ಮಂಗಲ ಗ್ರಾಮದಲ್ಲಿಯೇ 900 ಪೌತಿ ಖಾತೆ ಬಾಕಿ: ಶಾಸಕ ರಮೇಶ್‌ ಬಂಡಿಸಿದ್ದೇಗೌಡ

| Published : May 13 2025, 11:51 PM IST

ಮಂಗಲ ಗ್ರಾಮದಲ್ಲಿಯೇ 900 ಪೌತಿ ಖಾತೆ ಬಾಕಿ: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ರೈತ ಬಾಂಧವರು ಸಮರ್ಪಕ ವಿದ್ಯುತ್‌ ಪೂರೈಕೆಗೆ ಚೆಸ್ಕಾಂಗೆ 21,500 ರು. ಪಾವತಿ ಮಾಡಿದರೆ ತಮ್ಮ ಜಮೀನುಗಳಿಗೆ ಟಿಸಿ ಅಳವಡಿಸಿ, ಆರ್‌ಆರ್ ನಂಬರ್ ಕೊಡಲಾಗುವುದು. ಆದ್ದರಿಂದ ರೈತರು ಬೋರ್‌ವೆಲ್‌ಗಳನ್ನು ರೆಗ್ಯುಲೇಟ್ ಮಾಡಿಕೊಳ್ಳಿ. ಶೀಘ್ರ ವಿದ್ಯುತ್ ಸಂಪರ್ಕ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಇಂತಹ ಯೋಜನೆಯನ್ನು ರೈತರು ಉಪಯೋಗಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಜ್ಯ ಕಾಂಗ್ರೆಸ್ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದ್ದು, ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪುತ್ತಿವೆ ಎಂದು ಚೆಸ್ಕಾಂ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಹೇಳಿದರು.

ತಾಲೂಕಿನ ಮಂಗಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಪಂಚಾಯ್ತಿ, ಕಂದಾಯ ಇಲಾಖೆಯಿಂದ ನಡೆದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೇ 20ರಂದು ಕೊತ್ತತ್ತಿ ಗ್ರಾಪಂ ಹಾಗೂ ಮೇ 27ರಂದು ಸೂನಗಹಳ್ಳಿ ಗ್ರಾಪಂ ಮಟ್ಟದ ಜನತಾ ದರ್ಶನ ಆಯೋಜಿಸಿದೆ. ಆಯಾ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಸರ್ಕಾರದ ಇಲಾಖಾಧಿಕಾರಿಗಳ ಜೊತೆ ತೆರಳಿ ಸಾರ್ವಜನಿಕರ ಅಹವಾಲು ಆಲಿಸಲಾಗುವುದು ಎಂದರು.

ರೈತ ಬಾಂಧವರು ಸಮರ್ಪಕ ವಿದ್ಯುತ್‌ ಪೂರೈಕೆಗೆ ಚೆಸ್ಕಾಂಗೆ 21,500 ರು. ಪಾವತಿ ಮಾಡಿದರೆ ತಮ್ಮ ಜಮೀನುಗಳಿಗೆ ಟಿಸಿ ಅಳವಡಿಸಿ, ಆರ್‌ಆರ್ ನಂಬರ್ ಕೊಡಲಾಗುವುದು. ಆದ್ದರಿಂದ ರೈತರು ಬೋರ್‌ವೆಲ್‌ಗಳನ್ನು ರೆಗ್ಯುಲೇಟ್ ಮಾಡಿಕೊಳ್ಳಿ. ಶೀಘ್ರ ವಿದ್ಯುತ್ ಸಂಪರ್ಕ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಇಂತಹ ಯೋಜನೆಯನ್ನು ರೈತರು ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.

ಕೊತ್ತತ್ತಿ ಹೋಬಳಿಯಲ್ಲಿ 13 ಸಾವಿರ ಪೌತಿ ಖಾತೆಗಳಿದ್ದು, ಮಂಗಲ ಗ್ರಾಮದಲ್ಲಿಯೇ 900 ಪೌತಿ ಖಾತೆ ಆಗಬೇಕಾಗಿದೆ ಎಂದರು.

ಸರ್ಕಾರ ಶಿಕ್ಷಣ ಇಲಾಖೆಯನ್ನು ಸದೃಢ ಮಾಡಬೇಕು. ಸರ್ಕಾರಿ ಶಾಲೆಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಬೇಕೆಂಬ ನಿಟ್ಟಿನಲ್ಲಿ ಮನೆ ಬಾಗಿಲಲ್ಲಿ ವ್ಯವಸ್ಥಿತವಾಗಿ ಸಿಗುವ ಖಾಸಗಿ ಶಾಲೆಗಳ ವ್ಯವಸ್ಥೆ ರೀತಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿಯಿಂದ ಪ್ರೀಕೆಜಿವರೆಗೆ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲಾಗುತ್ತಿದೆ. ಇಂತಹ ವ್ಯವಸ್ಥೆಗಳನ್ನು ಗ್ರಾಮೀಣ ಪ್ರದೇಶದ ಜನರು ಬಳಕೆ ಮಾಡಿಕೊಳ್ಳಬೇಕು ಎಂದರು.

ಮೂರು ಬಾರಿ ಈ ಕ್ಷೇತ್ರದ ಶಾಸಕನಾಗಿ ನನ್ನನ್ನು ಆಯ್ಕೆ ಮಾಡಿದ್ದೀರಿ. ನಾಲೆಗಳು, ಗ್ರಾಮ ಸಂಪರ್ಕಗಳ ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದ್ದು, ಮಂಗಲ- ಹಳುವಾಡಿ ರಸ್ತೆ, ಹೆಬ್ಬಕವಾಡಿ-ಗಾಮನಹಳ್ಳಿ ರಸ್ತೆಗೆ ಟೆಂಡರ್ ಆಗುತ್ತಿದ್ದು ಮೂರು ತಿಂಗಳಲ್ಲಿ ಮಂಜೂರಾತಿ ಆಗುತ್ತದೆ ಎಂದರು.

ಉಪ ವಿಭಾಗಾಧಿಕಾರಿ ಶಿವಮೂರ್ತಿ ಮಾತನಾಡಿ, ಗ್ರಾಮೀಣ ಭಾಗದ ಜನರು ತಮ್ಮ ಸಮಸ್ಯೆಗಳ ಬಗ್ಗೆ ತಿಳಿಸಲು ತಾಲೂಕ ಕಚೇರಿಗೆ ಬರುತ್ತೀರಿ ಆದ್ದರಿಂದ ಜನತಾದರ್ಶನ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಸಮಸ್ಯೆ ಆಲಿಸಿ ಇಲ್ಲಿಯೇ ಬಗೆಹರಿಸಲು ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.

ಮಂಗಲ ಗ್ರಾಮ ಪಂಚಾಯ್ತಿಯಲ್ಲಿ 990 ಪೌತಿ ಖಾತೆಗಳು ಬಾಕಿ ಇವೆ. ಅವರ ವಾರಸುದಾರರು ತಮ್ಮ ದಾಖಲಾತಿಗಳನ್ನು ಸಲ್ಲಿಸಿ ಭೌತಿಕತೆ ಮಾಡಿಸಿಕೊಳ್ಳಿ. ಆರ್‌ಟಿಸಿ ಇಲ್ಲ ಎಂದರೆ ಸರ್ಕಾರದ ಸೌಲಭ್ಯ ಪಡೆಯಲು ಸಾಧ್ಯವಾಗುವುದಿಲ್ಲ. ಸರ್ಕಾರದ ಸಹಾಯಧನ ಪಡೆಯಲು ಆರ್‌ಟಿಸಿ ಬೇಕು ಅದಕ್ಕಾಗಿ ಸಂಬಂಧಪಟ್ಟವರು ತಮ್ಮ ವಾರಸುದಾರರೂ ಭೌತಿಕತೆ ಮಾಡಿಸಿಕೊಳ್ಳಿ ಎಂದರು.

ಮಂಗಲ ಗ್ರಾಮ ಪಂಚಾಯ್ತಿಯಲ್ಲಿ ಮನೆಮನೆಗೆ ಸರ್ವೇ ಮಾಡಿದಾಗ ವೃದ್ಧಾಪ್ಯದಿಂದ ವಂಚಿತವಾಗಿರುವವರನ್ನು ಗುರುತಿಸಿ ಮಾಸಾಶನ ಕೊಡಲು ತೀರ್ಮಾನಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಪೌತಿ ಖಾತೆ ಆಂದೋಲನ, ಪಿಂಚಣಿ ಅದಾಲತ್ , ಪಂಚಾಯ್ತಿ ಇ -ಸ್ವತ್ತು ಆಂದೋಲನ, ಇಲಾಖೆವಾರು ಅರ್ಜಿ ಸ್ವೀಕಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಮಡಿಲು ತುಂಬುವ ಕಾರ್ಯಕ್ರಮ ನಡೆಯಿತು. ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ತಾಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ವೀಣಾ, ಉಪ ತಹಸೀಲ್ದಾರ್ ಡಿ.ತಮ್ಮಣ್ಣಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಬೃಂದಾ, ಎಡಿಎಲ್‌ಆರ್ ಮಮತಾ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಜನತಾದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.