91000 ಎಕರೆ ಸರ್ಕಾರಿ ಜಾಗ ಒತ್ತುವರಿ: ಸಿಎಂ

| Published : Jul 09 2024, 12:52 AM IST / Updated: Jul 09 2024, 09:13 AM IST

ಸಾರಾಂಶ

ರಾಜ್ಯದಲ್ಲಿ ಒತ್ತುವರಿಗೆ ಗುರಿಯಾಗಿರುವ 91,000 ಎಕರೆ ಜಮೀನು ತೆರವಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿವಿಧ ಇಲಾಖೆಗಳ ಸರ್ಕಾರಿ ಆಸ್ತಿ ರಕ್ಷಣೆಗೆ ಎಸ್ಟೇಟ್‌ ಅಧಿಕಾರಿಗಳನ್ನು ನೇಮಕ ಮಾಡಬೇಕು.  

 ಬೆಂಗಳೂರು :  ರಾಜ್ಯದಲ್ಲಿ ಒತ್ತುವರಿಗೆ ಗುರಿಯಾಗಿರುವ 91,000 ಎಕರೆ ಜಮೀನು ತೆರವಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ವಿವಿಧ ಇಲಾಖೆಗಳ ಸರ್ಕಾರಿ ಆಸ್ತಿ ರಕ್ಷಣೆಗೆ ಎಸ್ಟೇಟ್‌ ಅಧಿಕಾರಿಗಳನ್ನು ನೇಮಕ ಮಾಡಬೇಕು. ಜತೆಗೆ ಜಮೀನು ಅಕ್ರಮ ಮಾರಾಟ ತಡೆಯಲು ಪಹಣಿ-ಆಧಾರ್‌ ಜೋಡಣೆ ಪೂರ್ಣಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಓಗಳೊಂದಿಗಿನ ಸಭೆ ವೇಳೆ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನೆ ನಡೆಸಿದ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

1.40 ಕೋಟಿ ಎಕರೆ ಸರ್ಕಾರಿ ಜಮೀನಿನ ದತ್ತಾಂಶವನ್ನು ಲ್ಯಾಂಡ್‌ ಬೀಟ್‌ ಮೊಬೈಲ್‌ ತಂತ್ರಾಂಶದಲ್ಲಿ ದಾಖಲಿಸಿರುವುದಾಗಿ ಹೇಳಿದ್ದೀರಿ. ಇನ್ನೂ 91,000 ಎಕರೆ ಜಮೀನು ಒತ್ತುವರಿ ತೆರವಾಗಬೇಕು. ವಿವಿಧ ಇಲಾಖೆಗಳ ಸರ್ಕಾರಿ ಜಮೀನು ಗುರುತಿಸಿ ಒತ್ತುವರಿ ತೆರವುಗೊಳಿಸಬೇಕು. ಇದಕ್ಕೆ ಸಂಬಂಧಪಟ್ಟಂತೆ ಅಗತ್ಯವಿದ್ದರೆ ಹೆಚ್ಚುವರಿ ಸರ್ವೇಯರ್‌ಗಳನ್ನು ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪ್ರತಿ ಇಲಾಖೆಗೂ ಆಸ್ತಿ ರಕ್ಷಣೆಗೆ ಎಸ್ಟೇಟ್‌ ಅಧಿಕಾರಿ ನೇಮಿಸಬೇಕು. ತಮ್ಮ ಇಲಾಖೆಯ ಭೂಮಿಯ ಮಾಹಿತಿಯನ್ನು ಆರ್‌ಟಿಸಿಯಲ್ಲಿ ಅಳವಡಿಸಬೇಕು. ಇನ್ನು ಒಬ್ಬರು ಮೂರ್ನಾಲ್ಕು ದಶಕಗಳಿಂದ ಜಮೀನು ಸಾಗುವಳಿ ಮಾಡುತ್ತಿದ್ದರೂ ಬೇರೆ ವ್ಯಕ್ತಿಗಳು ಭೂ ಮಂಜೂರಾತಿ ಮಾಡಿಸಿಕೊಳ್ಳುವ ಪ್ರಕರಣ ಹೆಚ್ಚಾಗುತ್ತಿವೆ. ಇಂತಹ ಸ್ಥಳಕ್ಕೆ ಭೇಟಿ ನೀಡಿ, ಮಹಜರು ನಡೆಸಿ, ಭೂ ಮಂಜೂರಾತಿ ರದ್ದುಪಡಿಸಬೇಕು. ಪೋಡಿ ಪ್ರಕರಣಗಳು ಬಹಳ ಸಂಖ್ಯೆಯಲ್ಲಿ ಬಾಕಿ ಇರುವುದರಿಂದ, ಅಭಿಯಾನ ಮಾದರಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಿದ್ದರಾಮಯ್ಯ ಸೂಚಿಸಿದರು.

ರಾಯಲ್ಟಿಯಲ್ಲಿ ಸರ್ಕಾರಕ್ಕೆ ನಷ್ಟ, ಸಿಎಂ ಗರಂ:

ಕ್ವಾರಿ ಗಣಿ ರಾಯಲ್ಟಿಯಲ್ಲಿ ಸರ್ಕಾರಕ್ಕೆ ನಷ್ಟ ಆಗುತ್ತಿದೆ ಎನ್ನುವ ದೂರಿನ ಬಗ್ಗೆ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ, ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ನಷ್ಟ ತಡೆಯುವಂತೆ ಸೂಚನೆ ನೀಡಿದರು.

ಸಚಿವ ಸಂತೋಷ್ ಲಾಡ್, ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್ ಮುಂತಾದವರು ಪರ್ಮಿಟ್ ಪಡೆಯದೆ ಗಣಿಗಾರಿಕೆ ನಡೆಸುತ್ತಿರುವುದರಿಂದ ರಾಯಲ್ಟಿ ಸಂಗ್ರಹದಲ್ಲಿ ಸರ್ಕಾರಕ್ಕೆ ಆಗುತ್ತಿರುವ ನಷ್ಟದ ಬಗ್ಗೆ ಗಮನ ಸೆಳೆದರು.

ಈ ವೇಳೆ ಸಿದ್ದರಾಮಯ್ಯ, ಇದನ್ನೆಲ್ಲಾ ತಕ್ಷಣ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಸರ್ಕಾರದಿಂದ ಹೊಸ ನೀತಿಯನ್ನೇ ರೂಪಿಸೋಣ ಎಂದರು.

ಡೀಮ್ಡ್‌ ಅರಣ್ಯಕ್ಕೆ ತಪ್ಪಾಗಿ  ಸೇರಿದ ಜಾಗ ಗುರುತಿಸಿ: ಸಿಎಂ

ಯಾವುದೇ ಜಮೀನನ್ನು ತಪ್ಪಾಗಿ ಡೀಮ್ಡ್‌ ಅರಣ್ಯ ಪಟ್ಟಿಗೆ ಸೇರಿಸಿದ್ದರೆ, ಅಂತಹದ್ದನ್ನು ಗುರುತಿಸಲು ಕಂದಾಯ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಎರಡು ತಿಂಗಳ ಒಳಗಾಗಿ ಜಂಟಿ ಸಮೀಕ್ಷೆ ನಡೆಸಿ. ಅದನ್ನು ಸಂಪುಟದ ಮುಂದೆ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.