ತುಂಗಭದ್ರಾ ಜಲಾಶಯದಿಂದ 90 ಸಾವಿರ ಕ್ಯುಸೆಕ್ ನೀರು ನದಿಗೆ

| Published : Aug 18 2025, 12:00 AM IST

ಸಾರಾಂಶ

ತುಂಗಭದ್ರಾ ಜಲಾಶಯದಿಂದ ನದಿಗೆ 1.15 ಲಕ್ಷ ಸಾವಿರ ಕ್ಯುಸೆಕ್ ನೀರು ನದಿಗೆ ಬಿಡುವ ಸಾಧ್ಯತೆ ಇದೆ.

ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಲು ತುಂಗಭದ್ರಾ ಮಂಡಳಿ ಸಂದೇಶ

ಕನ್ನಡಪ್ರಭ ವಾರ್ತೆ ಹೊಸಪೇಟೆ

ತುಂಗಭದ್ರಾ ಜಲಾಶಯದಿಂದ ನದಿಗೆ 1.15 ಲಕ್ಷ ಸಾವಿರ ಕ್ಯುಸೆಕ್ ನೀರು ನದಿಗೆ ಬಿಡುವ ಸಾಧ್ಯತೆ ಇದೆ. ಈಗಾಗಲೇ ನದಿಗೆ 90,124 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ನದಿಪಾತ್ರದ ಜನರು ಎಚ್ಚರಿಕೆಯಿಂದ ಇರಲು ತುಂಗಭದ್ರಾ ಮಂಡಳಿ ಎಚ್ಚರಿಕೆ ಸಂದೇಶ ರವಾನಿಸಿದೆ.ಜಲಾಶಯದ ಮೇಲ್ಭಾಗದಲ್ಲಿ ಭಾರೀ ಮಳೆ ಆಗಿದ್ದು, ತುಂಗಾ ಜಲಾಶಯದಿಂದ 75 ಸಾವಿರ ಕ್ಯುಸೆಕ್, ಭದ್ರಾ ಜಲಾಶಯದಿಂದ 40 ಸಾವಿರ ಕ್ಯುಸೆಕ್ ಮತ್ತು ವರದಾ ನದಿಯಿಂದ 10 ಸಾವಿರ ಕ್ಯುಸೆಕ್ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿದೆ. ಈ ನೀರು ಆ. 18ರಂದು ಜಲಾಶಯದ ಒಡಲು ಸೇರಲಿದೆ. ಹಾಗಾಗಿ ಜಲಾಶಯದಿಂದ ಈಗ ನದಿಗೆ 22 ಕ್ರಸ್ಟ್ ಗೇಟ್‌ ತೆರೆದು 90,124 ಸಾವಿರ ಕ್ಯುಸೆಕ್ ನೀರು ಹರಿಸಲಾಗಿದೆ. ಇದರಿಂದ ಹಂಪಿಯ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿ ವಿಧಾನ ನೇರವೇರಿಸುವ ಮಂಟಪ, ಕಾಲು ಸೇತುವೆ, ಚಕ್ರತೀರ್ಥ ಸೇರಿದಂತೆ ಪ್ರಮುಖ ಸ್ಮಾರಕಗಳು ಜಲಾವೃತವಾಗಿವೆ.ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡುವ ಹಿನ್ನೆಲೆ ನದಿಪಾತ್ರದ ಪ್ರದೇಶಗಳು ಮುಳುಗಡೆ ಆಗುವ ಸಾಧ್ಯತೆ ಇದೆ. ಹಾಗಾಗಿ ಬಳ್ಳಾರಿ, ಕೊಪ್ಪಳ, ರಾಯಚೂರು ಮತ್ತು ವಿಜಯನಗರ ಜಿಲ್ಲಾಡಳಿತಗಳು ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಲು ಡಂಗುರ ಸಾರಿಸಿದ್ದಾರೆ. ಈಗಾಗಲೇ ಜನರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ.

ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳ ಹರಿವು ಏರುತ್ತಿರುವ ಹಿನ್ನೆಲೆ ಕ್ಷಿಪ್ರ ಕಾರ್ಯ ಪಡೆ 24/7 ಕಾರ್ಯಾಚರಣೆ ನಡೆಸುತ್ತಿದೆ. ತುಂಗಭದ್ರಾ ಮಂಡಳಿಯ ಪರಿಣತ ಎಂಜಿನಿಯರ್‌ಗಳು ಹಗಲು- ರಾತ್ರಿ ಗೇಟ್‌ಗಳಿಗೆ ಧಕ್ಕೆ ಆಗದಂತೆ ನಾಜೂಕ್ಕಾಗಿ ಆಪರೇಟ್ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.