ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ 95 ಕ್ವಿಂಟಲ್ ಅಕ್ಕಿ ವಶ: ಒಬ್ಬನ ಬಂಧನ

| Published : Oct 16 2025, 02:01 AM IST

ಕಂಟೈನರ್‌ನಲ್ಲಿ ಸಾಗಿಸುತ್ತಿದ್ದ 95 ಕ್ವಿಂಟಲ್ ಅಕ್ಕಿ ವಶ: ಒಬ್ಬನ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಪಡಿತರಕ್ಕೆ ನೀಡುವ ಅನ್ನಭಾಗ್ಯ ಯೋಜನೆಗೆ ಮೀಸಲಾಗಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಂಟೈನರ್ ಲಾರಿಯನ್ನು ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಪತ್ತೆ ಹಚ್ಚಿ ವಶಪಡಿಸಿಕೊಂಡ ಘಟನೆ ಪಟ್ಟಣದ ನೂರ್ ಮಸೀದಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಭಟ್ಕಳ

ಸರ್ಕಾರ ಪಡಿತರಕ್ಕೆ ನೀಡುವ ಅನ್ನಭಾಗ್ಯ ಯೋಜನೆಗೆ ಮೀಸಲಾಗಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಕಂಟೈನರ್ ಲಾರಿಯನ್ನು ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಪತ್ತೆ ಹಚ್ಚಿ ವಶಪಡಿಸಿಕೊಂಡ ಘಟನೆ ಪಟ್ಟಣದ ನೂರ್ ಮಸೀದಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ನಡೆದಿದೆ.

ಕಂಟೈನರ್ ಕಂಟೈನರ್ (KA–52 B–4877) ನಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಪಡಿತರ ಅಕ್ಕಿ ಸಾಗಾಟ ಆಗುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ನಿರೀಕ್ಷಕ ಉದಯ ತಳವಾರ ಹಾಗೂ ಡಿವೈಎಸ್ಪಿ ಮಹೇಶ್ ಕೆ.ಎಂ. ನೇತೃತ್ವದಲ್ಲಿ ದಾಳಿ ನಡೆಸಿ 9,500 ಕೆಜಿ (ಅಂದಾಜು ಮೌಲ್ಯ ₹3.23 ಲಕ್ಷ) ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದಾರೆ.

ಮೊಹಮ್ಮದ್ ಸಮೀರ್ ಭಟ್ಕಳ ಎಂಬಾತನೇ ಈ ಅಕ್ರಮ ಸಾಗಾಟದ ಮುಖ್ಯ ಶಂಕಿತನೆಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಸ್ಥಳದಲ್ಲಿದ್ದ ವಾಹನದ ಚಾಲಕ ಪ್ರವೀಣ್ ಎನ್.ಆರ್. (28, ನರಸಿನಕುಪ್ಪೆ–ಹಾಸನ) ಅವರನ್ನು ಬಂಧಿಸಲಾಗಿದೆ. ಈ ಕುರಿತು ಆಹಾರ ನಿರೀಕ್ಷಕ ಉದಯ ತಳವಾರ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪಿಎಸ್‌ಐ ನವೀನ ನಾಯ್ಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಕಂಟೈನರ್ ವಾಹನ ಹಾಗೂ ಪಡಿತರ ಅಕ್ಕಿ ವಶಪಡಿಸಿಕೊಂಡಿದ್ದು, ಪ್ರಮುಖ ಆರೋಪಿ ಮತ್ತು ಇತರರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.ನಕಲಿ ವೈದ್ಯನಾಗಿ ಕೆಲಸ ನಿರ್ವಹಿಸಿದ್ದವನ ವಿರುದ್ಧ ದೂರು:

ನಕಲಿ ಎಂಬಿಬಿಎಸ್ ಪ್ರಮಾಣ ಪತ್ರ ಸೃಷ್ಟಿಸಿ ಭಟ್ಕಳ ಪಟ್ಟಣದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸುಮಾರು ಒಂದು ವರ್ಷಗಳ ಕಾಲ ವೈದ್ಯನೆಂದು ಕರ್ತವ್ಯ ನಿರ್ವಹಿಸಿದ್ದ ವ್ಯಕ್ತಿ ಹಾಜರು ಪಡಿಸಿದ್ದ ವೈದ್ಯಕೀಯ ವ್ಯಾಸಾಂಗ ಪ್ರಮಾಣ ಪತ್ರವೇ ನಕಲಿಯೆಂದು ತಿಳಿದು ಬಂದಿದ್ದರಿಂದ ಆತನ ವಿರುದ್ಧ ಆಸ್ಪತ್ರೆ ಆಡಳಿತ ವಿಭಾಗ ದೂರು ದಾಖಲಿಸಿದ ಬಗ್ಗೆ ವರದಿಯಾಗಿದೆ.ಪಟ್ಟಣದ ಸಯ್ಯದ್ ಅಬುಲ್‌ಅಲಾ ಬರ್ಮಾವರ್ ನಗರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ಉಡುಪಿ ಜಿಲ್ಲೆಯ ಗಂಗೊಳ್ಳಿಯ ನಿವಾಸಿ ಅಬುಮಹ್ಮದ್ ಉಸಾಮಾ ತಂದೆ ಖಾಜಿ ಅಬ್ದುಲ್ ಹಮೀದ್ ಎಂಬಾತ, ೨೦೨೪ರ ಅ. ೭ರಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್ (ಕೆಎಂಸಿ) ನಕಲಿ ಪ್ರಮಾಣ ಪತ್ರ ಸೃಷ್ಟಿಸಿ, ಅದನ್ನು ನೈಜವೆಂದು ತೋರಿಸಿ ತಾನು ಎಂಬಿಬಿಎಸ್ ಡಾಕ್ಟರ್ ಎಂದು ಪರಿಚಯಿಸಿಕೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯನಾಗಿ ಪಾರ್ಟ್‌ ಟೈಮ್ ಕೆಲಸ ಮಾಡುತ್ತಾ ಸಂಬಳ ಪಡೆಯುತ್ತಿದ್ದು ನಮ್ಮ ಆಸ್ಪತ್ರೆಗೆ ವಂಚನೆ ಎಸಗಿದ್ದಾನೆ ಎಂದು ತಿಳಿಸಿದ್ದಾರೆ. ಪ್ರಕರಣವು ಕಳೆದ ೨೦೨೫ರ ಸೆಪ್ಟೆಂಬರ್ ೨ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಾರವಾರ ಆಸ್ಪತ್ರೆಯಲ್ಲಿ ನಡೆಸಿದ ಪರಿಶೀಲನೆಯ ವೇಳೆ ಬೆಳಕಿಗೆ ಬಂದಿತ್ತು. ಆಗ ಆರೋಪಿತನಾದ ಉಸಾಮಾ ನಕಲಿ ವೈದ್ಯನೆಂದು ಪತ್ತೆಯಾದ ಕಾರಣ, ಅ. ೧೦ರಂದು ಸಂಬಂಧ ಪಟ್ಟವರಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು. ಇದರಿಂದಾಗಿ ಫಿರ್ಯಾದಿ ಸಯ್ಯದ್ ಅಬುಲ್‌ಅಲಾ ಬರ್ಮಾವರ್ ಅವರು ಭಟ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.