ಬಿಪಿಎಲ್ ಕಾರ್ಡ್‌ಗೆ ಕಾಯುತ್ತಿವೆ 9 ಸಾವಿರ ಕುಟುಂಬ

| Published : Jan 30 2024, 02:03 AM IST

ಸಾರಾಂಶ

ತುರ್ತು ಆರೋಗ್ಯ ಸಂಬಂಧ ನೀಡುವ ಪಡಿತರ ಕಾರ್ಡ್‌ಗಳನ್ನು ಹೊರತುಪಡಿಸಿ 2021- 22ರಿಂದ ಕಾರ್ಡ್ ವಿತರಣೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಬಿಪಿಎಲ್ ಕಾರ್ಡ್‌ಗೆಂದು ಸಲ್ಲಿಸಿದ ಅರ್ಜಿಗಳ ಸಂಖ್ಯೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿದೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಆರ್ಥಿಕವಾಗಿ ಅತ್ಯಂತ ಹಿಂದುಳಿದ ಕುಟುಂಬಗಳಿಗೆ ಆಹಾರ ಮತ್ತು ಆರೋಗ್ಯ ಭದ್ರತೆ ಒದಗಿಸುವ

ಬಿಪಿಎಲ್‌ ಕಾರ್ಡ್‌ಗಳಿಗಾಗಿ ಜಿಲ್ಲೆಯ ಸಾವಿರಾರು ಕುಟುಂಬ ಎದುರು ನೋಡುತ್ತಿವೆ!

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆ ಜಾರಿಗೊಳಿಸಿದ ಬಳಿಕ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕಾರ್ಡ್‌ಗಳಿಗೆ ಮತ್ತಷ್ಟು ಬೇಡಿಕೆ ಬಂದಿದ್ದು, ಸರ್ಕಾರದ ವಿವಿಧ ಯೋಜನೆಗಳ ಬಳಕೆ ಸೇರಿದಂತೆ ಮಾಸಿಕ ಪಡಿತರಕ್ಕಾಗಿ ಬಿಪಿಎಲ್ ಕುಟುಂಬಗಳು, ತೀವ್ರ ಸಮಸ್ಯೆ ಎದುರಿಸುತ್ತಿವೆ.

ತುರ್ತು ಆರೋಗ್ಯ ಸಂಬಂಧ ನೀಡುವ ಪಡಿತರ ಕಾರ್ಡ್‌ಗಳನ್ನು ಹೊರತುಪಡಿಸಿ 2021- 22ರಿಂದ ಕಾರ್ಡ್ ವಿತರಣೆ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಬಿಪಿಎಲ್ ಕಾರ್ಡ್‌ಗೆಂದು ಸಲ್ಲಿಸಿದ ಅರ್ಜಿಗಳ ಸಂಖ್ಯೆ ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿದೆ.

9376 ಅರ್ಜಿಗಳು ಸಲ್ಲಿಕೆ:

2018ರ ಬಳಿಕ ಈವರೆಗೆ ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್‌ಗಾಗಿ ಬರೋಬ್ಬರಿ 9376 ಜನರು ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ ಬಹುತೇಕ ಅರ್ಜಿಗಳನ್ನು ಪರಿಶೀಲಿಸಿ, ಅನುಮೋದನೆ ಸಿದ್ಧಪಡಿಸಿಕೊಳ್ಳಲಾಗಿದೆ. 2018ರಲ್ಲಿ 13875 ಅರ್ಜಿಗಳ ಸಲ್ಲಿಕೆಯಾಗಿದ್ದವು. ಈ ಪೈಕಿ 36 ಅರ್ಜಿಗಳು ಮಾತ್ರ ವಿಲೇವಾರಿಯಾಗದೆ ಉಳಿದಿದ್ದು, ಉಳಿದ 13839 ಅರ್ಜಿಗಳು ಅನುಮೋದಿಸಲಾಗಿದೆ. 2019ರಲ್ಲಿ 8799 ಅರ್ಜಿ ಸಲ್ಲಿಕೆಯಲ್ಲಿ 8529 ಅರ್ಜಿಗಳು ವಿಲೇವಾರಿಯಾಗಿದ್ದು, 270 ಮಾತ್ರ ಬಾಕಿ ಉಳಿದಿವೆ.

2020- 21ರಲ್ಲಿ ಸಲ್ಲಿಕೆಯಾದ 21981 ಅರ್ಜಿಗಳ ಪೈಕಿ 12911 ವಿಲೇವಾರಿಯಾಗಿ, 9070 ಬಾಕಿಯಿವೆ. ಈವರೆಗೆ ಒಟ್ಟು 9376 ಅರ್ಜಿಗಳು ಬಾಕಿ ಉಳಿದಂತಾಗಿದೆ. 2021- 22 ಹಾಗೂ 2022- 23ನೇ ಸಾಲಿನಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿಲ್ಲ. ಹೀಗಾಗಿ ಬಾಕಿಯಿರುವ ಅರ್ಜಿಗಳ ಅರ್ಹ ಫಲಾನುಭವಿಗಳು ಕಾರ್ಡ್‌ಗಾಗಿ ಎದುರು ನೋಡುತ್ತಿದ್ದಾರೆ.

ಸಚಿವ ನೀಡಿದ್ದ ಭರವಸೆ ಹುಸಿ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಒಂದು ತಿಂಗಳೊಳಗೆ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡುವುದಾಗಿ 2023ರ ಆ. 4ರಂದು ಭರವಸೆ ನೀಡಿದ್ದರು. ಇದರಿಂದ ಕಾರ್ಡ್‌ಗೆಂದು ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳು ಸಂತಸಗೊಂಡಿದ್ದರು. ಆದರೆ, ಸರ್ಕಾರ ನಾನಾ ಕಾರಣಗೊಳನ್ನೊಡ್ಡಿ ಪಡಿತರ ಚೀಟಿ ವಿತರಣೆಯನ್ನು ವಿಳಂಬ ಮಾಡುತ್ತಲೇ ಬಂದಿದೆ. ಸರ್ಕಾರ ಯಾವಾಗ ಪಡಿತರ ಚೀಟಿ ವಿತರಿಸುತ್ತದೆ ಎಂಬುದು ಇಲಾಖೆ ಅಧಿಕಾರಿಗಳು ಸಹ ಗೊತ್ತಿಲ್ಲವಾದ್ದರಿಂದ ಕಾರ್ಡ್ ಕೇಳಿಕೊಂಡು ನಿತ್ಯ ಇಲಾಖೆಗೆ ಬರುವ ಜನರಿಗೆ ಖಚಿತ ಮಾಹಿತಿ ಇಲ್ಲದೆ ತೊಳಲಾಟ ಅನುಭವಿಸುವಂತಾಗಿದೆ.

ಬಿಪಿಎಲ್ ಕಾರ್ಡ್ ದಾರರಿಗೆ ಇರುವ ಸೌಲಭ್ಯಗಳು

ನಿರ್ದಿಷ್ಟ ಆದಾಯ ಮಿತಿಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರ ನೀಡುವ ಗುರುತಿನ ಚೀಟಿಯೇ ಬಿಪಿಎಲ್.

ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬ ಪ್ರತಿ ಸದಸ್ಯನಿಗೆ 5 ಕೆಜಿ ಅಕ್ಕಿ ನೀಡಲಾಗುತ್ತದೆ. ಅದರಂತೆ ಕಾರ್ಡ್ ಇರುವ ಕುಟುಂಬ ಎಲ್ಲ ಸದಸ್ಯರಿಗೆ ಅಕ್ಕಿ ಹಾಗೂ ಕೆಜಿಗೆ ₹34 ಹಣ ದೊರೆಯುತ್ತದೆ. (ಕುಟುಂಬದ ಒಟ್ಟು ಅಕ್ಕಿಯ ಪ್ರಮಾಣದ ಅರ್ಧದಷ್ಟು ಹಣ ಪಾವತಿಯಾಗುತ್ತದೆ) ಇನ್ನು ಭಾಗ್ಯಲಕ್ಷ್ಮಿ, ಗೃಹಲಕ್ಷ್ಮಿ, ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಸಂಪರ್ಕ, ಆರೋಗ್ಯ ಕಾರ್ಡ್ (ಆಯುಷ್ಮಾನ್ ಕಾರ್ಡ್ ಬಳಸಿ ₹5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು)

ದುರ್ಬಲ ಕುಟುಂಬಗಳಿಗೆ ಸುರಕ್ಷತಾ ಜಾಲವನ್ನು ಒದಗಿಸುವುದು ಹಾಗೂ ಅವರ ಮೂಲ ಅಗತ್ಯಗಳನ್ನು ಪೂರೈಸುವುದನ್ನು ಖಚಿತಪಡಿಸಿಕೊಳ್ಳುವುದು ಬಿಪಿಎಲ್ ಕಾರ್ಡ್ ಯೋಜನೆ ಪ್ರಾಥಮಿಕ ಉದ್ದೇಶವಾಗಿದೆ.

ಕ್ರಮಕ್ಕೆ ಆಗ್ರಹ: ಬಿಪಿಎಲ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಎರಡು ವರ್ಷ ಮೇಲಾಯಿತು. ಈವರೆಗೆ ಕಾರ್ಡ್ ಬಂದಿಲ್ಲ. ನಿತ್ಯ ಕಚೇರಿಗೆ ಅಲೆದು ಸಾಕಾಗಿ ಹೋಗಿದೆ. ಬರಗಾಲ ಪರಿಸ್ಥಿತಿಯಲ್ಲಿ ಅಕ್ಕಿ ಸಿಕ್ಕರೆ ಬಡವರಿಗೆ ಅನುಕೂಲವಾಗುತ್ತದೆ. ಸರ್ಕಾರ ಕೂಡಲೇ ಕಾರ್ಡ್ ವಿತರಣೆಗೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರಾದ ಅಂಜಿನಮ್ಮ ಹಾಗೂ ಹನುಮಕ್ಕ ಆಗ್ರಹಿಸಿದ್ದಾರೆ.

ಬಿಪಿಎಲ್ ಕಾರ್ಡ್‌ಗೆ ಅರ್ಜಿದಾರರ ಸಂಖ್ಯೆ

ಬಳ್ಳಾರಿ ತಾಲೂಕು 3378

ಸಂಡೂರು ತಾಲೂಕು 1641

ಸಿರುಗುಪ್ಪ ತಾಲೂಕು 2308

ಕುರುಗೋಡು ತಾಲೂಕು 1166

ಕಂಪ್ಲಿ ತಾಲೂಕು 883

ಒಟ್ಟು 9376