ಸಾರಾಂಶ
ಬೆಂಗಳೂರು : ನಗರ ಸಂಚಾರ ಪಶ್ಚಿಮ ವಿಭಾಗದ ಪೊಲೀಸರು ಶುಕ್ರವಾರ ಸಂಚಾರ ನಿಯಮ ಉಲ್ಲಂಘಿಸುವ ಆಟೋ ಚಾಲಕ ವಿರುದ್ಧ ಕೈಗೊಂಡಿದ್ದ ವಿಶೇಷ ಕಾರ್ಯಾಚರಣೆ ವೇಳೆ ದುಬಾರಿ ದರಕ್ಕೆ ಬೇಡಿಕೆ, ದಾಖಲೆಗಳಿಲ್ಲದೆ ಆಟೋ ಚಾಲನೆ ಸೇರಿದಂತೆ ವಿವಿಧ ಸಂಚಾರ ನಿಯಮ ಉಲ್ಲಂಘನೆ ಸಂಬಂಧ 833 ಪ್ರಕರಣ ದಾಖಲಿಸಿದ್ದಾರೆ.
ಚಾಲನಾ ಪರವಾನಗಿ (ಡಿಎಲ್) ಇಲ್ಲದೆ ಆಟೋ ಚಾಲನೆ 3, ನಿಗದಿತ ದರಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ 213, ಕರೆದಲ್ಲಿಗೆ ಬಾಡಿಗೆ ಹೋಗಲು ನಿರಾಕರಿಸುವುದು 234, ಇತರೆ ನಿಯಮ ಉಲ್ಲಂಘನೆ 383 ಸೇರಿದಂತೆ ಒಟ್ಟು 833ಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ.
ನಗರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿರುವುದು ಅಪಘಾತಗಳಿಗೆ ಕಾರಣವಾಗುತ್ತಿದೆ. ಪ್ರಮುಖವಾಗಿ ಕೆಲವು ಆಟೋರಿಕ್ಷಾ ಚಾಲಕರು ಡಿಎಲ್ ಇಲ್ಲದೆ ಆಟೋ ಚಾಲನೆ ಮಾಡುವುದು, ನಿಗದಿತ ಬಾಡಿಗೆ ದರಕ್ಕಿಂತ ಹೆಚ್ಚಿನ ಹಣಕ್ಕೆ ಬೇಡಿಕೆ ಇರಿಸುವುದು, ಕರೆದಲ್ಲಿಗೆ ಬಾಡಿಗೆಗೆ ಹೋಗಲು ನಿರಾಕರಿಸುವುದರ ಬಗ್ಗೆ ಸಾಮಾಜಿಕ ಜಾಲತಾಣಗಳು ಹಾಗೂ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದೇ ವೇಳೆ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸುವ ಕುರಿತು ಹಾಗೂ ಸಂಚಾರ ನಿಯಮಗಳ ಮಹತ್ವದ ಬಗ್ಗೆ ಆಟೋ ಚಾಲಕರಿಗೆ ಅರಿವು ಮೂಡಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಈ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.