ರಾಮನಗರ: ಮನೆಗಳ್ಳನೊಬ್ಬನನ್ನು ಬಂಧಿಸಿರುವ ಬಿಡದಿ ಠಾಣೆ ಪೊಲೀಸರು 13 ಲಕ್ಷ ರುಪಾಯಿ ಮೌಲ್ಯದ 95 ಗ್ರಾಂ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ. ಪ್ರತಾಪ್ ಅಲಿಯಾಸ್ ಗೊಣ್ಣೆ ಅಲಿಯಾಸ್ ನೇಪಾಳಿ ಬಂಧಿತ ಆರೋಪಿ.

ಕಳೆದ ಫೆಬ್ರವರಿ 10ರಂದು ಪ್ರತಾಪ್ ಬಿಡದಿ ಹೋಬಳಿ ಹನುಮಂತನಗರದ ಆಂಜನೇಯಸ್ವಾಮಿ ದೇವಸ್ಥಾನದ ಬಳಿಯಿರುವ ಮನೆಯೊಂದರ ಬಾಗಿಲು ತೆಗೆದು ಒಳ ಪ್ರವೇಶಿಸಿದ್ದಾನೆ. ಮನೆಯ ಬೆಡ್ ರೂಮ್ ನಲ್ಲಿದ್ದ ಬೀರುವಿನ ಲಾಕರ್ ಮುರಿದು ಚಿನ್ನದ ಬ್ರಾಸ್ ಲೇಟ್ ಮತ್ತು ಕತ್ತಿನ ಮೂರು ಎಳೆಯ ಚೈನನ್ನು ಕಳ್ಳತನ ಮಾಡಿದ್ದಾನೆ.

ಮನೆಯಿಂದ ಹೊರಗೆ ಬಂದ ಪ್ರತಾಪನನ್ನು ನೋಡಿದ ಮನೆ ಮಾಲೀಕ ಮುನಿರತ್ನ ನೀವ್ಯಾರು ಎಂದು ಕೇಳಿದ್ದಕ್ಕೆ ಪ್ರತಾಪ್, ಇದು ಕುಮಾರ್ ಮನೆಯೇ ಎಂದು ಕೇಳಿದಾಗ ಮುನಿರತ್ನರವರು ಇದು ಮುನಿರಾಜು ಮನೆ ಎಂದು ಹೇಳಿದಾಗ ಅವರ ಗಮನವನ್ನು ಬೇರೆ ಕಡೆ ಸೆಳೆದು ಹೊರಟು ಹೋಗಿದ್ದನು. ಮನೆಯೊಳಗೆ ಪ್ರವೇಶಿಸಿ ನೋಡಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿದ್ದ ಬಿಡದಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿ ಪ್ರತಾಪನನ್ನು ಬಂಧಿಸಿ 13 ಲಕ್ಷ ರುಪಾಯಿ ಮೌಲ್ಯದ 26 ಗ್ರಾಂನ ಚಿನ್ನದ ಬ್ರಾಸ್ ಲೇಟ್, 69 ಗ್ರಾಂ ಮೂರು ಎಳೆಯ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಚಂದ್ರಪ್ಪ, ರಾಜೇಂದ್ರರವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಎನ್.ಶ್ರೀನಿವಾಸ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಿಡದಿ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವಿಜಯ ಕುಮಾರ್, ಪಿಎಸ್ಸೈ ಅಣ್ಮಯ್ಯ, ಮುಖ್ಯ ಪೇದೆ ಅರುಣ್ ಕುಮಾರ್, ಪೇದೆಗಳಾದ ಸದ್ದಾಂ, ಧನಂಜಯ್ಯ, ಗಂಗಾಧರ್, ಶಶಿಧರ್, ತನಿಖಾ ಸಹಾಯಕರಾಗಿ ಅನ್ವರ್ ಬೀಡಿ ಪಾಲ್ಗೊಂಡಿದ್ದರು.