ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ವಿದ್ಯುತ್ ಸರಬರಾಜು ನಿಗಮದ (ಬೆಸ್ಕಾಂ) ಗೃಹ ಬಳಕೆ ವಿದ್ಯುತ್ ಗ್ರಾಹಕರಿಗೆ ಪ್ರಸಕ್ತ ತಿಂಗಳಿಂದ ಪ್ರತಿ ಯುನಿಟ್‌ಗೆ 56 ಪೈಸೆ ಟ್ರೂ ಅಪ್ ಚಾರ್ಜ್ ಹೊರೆ ಬೀಳಲಿದ್ದು, ಒಟ್ಟಾರೆ ಈ ವರ್ಷ ಯುನಿಟ್‌ಗೆ 91 ಪೈಸೆ ವಿದ್ಯುತ್ ದರ ಹೆಚ್ಚಳ ಆಗಲಿದೆ.ಮತ್ತೊಂದೆಡೆ, ವಾಣಿಜ್ಯ ಗ್ರಾಹಕರಿಗೆ ₹1.01 ರಿಂದ ₹1.86 ರವರೆಗೆ ವಿದ್ಯುತ್ ದರ ಹೆಚ್ಚಾಗಲಿದ್ದು, ವಾಣಿಜ್ಯ ಗ್ರಾಹಕರಿಗೆ ವಿದ್ಯುತ್ ದರ ಏರಿಕೆ ಶಾಕ್ ತುಸು ಹೆಚ್ಚಾಗಿಯೇ ತಗುಲಲಿದೆ.
ಈ ಹಿಂದೆ ಕೆಇಆರ್‌ಸಿಯು ಕೆಪಿಟಿಸಿಎಲ್ ನೌಕರರ ಪಿಂಚಣಿ ಹಾಗೂ ಗ್ರ್ಯಾಚ್ಯುಯಿಟಿ ಬಾಕಿ ತುಂಬಲು 2026-27ನೇ ಸಾಲಿನ ಏ.1ರಿಂದ ಪ್ರತಿ ಯುನಿಟ್‌ಗೆ 35 ಪೈಸೆ ದರ ಹೆಚ್ಚಳ ಮಾಡಲು ತೀರ್ಮಾನಿಸಿತ್ತು. ಅದರಂತೆ ಈಗಾಗಲೇ ಏಪ್ರಿಲ್ ಬಿಲ್‌ನಲ್ಲಿ ವಿದ್ಯುತ್ ಶುಲ್ಕ 45 ಪೈಸೆ ಹೆಚ್ಚಳ ಆಗಿದೆ.ಇದರ ಜತೆಗೆ ಏ.17 ರಂದು ಕೆಇಆರ್‌ಸಿ ಮತ್ತೊಂದು ಆದೇಶ ಹೊರಡಿಸಿದ್ದು, ಬೆಸ್ಕಾಂ ಸಂಸ್ಥೆಗೆ 2024-25ನೇ ಸಾಲಿನಲ್ಲಿ ಉಂಟಾಗಿರುವ ₹2,068 ಕೋಟಿ ಆದಾಯ ಕೊರತೆ ತುಂಬಿಕೊಳ್ಳಲು 2026-27ನೇ ಸಾಲಿನಲ್ಲಿ ಗ್ರಾಹಕರಿಂದ ಪ್ರತಿ ಯುನಿಟ್‌ಗೆ 56 ಪೈಸೆ ಹೆಚ್ಚುವರಿಯಾಗಿ ಸಂಗ್ರಹಿಸಲು ಅವಕಾಶ ನೀಡಿದೆ.
ತನ್ಮೂಲಕ ಬೆಸ್ಕಾಂ ಗ್ರಾಹಕರಿಗೆ 2024-25ರಲ್ಲಿ ಬಳಕೆ ಮಾಡಿರುವ ಪ್ರಮಾಣಕ್ಕೆ ಸೀಮಿತವಾಗಿ 2026-27ನೇ ಸಾಲಿನ 12 ತಿಂಗಳು ಕಾಲ ಪ್ರತಿ ಯುನಿಟ್‌ಗೆ 56 ಪೈಸೆ ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಗ್ರಾಹಕರಿಗೆ 15 ಪೈಸೆ ಹೊರೆ ಹಾಕಲಾಗುತ್ತದೆ.
ಈ ಆದೇಶವು 2026 ಮೇ 1 ರಿಂದ 2027ರ ಏಪ್ರಿಲ್ 31ರವರೆಗೆ ಬಳಕೆಯಾಗುವ ವಿದ್ಯುತ್ ಬಿಲ್‌ಗೆ ಅನ್ವಯವಾಗಲಿದ್ದು, ಹೀಗಾಗಿ ಈ ತಿಂಗಳ ವಿದ್ಯುತ್ ಬಳಕೆ ಬೆಲೆ ಹೆಚ್ಚಾಗಲಿದೆ. 35 ಪೈಸೆ ಹಾಗೂ 56 ಪೈಸೆ ಎರಡೂ ಬೆಲೆ ಹೆಚ್ಚಳ ಸೇರಿಸಿದರೆ ಗೃಹ ಬಳಕೆ ಗ್ರಾಹಕರಿಗೆ 91 ಪೈಸೆ ಹೊರೆ ಬೀಳಲಿದೆ.
ಏನಿದು ಟ್ರೂ ಅಪ್ ಚಾರ್ಜಸ್?:ಪ್ರಸಕ್ತ ತಿಂಗಳಿಂದ ವಿದ್ಯುತ್ ಬಿಲ್‌ನಲ್ಲಿ ‘ಎಫ್‌ವೈ25 ಟ್ರೂ ಅಪ್ ಚಾರ್ಜಸ್’ ಹೆಸರಿನಲ್ಲಿ ಪ್ರತ್ಯೇಕವಾಗಿ ನಮೂದಿಸಿ ಬಿಲ್ ನೀಡಲಾಗುತ್ತದೆ.
ಉದಾ: 2024-25ರಲ್ಲಿ ಪ್ರತಿ ತಿಂಗಳು 100 ಯುನಿಟ್‌ನಂತೆ ವಿದ್ಯುತ್ ಬಳಕೆ ಮಾಡುತ್ತಿದ್ದ ವ್ಯಕ್ತಿ ಯುನಿಟ್‌ಗೆ 6.50 ರು.ಗಳಂತೆ 650 ರು. ವಿದ್ಯುತ್ ಬಳಕೆ ಮತ್ತು ನಿಗದಿತ ಶುಲ್ಕ ಸೇರಿ ವಿದ್ಯುತ್ ಶುಲ್ಕ ಪಾವತಿಸಿರುತ್ತಾರೆ. ಆ ಬಳಕೆಗೆ ಸಂಬಂಧಿಸಿ ಈ ವರ್ಷ ಪ್ರತಿ ಯುನಿಟ್‌ಗೆ 56 ಪೈಸೆ ಟ್ರೂ ಅಪ್ ಚಾರ್ಜಸ್ ವಿಧಿಸಲು ಕೆಇಆರ್‌ಸಿ ಅನುಮತಿ ನೀಡಿದೆ.ಹೀಗಾಗಿ ಈ ವರ್ಷ ತಿಂಗಳಿಗೆ ಸರಾಸರಿ 120 ಯುನಿಟ್ ವಿದ್ಯುತ್ ಬಳಕೆ ಮಾಡುವ ವ್ಯಕ್ತಿಗೆ 100 ಯುನಿಟ್‌ಗಳಿಗೆ ಸೀಮಿತವಾಗಿ ತಲಾ 56 ಪೈಸೆ ಹೆಚ್ಚುವರಿಯಾಗಿ ವಿಧಿಸಲಾಗುತ್ತದೆ. ಉಳಿದ 20 ಯುನಿಟ್‌ಗಳಿಗೆ ಈ ವರ್ಷ ನಿಗದಿಯಾಗಿರುವ ಶುಲ್ಕ ಮಾತ್ರ ಸಂಗ್ರಹಿಸಲಾಗುವುದು.
ಗೃಹಜ್ಯೋತಿ ಗ್ರಾಹಕರಿಗೆ ಹೊರೆ ಕಡಿಮೆ:ಗೃಹಜ್ಯೋತಿ ಗ್ರಾಹಕರಿಗೆ ಟ್ರೂ ಅಪ್ ಚಾರ್ಜಸ್ ಹಾಗೂ ಪಿಂಚಣಿ, ಗ್ರಾಚ್ಯುಯಿಟಿ ಸಂಬಂಧಿಸಿದ ವಿದ್ಯುತ್ ದರ ಹೆಚ್ಚಳದಿಂದ ಹೆಚ್ಚಿನ ಹೊರೆ ಬೀಳುವುದಿಲ್ಲ. ಗೃಹ ಜ್ಯೋತಿ ಉಚಿತ ವಿದ್ಯುತ್ ಯೋಜನೆ ಯುನಿಟ್‌ಗಳ ಆಧಾರ ಮೇಲೆ ನೀಡಲಾಗುತ್ತಿದ್ದು, 200 ಯುನಿಟ್‌ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತದೆ. 200 ಯುನಿಟ್‌ಗಿಂತ ಕಡಿಮೆ ಬಳಕೆ ಮಾಡುವ ಗ್ರಾಹಕರಿಗೆ ಸಣ್ಣ ಪ್ರಮಾಣದ ವ್ಯತ್ಯಾಸ ಹೊರತುಪಡಿಸಿ ಹೆಚ್ಚಿನ ಹೊರೆ ಬೀಳುವುದಿಲ್ಲ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ₹1.10 ರಿಂದ ₹2.81 ರವರೆಗೆ ಹೆಚ್ಚಳ?:ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು (ಕೆಇಆರ್‌ಸಿ) 2026-27ನೇ ಸಾಲಿನ ದರ ಪರಿಷ್ಕರಣೆ ವೇಳೆ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ದರವನ್ನು ಪ್ರತಿ ಯುನಿಟ್‌ಗೆ 10 ಪೈಸೆಯಿಂದ ಗರಿಷ್ಠ 95 ಪೈಸೆವರೆಗೆ ಹೆಚ್ಚಳ ಮಾಡಿದೆ.
ಎಲ್‌ಟಿ-3 (ಎ) ವಾಣಿಜ್ಯ ಗ್ರಾಹಕರಿಗೆ ಪ್ರತಿ ಯುನಿಟ್‌ಗೆ ₹7 ಇದ್ದ ಬೆಲೆ ₹7.10, ಎಲ್‌ಟಿ -5 (ಕೈಗಾರಿಕೆ) ಗ್ರಾಹಕರಿಗೆ ₹4.50 ಇದ್ದ ಬೆಲೆ ₹5.20, ಎಚ್‌ಟಿ 2 ಎ (ಕೈಗಾರಿಕೆ) ಗ್ರಾಹಕರಿಗೆ ₹6.60 ರಿಂದ ₹6.70, ಎಚ್‌ಟಿ 2ಬಿ (ವಾಣಿಜ್ಯ) ಗ್ರಾಹಕರಿಗೆ ₹5.95 ರಿಂದ ₹6.90ಕ್ಕೆ ದರ ಏರಿಕೆ ಮಾಡಲಾಗಿದೆ.ಡಬಲ್ ಹೊರೆ:
ಜತೆಗೆ 2025-26ನೇ ಸಾಲಿನ ದರವನ್ನೂ ಪರಿಷ್ಕರಣೆ ಮಾಡಿ ಕೆಇಆರ್‌ಸಿಯು ಪರಿಷ್ಕೃತ ದರಗಳನ್ನು ಪ್ರಕಟಿಸಿದೆ. ಇದು 2025-26ನೇ ಸಾಲಿನ ದರ ಪರಿಷ್ಕರಣೆಯಾಗಿರುವುದರಿಂದ ಏ.1, 2025ರಿಂದಲೇ ಜಾರಿಯಾಗಲಿದೆ. ಹೀಗಾಗಿ ಕಳೆದ ವರ್ಷದ ಬಾಕಿ ಬಿಲ್ ಸಹಿತ ಈ ವರ್ಷ ಸಂಗ್ರಹಿಸಲು ಬೆಸ್ಕಾಂ ಯೋಜನೆ ರೂಪಿಸುತ್ತಿದೆ. ಇದಾದರೆ ವಾಣಿಜ್ಯ ಗ್ರಾಹಕರಿಗೆ ಡಬಲ್ ಹೊರೆ ಬೀಳಲಿದೆ.ಇದರ ಜತೆಗೆ ಟ್ರೂ ಅಪ್ ಚಾರ್ಜಸ್ ಹೆಸರಿನಲ್ಲಿ 56 ಪೈಸೆ ಹಾಗೂ ಪಿ ಆ್ಯಂಡ್ ಜಿ ಸಂಬಂಧಿಸಿದ 35 ಪೈಸೆಯೂ ಸೇರಿ ₹1.01 ರಿಂದ ₹1.86 ಹೆಚ್ಚಳ ಆಗಲಿದೆ.
2025 ಏ.1ರಿಂದ ಬಾಕಿ ಇರುವ ದರ ಹೆಚ್ಚಳವನ್ನೂ ಪ್ರತಿ ತಿಂಗಳ ಬಿಲ್‌ಗೆ ಸೇರ್ಪಡೆ ಮಾಡಿದರೆ ಪ್ರತಿ ಯುನಿಟ್‌ಗೆ ವಿವಿಧ ಗ್ರಾಹಕರಿಗೆ ₹1.11 ರಿಂದ ₹2.81 ವರೆಗೆ ಹೆಚ್ಚಳ ಆಗಬಹುದು ಎಂದು ತಿಳಿದುಬಂದಿದೆ.