ಹರಿಹರ ತಾಲೂಕು: ಭಾನುವಾರವರೆಗೆ ಶೇ.90 ಗಣತಿ ಸಾಧನೆ

| Published : Oct 08 2025, 01:01 AM IST

ಸಾರಾಂಶ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದಿನದಿಂದ ದಿನಕ್ಕೆ ಚುರುಕುಗೊಂಡು ವೇಗ ಪಡೆದಿದೆ. ಭಾನುವಾರದ ಅಂತ್ಯಕ್ಕೆ ತಾಲೂಕಿನಾದ್ಯಂತ ಶೇ.90ರಷ್ಟು ಗಣತಿ ಕಾರ್ಯ ಆಗಿದೆ ಎಂದು ತಹಸೀಲ್ದಾರ್ ಕೆ.ಎಂ. ಗುರು ಬಸವರಾಜ್ ಹರಿಹರದಲ್ಲಿ ಹೇಳಿದ್ದಾರೆ.

- ತೊಂದರೆಗಳ ಮಾಹಿತಿ ನೀಡಿದಲ್ಲಿ ಪರಿಹಾರ ಸಾಧ್ಯ: ತಹಸೀಲ್ದಾರ್‌ ಗುರುಬಸವರಾಜ್‌

- - -

ಕನ್ನಡಪ್ರಭ ವಾರ್ತೆ ಹರಿಹರ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದಿನದಿಂದ ದಿನಕ್ಕೆ ಚುರುಕುಗೊಂಡು ವೇಗ ಪಡೆದಿದೆ. ಭಾನುವಾರದ ಅಂತ್ಯಕ್ಕೆ ತಾಲೂಕಿನಾದ್ಯಂತ ಶೇ.90ರಷ್ಟು ಗಣತಿ ಕಾರ್ಯ ಆಗಿದೆ ಎಂದು ತಹಸೀಲ್ದಾರ್ ಕೆ.ಎಂ. ಗುರು ಬಸವರಾಜ್ ಹೇಳಿದರು.

ನಗರದ ಮುರ್ಕಲ್ ಕಾಂಪೌಂಡ್, ಮರಾಠ ಗಲ್ಲಿ, ಕುರುಬರ ಬೀದಿ, ಹಳ್ಳದ ಕೇರಿ, ಹೈಸ್ಕೂಲ್ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ಸೋಮವಾರ ತೆರಳಿ ಗಣತಿ ಕಾರ್ಯ ಪರಿವೀಕ್ಷಿಸಿ ಅವರು ಮಾತನಾಡಿದರು. ಸರ್ಕಾರದ ಆದೇಶದ ಅನ್ವಯ ಗಣತಿಗೆ ಅ.7 ಕೊನೆಯ ದಿನವಾಗಿದೆ. ಇಂದು ಹಾಗೂ ನಾಳೆ ಎರಡು ದಿನಗಳ ಕಾಲಾವಕಾಶ ಇದೆ. ನಿಗದಿತ ಸಮಯದಲ್ಲಿ ಗಣತಿ ಕಾರ್ಯ ಸಂಪೂರ್ಣ ಆಗುವ ಭರವಸೆ ವ್ಯಕ್ತ ಪಡಿಸಿದರು.

ಬಿಡುವುಲ್ಲದೇ ಗಣತಿ ಕಾರ್ಯ ನಡೆಸುತ್ತಿರುವ ಶಿಕ್ಷಕರು ಹಾಗೂ ನಗರಸಭೆ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಯೊಂದಿಗೆ ತಾಲೂಕು ಆಡಳಿತ ನಿರಂತರ ಸಂಪರ್ಕದಲ್ಲಿದೆ. ಕ್ಷಣಕ್ಷಣಕ್ಕೂ ಸಮೀಕ್ಷೆ ಕಾರ್ಯ ಪರಿಶೀಲಿಸಿ ಅವರಿಗೆ ಉತ್ತೇಜನ ನೀಡುವ ಕಾರ್ಯವಾಗಿದೆ ಎಂದರು.

ಪ್ರತಿಯೊಬ್ಬ ಗಣತಿಕಾರರು ಪ್ರಾಮಾಣಿಕವಾಗಿ ಪ್ರತಿ ಮನೆಮನೆಗೂ ಭೇಟಿ ನೀಡಿ, ಕುಟುಂಬದ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಸರ್ಕಾರಕ್ಕೆ ನೀಡುವ ಜವಾಬ್ದಾರಿ ಇದೆ. ಜನಗಣತಿ ಕಾರ್ಯದಲ್ಲಿ ಆಗುವ ತೊಂದರೆಗಳ ಕುರಿತು ನೀವು ಮುಕ್ತವಾಗಿ ತಿಳಿಸಿ, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಈಗಾಗಲೇ ಹರಿಹರ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಗಣತಿದಾರರು ಮನೆ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ನಾಗರೀಕರು ತಮ್ಮ ಕುಟುಂಬಗಳ ಸಂಪೂರ್ಣ ಮಾಹಿತಿ ನೀಡಬೇಕೆಂದು ಮನವಿ ಮಾಡಿದರು.

ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿ ಎಚ್.ಜಿ. ಹೇಮಂತ್ ಕುಮಾರ್, ರಾಜಸ್ವ ನಿರೀಕ್ಷಕ ಸಮೀರ್ ಅಹ್ಮದ್, ನಗರ ಸಭೆ ಅಧಿಕಾರಿ ಶಿಕ್ಷಕ ವರ್ಗ ಗಣತಿದಾರರು ಸಮೀಕ್ಷೆ ಕಾರ್ಯದಲ್ಲಿ ತೊಡಗಿದ್ದರು.

- - -

(ಕೋಟ್‌) ಸಾರ್ವಜನಿಕರು ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಸಹಕಾರ ನೀಡುವ ಮೂಲಕ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಕಾರ್ಯ ಯಶಸ್ವಿಯಾಗಿಸಬೇಕು. ಗಣತಿ ಕಾರ್ಯ ವಿಳಂಬ ಆಗಬಾರದು ಎಂಬ ನಿಟ್ಟಿನಲ್ಲಿ ಶಿಕ್ಷಕರು ಸೇರಿದಂತೆ ತಾಲೂಕುಮಟ್ಟದ ಎಲ್ಲ ಅಧಿಕಾರಿ ಸಿಬ್ಬಂದಿಯನ್ನು ಗಣತಿ ಕಾರ್ಯಕ್ಕೆ ನಿಯೋಜಿಸಲಾಗಿದೆ.

- ಕೆ.ಎಂ. ಗುರು ಬಸವರಾಜ, ತಹಸೀಲ್ದಾರ್‌.

- - -

-06HRR.01:

ಹರಿಹರದ ಮುರ್ಕಲ್ ಕಾಂಪೌಂಡ್, ಮರಾಠ ಗಲ್ಲಿ, ಕುರುಬರ ಬೀದಿ, ಹಳ್ಳದ ಕೇರಿ, ಹೈಸ್ಕೂಲ್ ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಿಗೆ ತಹಸೀಲ್ದಾರ್ ಕೆ.ಎಂ. ಗುರು ಬಸವರಾಜ್ ಸೋಮವಾರ ತೆರಳಿ ಗಣತಿ ಸಭೆ ನಡೆಸಗಣತಿ ಕಾರ್ಯವನ್ನು ಪರಿವೀಕ್ಷಿಸಿ ಮಾತನಾಡಿದರು.