ಕಳೆದ ನಾಲ್ಕು ವರ್ಷಗಳಿಂದ ಐಶಾರಾಮಿ ಬಸ್‌ಗಳನ್ನು ಖರೀದಿಸಿಲ್ಲ. ಈಗ ೭೦ ಬಸ್‌ಗಳ ಟೆಂಡರ್ ಪ್ರಕ್ರಿಯೆ ಮುಗಿದಿವೆ. ತಿಂಗಳೊಳಗೆ ಬಸ್‌ಗಳು ಇಲಾಖೆಗೆ ದೊರೆಯುತ್ತವೆ ಎಂದು ಸಿಎಂ ತಿಳಿಸಿದ್ದಾರೆ. ಈ ಪೈಕಿ ಮಂಗಳೂರಿಗೆ ಆದ್ಯತೆ ಕೊಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

ಕುಂದಾಪುರ: ಕೋವಿಡ್ ಸಂದರ್ಭಗಳಲ್ಲಿ ದೀರ್ಘ ಮಾರ್ಗದ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ಐಶಾರಾಮಿ ಬಸ್‌ಗಳನ್ನು ಖರೀದಿಸಿಲ್ಲ. ಈಗ ೭೦ ಬಸ್‌ಗಳ ಟೆಂಡರ್ ಪ್ರಕ್ರಿಯೆ ಮುಗಿದಿವೆ. ತಿಂಗಳೊಳಗೆ ಬಸ್‌ಗಳು ಇಲಾಖೆಗೆ ದೊರೆಯುತ್ತವೆ ಎಂದು ಸಿಎಂ ತಿಳಿಸಿದ್ದಾರೆ. ಈ ಪೈಕಿ ಮಂಗಳೂರಿಗೆ ಆದ್ಯತೆ ಕೊಡುತ್ತೇವೆ ಎಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿದರು.

ರಾಜ್ಯ ಸಾರಿಗೆ ನಿಗಮ ಮಂಗಳೂರು ವಿಭಾಗದದಿಂದ ಬೈಂದೂರಿನಲ್ಲಿ ನೂತವಾಗಿ ನಿರ್ಮಿಸಲಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

೯೦೦ ಹೊಸ ಬಸ್‌ಗಳನ್ನು ಖರೀದಿಸಲಿದ್ದು, ೧೫ ಜಿಲ್ಲೆಗಳಲ್ಲಿ ಉಡುಪಿ, ದ.ಕ ಗೆ ಆದ್ಯತೆ ಮೇಲೆ ಕೊಡುತ್ತೇವೆ ಎಂದರು.

ಉಪ್ಪು ನೀರಿನ ಕಾರಣದಿಂದಾಗಿ ಕಟ್ಟಡ ಕಾಮಗಾರಿ ವಿಳಂಬವಾಗಿದೆ. ಈ ಬಗ್ಗೆ ಗುರುರಾಜ್ ಗಂಟಿಹೊಳೆ, ಮಂಜುನಾಥ್ ಭಂಡಾರಿ, ಗೋಪಾಲ ಪೂಜಾರಿ ನನ್ನ ಗಮನಕ್ಕೆ ತರುತ್ತಲೇ ಇದ್ದರು. ನೀರು ಸಿಕ್ಕಿದ್ದರೆ ಬಸ್ ನಿಲ್ದಾಣ ಅಂದೇ ಉದ್ಘಾಟನೆಯಾಗುತ್ತಿತ್ತು. ಉದ್ಘಾಟನೆ ಅಲ್ಪ ವಿಳಂಬವಾದರೂ ಕೂಡ ಮೂಲಸೌಕರ್ಯಗಳೊಂದಿಗೆ ಉದ್ಘಾಟನೆಗೊಂಡು ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.

ಹೆದ್ದಾರಿಯಿಂದ ಡಿವೈಡರ್ ತೆರವುಗೊಳಿಸಿ ನೇರವಾಗಿ ಬಸ್‌ಗಳು ನಿಲ್ದಾಣ ಪ್ರವೇಶಿಸಲು ಜಿಲ್ಲಾಧಿಕಾರಿ ಹಾಗೂ ಲೋಕೋಪಯೋಗಿ ಸಚಿವರೊಂದಿಗೆ ಮಾತುಕತೆ ನಡೆಸುತ್ತೇನೆ. ಕೆಎಸ್‌ಆರ್‌ಟಿಸಿ ನೂತನ ಬಸ್ ಡಿಪೋಗೆ ಜಾಗ ಕಾಯ್ದಿರಿಸಲಾಗಿದ್ದು, ಎಲ್ಲರ ಮನವಿಯಂತೆ ಡಿಪೋ ನಿರ್ಮಾಣವನ್ನು ಮಾಡಿಕೊಡುತ್ತೇವೆ. ನೂತನ ಬಸ್ ನಿಲ್ದಾಣಕ್ಕೆ ಕೊಲ್ಲೂರು ಮೂಕಾಂಬಿಕಾ ದೇವರ ಹೆಸರು ಇಡುವ ಕುರಿತು ಪ್ರಸ್ತಾಪಗಳಿದ್ದು, ಈ ಬಗ್ಗೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್ ಶ್ರೀನಿವಾಸ್ ಅವರಲ್ಲಿ ಮಾತನಾಡುತ್ತೇನೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಜನರ ಬೇಡಿಕೆಗಳನ್ನು ಈಡೇರಿಸಬೇಕಾದದ್ದು ಜನಪ್ರತಿನಿಧಿಗಳ ಕರ್ತವ್ಯ. ಇದನ್ನು ಯಾರೇ ಮಾಡಿದರೂ ಸರ್ಕಾರದ ಕೆಲಸವೆಂದು ಮಾಡಬೇಕು. ಕೆಎಸ್ ಆರ್‌ಟಿಸಿ ಬಸ್ ನಿಲ್ದಾಣದ ಕಟ್ಟಡ ನಿರ್ಮಾಣದ ಬಳಿಕ ರಾ. ಹೆದ್ದಾರಿ ನಿರ್ಮಾಣವಾಗಿತ್ತು. ಆ ಸಂದರ್ಭದಲ್ಲಿ ನಿಲ್ದಾಣದ ಎದುರು ಬಸ್ ಪ್ರವೇಶ ನೀಡಲು ಅವಕಾಶ ಮಾಡಿಕೊಡುವ ಕನಿಷ್ಠ ಜ್ಞಾನವೂ ಅಧಿಕಾರಿಗಳಿಗೆ ಇರಲಿಲ್ಲ. ನಿಲ್ದಾಣದ ಎದುರು ರಸ್ತೆ ವಿಭಜಕ ತೆರವುಗೊಳಿಸುವ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಇಲ್ಲವಾದಲ್ಲಿ ಜನರೇ ಆ ಕೆಲಸ ಮಾಡುತ್ತಾರೆ. ರಾಜಕಾರಣ ಚುನಾವಣಾ ಸಮಯದಲ್ಲಿ ಮಾತ್ರ ಮಾಡಬೇಕು. ಊರಿನ ಅಭಿವೃದ್ದಿಗೆ ಪಕ್ಷ ಭೇದ ಮರೆತು ಒಂದಾಗೋಣ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಗುರುರಾಜ್ ಗಂಟಿಹೊಳೆ, ಸರ್ಕಾರ ಮತ್ತು ಶಾಸಕರು ಬೇರೆ ಬೇರೆ ಪಕ್ಷದವರಾಗಿದ್ದ ಸಂದರ್ಭದಲ್ಲಿ ಮಂಜುನಾಥ್ ಭಂಡಾರಿ ಅವರು ನನ್ನ ಹಾಗೂ ಸರ್ಕಾರದ ನಡುವೆ ಕೊಂಡಿಯಾಗಿ ನಿಂತಿದ್ದಾರೆ. ಬೈಂದೂರಿಗೆ ಕೆಎಸ್‌ಆರ್‌ಟಿಸಿ ನಿಲ್ದಾಣವನ್ನು ತೆಗೆದುಕೊಂಡು ಬಂದಿದ್ದು ಮಾಜಿ ಶಾಸಕರಾದ ಗೋಪಾಲ ಪೂಜಾರಿ. ಈ ಬಗ್ಗೆ ನಮ್ಮೊಳಗೆ ಯಾವುದೇ ಅನುಮಾವಿಲ್ಲ. ಹೀಗೆ ಹೇಳುವುದರಲ್ಲಿ ಯಾವ ರಾಜಕೀಯವೂ ಇಲ್ಲ. ಮಾಜಿ ಶಾಸಕ ಲಕ್ಷ್ಮೀನಾರಾಯಣ ಅವರು ಪ್ರಸ್ತಾಪಿಸಿ ಜಾಗ ಗುರುತಿಸಿದರೆ, ಗೋಪಾಲ ಪೂಜಾರಿ ಅವರು ಮಂಜೂರಾತಿಗೊಳಿಸಿದರು. ಆ ಬಳಿಕ ಸುಕುಮಾರ್ ಶೆಟ್ಟಿಯವರು ಅನುದಾನ ತರಲು ನೆರವಾದರು. ಇವರೆಲ್ಲಾ ಮಾಡಿರುವ ಕೆಲಸಗಳು ನನ್ನ ಅವಧಿಯಲ್ಲಿ ಉದ್ಘಾಟನೆಗೊಂಡಿದೆ ಎಂದರು.ಸನ್ಮಾನ:

ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪ್ರಜಾರಿ, ಸಮಾಜ ಸೇವಕ ಸುಬ್ರಹ್ಮಣ್ಯ ಬಿಜೂರು, ಸಿಐಟಿಯುನ ರಾಜು ಪಡುಕೋಣೆ, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ನಾಗರತ್ನ ನಾಡ ಮೊದಲಾದವರು ಸಾರಿಗೆ ಸಚಿವರಿಗೆ ವಿವಿಧ ಬೇಡಿಕೆಗಳ ಮನವಿಗಳನ್ನು ಸಲ್ಲಿಸಿದರು. ಇದೇ ವೇಳೆಯಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕಗಳನ್ನು ವಿತರಿಸಲಾಯಿತು. ಗುತ್ತಿದಾರರಾದ ಪ್ರಭಾಕರ ಶೆಟ್ಟಿ, ಶ್ರೀಧರ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಕೊಲ್ಲುರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಬು ಹೆಗ್ಡೆ ತಗ್ಗರ್ಸೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರವಿಂದ ಪ್ರಜಾರಿ, ಪ್ರದೀಪ್ ಶೆಟ್ಟಿ ಗುಡಿಬೆಟ್ಟು, ಕಾಂಗ್ರೆಸ್ ಮುಖಂಡರಾದ ರಾಜು ಪೂಜಾರಿ, ಗಿರೀಶ್ ಬೈಂದೂರು, ಮದನ್ ಕುಮಾರ್, ಗೌರಿ ದೇವಾಡಿಗ, ಬಿಜೆಪಿ ಮುಖಂಡರಾದ ಸುರೇಶ್ ಬಟವಾಡಿ, ಜಯಾನಂದ ಹೋಬಳಿದಾರ್ ಮತ್ತಿತರರು ಉಸ್ಥಿತರಿದ್ದರು.ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ ಪ್ರಸ್ತಾಪಿಸಿದರು. ಸಹಾಯಕ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ಪ್ರಿಯ ಪವನ್ ಕುಮಾರ್ ಸ್ವಾಗತಿಸಿದರು. ವಿಭಾಗೀಯ ಸಂಚಾರ ಅಧಿಕಾರಿ ಕಮಲ್ ಕುಮಾರ್ ಧನ್ಯವಾದವಿತ್ತರು. ಸುಬ್ರಹ್ಮಣ್ಯ ಜಿ ಉಪ್ಪುಂದ ನಿರೂಪಿಸಿದರು.

ಹಿಂದೆ ನಾನು ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷನಾಗಿದ್ದಾಗ ರಾಮಲಿಂಗ ರೆಡ್ಡಿಯವರೇ ಸಾರಿಗೆ ಸಚಿವರಾಗಿದ್ದರು. ಅಂದು ಅವರ ಕೈಕೆಳಗೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತ್ತು.

-ಕೆ. ಗೋಪಾಲ ಪೂಜಾರಿ, ಮಾಜಿ ಶಾಸಕರು.

ಪೂಜಾರಿಗೆ ಕೈನೀಡಿ ಬರಮಾಡಿಕೊಂಡ ಗಂಟಿಹೊಳೆ

ಎರಡೂ ಪಕ್ಷಗಳ ಕಾರ್ಯಕರ್ತರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಶ್ರೇಯಸ್ಸು ತಮಗೆ ಬರಬೇಕೆನ್ನುವ ನಿಟ್ಟಿನಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಫೋಟೋವುಳ್ಳ ಪೋಸ್ಟರ್ ರಚಿಸಿ ಭಾರೀ ಪ್ರಚಾರ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳು ತಾರಕಕ್ಕೇರಿತ್ತು. ಆದರೆ ಸಚಿವರ ಉಪಸ್ಥಿತಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಮೊದಲೇ ವೇದಿಕೆ ಮೇಲೆ ಬಂದ ಶಾಸಕ ಗಂಟಿಹೊಳೆ ಮಾಜಿ ಶಾಸಕ ಗೋಪಾಲ ಪೂಜಾರಿವರಿಗೆ ಕೈನೀಡಿ ಅವರನ್ನು ನಗುಮೊಗದಿಂದ ಆತ್ಮೀಯವಾಗಿ ಬರಮಾಡಿಕೊಂಡರು. ಸಭೆ ಆರಂಭಕ್ಕೂ ಮುನ್ನ ನಿರೂಪಕರು ಬೈಂದೂರು ಹಾಗೂ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಸಭೆಗೆ ಕರೆಯುತ್ತಿದ್ದಂತೆಯೇ ಎದ್ದು ನಿಂತ ಶಾಸಕ ಗಂಟಿಹೊಳೆ ಬಿಜೆಪಿಯ ಜಿ.ಪಂ ಮಾಜಿ ಸದಸ್ಯ ಸುರೇಶ್ ಬಟವಾಡಿ ಹಾಗೂ ಬಿಜೆಪಿ ಮುಖಂಡರಾದ ಜಯಾನಂದ ಹೋಬಳಿದಾರ್ ಅವರನ್ನು ಕರೆದರು. ಬಳಿಕ ಸಭೆಯಲ್ಲಿ ಮಾತನಾಡಿದ ಶಾಸಕ ಗಂಟಿಹೊಳೆ, ಬಸ್ ನಿಲ್ದಾಣವನ್ನು ಮಾಜಿ ಶಾಸಕ ಗೋಪಾಲ ಪೂಜಾರಿಯವರು ಮಂಜೂರುಗೊಳಿಸಿದ್ದರಿಂದ ಇದಲ್ಲಿ ಅವರ ಹೆಸರೇ ಶಾಶ್ವತವಾಗಿ ಉಳಿಯುತ್ತದೆ. ಅದರಲ್ಲಿ ಎರಡು ಮಾತಿಲ್ಲ ಎನ್ನುವ ಮೂಲಕ ಗೊಂದಲಗಳಿಗೆ ತೆರೆ ಎಳೆದರು.