡ್ಡಮ್ಮ, ಪಾರ್ವತಮ್ಮ, ಬಸವರಾಜ, ಹನುಮೇಶಮ್ಮ, ಮಹೇಂದ್ರ, ಮಾರುತಿ, ಅಭಿನವ ಅಸ್ವಸ್ಥಗೊಂಡಿದ್ದಾರೆ.

ಪ್ರತ್ಯೇಕ ಸಮಯದಲ್ಲಿ ನೀರು ಸರಬರಾಜು ಮಾಡಲು ಮನವಿ ಮಾಡಿದರೂ ಪಿಡಿಒ ಸ್ಪಂದಿಸಿಲ್ಲ. ಗ್ರಾಮದ ಒಂದೆರೆಡು ಕಡೆಗಳಲ್ಲಿ ನೀರು ಸರಬರಾಜು ಆಗುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿತನ ತೋರುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈಗಾಗಲೇ ಅಸ್ವಸ್ಥರಾಗಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಬೇಕು ಎಂದು ರೈತ ಮುಖಂಡ ಸೋಮನಾಥ ನಾಯಕ ಆಗ್ರಹಿಸಿದ್ದಾರೆ.

ಕೆ. ಮಲ್ಲಾಪೂರ ಗ್ರಾಮದ ೯ ಜನರು ಕಲುಷಿತ ಆಹಾರ, ನೀರು ಸೇವಿಸಿದ್ದರಿಂದ ತೀವ್ರ ಅಸ್ವಸ್ಥರಾಗಿದ ಹಿನ್ನೆಲೆಯಲ್ಲಿ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆ ಕೊಡಿಸಲು ಗಂಗಾವತಿಗೆ ಕಳುಹಿಸಿ ಕೊಡಲಾಗಿದೆ ಎಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ಪವನ್ ಅರವಟಗಿಮಠ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.