ಶುಕ್ರವಾರ ಸುರಿದ ಭಾರಿ ಮಳೆಗೆ ನಗರದಲ್ಲಿ ಬರೋಬ್ಬರಿ 949 ಮರಗಳು ಧರೆಗುರುಳಿವೆ. 2,066 ಮರಗಳ ರೆಂಬೆ ಕೊಂಬೆಗಳು ಬಿದ್ದಿವೆ ಎಂದು ಜಿಬಿಎ ತಿಳಿಸಿದೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಶುಕ್ರವಾರ ಸುರಿದ ಭಾರಿ ಮಳೆಗೆ ನಗರದಲ್ಲಿ ಬರೋಬ್ಬರಿ 949 ಮರಗಳು ಧರೆಗುರುಳಿವೆ. 2,066 ಮರಗಳ ರೆಂಬೆ ಕೊಂಬೆಗಳು ಬಿದ್ದಿವೆ ಎಂದು ಜಿಬಿಎ ತಿಳಿಸಿದೆ. ಈ ಪೈಕಿ 923 ಮರಗಳು ಹಾಗೂ 2004 ರೆಂಬೆ ಕೊಂಬೆಗಳು ತೆರವುಗೊಳಿಸಲಾಗಿದೆ. ಬಾಕಿ ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಮುಂದುವರೆದಿದೆ. ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಗರಿಷ್ಠ 330 ಮರಗಳು ಬಿದ್ದಿವೆ. ದಕ್ಷಿಣದಲ್ಲಿ 225, ಕೇಂದ್ರದಲ್ಲಿ 217 ಹಾಗೂ ಉತ್ತರದಲ್ಲಿ 100 ಮರಗಳು ನೆಲಕಚ್ಚಿವೆ. ಮಳೆ ನೀರು ನಿಲ್ಲುತ್ತಿರುವ ರಸ್ತೆಗಳ ಬದಿಯಲ್ಲಿರುವ ಚರಂಡಿ, ಮೋರಿಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಜಿಬಿಎ ಹೇಳಿದೆ.

ಜೂ.3ರವರೆಗೆ ಭಾರಿ ಮಳೆ ಮುನ್ಸೂಚನೆ: ಶುಕ್ರವಾರ ನಗರದಲ್ಲಿ 46 ಮಿ.ಮೀ ಮಳೆಯಾಗಿದ್ದು, ಜೂ.3ರ ವರೆಗೆ ಮಧ್ಯಾಹ್ನ, ಸಂಜೆ ವೇಳೆ ಗುಡುಗು, ಮಿಂಚು ಸಹಿತ ಜೋರು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶನಿವಾರವೂ ನಗರದ ಬಹುತೇಕ ಕಡೆಗಳಲ್ಲಿ ಹಗುರ ಮಳೆಯಾಗಿದೆ.