ಕರಾವಳಿ ಭಾಗದಲ್ಲಿ ಹೊಸ ತುಳು ಸಿನಿಮಾ “90 ಎಂಎಲ್” ಅದ್ಧೂರಿಯಾಗಿ ತೆರೆ ಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಎಂದು ಚಿತ್ರತಂಡ ಹೇಳಿದೆ.

ಉಡುಪಿ: ಕರಾವಳಿ ಭಾಗದಲ್ಲಿ ಹೊಸ ತುಳು ಸಿನಿಮಾ “90 ಎಂಎಲ್” ಅದ್ಧೂರಿಯಾಗಿ ತೆರೆ ಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ ಎಂದು ಚಿತ್ರತಂಡ ಹೇಳಿದೆ.ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ನಟ ವಿನೀತ್ ಕುಮಾರ್, ಈ ಸಿನಿಮಾದಲ್ಲಿ ಅಶ್ಲೀಲತೆ ಅಥವಾ ನೆಗೆಟಿವಿಟಿಗೆ ಅವಕಾಶ ನೀಡದೆ, ಕುಟುಂಬ ಸಮೇತವಾಗಿ ನೋಡಬಹುದಾದ ಹಾಸ್ಯಭರಿತ ಮನರಂಜನಾ ಕಥೆಯನ್ನು ನೀಡಿದ್ದೇವೆ ಎಂದು ಹೇಳಿದರು.

ನಿರ್ದೇಶಕ ರಂಜಿತ್ ಸಿ. ಬಜಾಲ್ ಮಾತನಾಡಿ, ಈ ಚಿತ್ರದಲ್ಲಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಹಾಸ್ಯ ಮತ್ತು ಮನರಂಜನೆಯೊಂದಿಗೆ ಉತ್ತಮ ಕಥೆಯನ್ನು ನೀಡಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಯ ಸುಂದರ ಪ್ರದೇಶಗಳಲ್ಲಿ ಈ ಸಿನಿಮಾವನ್ನು ಚಿತ್ರೀಕರಿಸಲಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ನಟಿ ರುಹಾನಿ ಶೆಟ್ಟಿ ಹಾಗೂ ನಟ ರೋಶನ್ ಶೆಟ್ಟಿ ಉಪಸ್ಥಿತರಿದ್ದರು.

ಡಿಡಿ ಪ್ರೊಡಕ್ಷನ್ ಲಾಂಛನದಲ್ಲಿ ಡೋಲ್ಪಿ ಡಿಸೋಜ ನಿರ್ಮಿಸಿರುವ ಚಿತ್ರದಲ್ಲಿ ವಿನೀತ್ ಕುಮಾರ್ ಹಾಗೂ ರುಹಾನಿ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದು, ನವೀನ್ ಡಿ. ಪಡೀಲ್, ಅರವಿಂದ ಬೋಳಾರ್, ಉಮೇಶ್ ಮಿಜಾರ್, ದೀಪಕ್ ರೈ ಪಾಣಾಜೆ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.

ಪ್ರಸ್ತುತ ಮಂಗಳೂರು, ಉಡುಪಿ, ಪುತ್ತೂರು, ಬೆಳ್ತಂಗಡಿ, ಸುರತ್ಕಲ್, ಪಡುಬಿದ್ರೆ, ಕಾರ್ಕಳ ಹಾಗೂ ದೇರಳಕಟ್ಟೆ ಸೇರಿದಂತೆ ಕರಾವಳಿಯ ಪ್ರಮುಖ ಕೇಂದ್ರಗಳ ಚಿತ್ರಮಂದಿರಗಳಲ್ಲಿ ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಉಡುಪಿಯ ಕಲ್ಪನಾ, ಭಾರತ್ ಹಾಗೂ ಮಣಿಪಾಲದಲ್ಲೂ ಚಿತ್ರ ಬಿಡುಗಡೆಯಾಗಿದೆ.