ಹಲಗೂರು:
ಮಾರಗೌಡನಹಳ್ಳಿ ಸರ್ಕಾರಿ ಪ್ರೌಢಶಾಲೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.98.67 ರಷ್ಟು ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಎಸ್ ಡಿಸಿಎಂಸಿ ಹಾಗೂ ಶಾಲೆಯಿಂದ ಅತಿ ಹೆಚ್ಚು ಅಂಕ ಪಡೆದ ಐವರು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.ಹೆಚ್ಚು ಅಂಕ ಪಡೆದ ಶಾಲೆ ವಿದ್ಯಾರ್ಥಿಗಳಾದ ಸಹನಾ ಎಂ.ಸಿ.( 616), ಹಂಸ( 610), ಹಂಸ ಪಿ.(610), ತೀರ್ಥಶ್ರೀ (601), ಲತಾ ಎಚ್.ಎಂ.( 600) ಅವರನ್ನು ಅಭಿನಂದಿಸಿದ ಮುಖ್ಯ ಶಿಕ್ಷಕಿ ಎಸ್.ಶಕುಂತಲಾ ಮಾತನಾಡಿ, ಪರೀಕ್ಷೆ ಬರೆದ 226 ಮಕ್ಕಳ ಪೈಕಿ 223 ಮಕ್ಕಳು ತೇರ್ಗಡೆ ಹೊಂದಿ ಶಾಲೆಗೆ 98.67ರಷ್ಟು ಫಲಿತಾಂಶ ಬಂದಿದೆ. ಉಳಿದ ಮೂರು ಮಕ್ಕಳು ಸ್ವಲ್ಪ ಇನ್ನೂ ಶ್ರಮವಹಿಸಿ ವ್ಯಾಸಂಗ ಮಾಡಿದ್ದರೆ ನೂರಕ್ಕೆ ನೂರು ಫಲಿತಾಂಶ ನಮ್ಮ ಶಾಲೆಗೆ ಲಭಿಸುತ್ತಿತ್ತು ಎಂದರು.
ಉತ್ತಮ ಫಲಿತಾಂಶ ತರಲು ನಮ್ಮ ಶಾಲಾ ಎಲ್ಲಾ ಸಿಬ್ಬಂದಿ ರಾತ್ರಿ ತರಗತಿ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಿದ್ದಾರೆ. ಶಾಸಕರ ಮಾರ್ಗದರ್ಶನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸೂಚನೆ, ಸಲಹೆ ಮೇರೆಗೆ ಫಲಿತಾಂಶ ಬರಲು ಸಾಧ್ಯವಾಗಿದೆ. ಎಸ್ ಡಿಎಂಸಿ ಸದಸ್ಯರು ಹಾಗೂ ಶಿಕ್ಷ ಕವೃಂದಕ್ಕೆ ನಾನು ಆಭಾರಿಯಾಗಿದ್ದೇನೆ. ತೇರ್ಗಡೆ ಹೊಂದಿರುವ ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದರು.ಎಸ್‌ಡಿಎಂಸಿ ಅಧ್ಯಕ್ಷ ರವೀಶ್ ಮಾತನಾಡಿ, ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿದ್ದೇವೆ. ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಬೇಕು ಎಂದು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ಭರಿಸುವ ಬದಲು ಖಾಸಗಿ ಶಾಲೆಗಳ ವ್ಯಾಮೋಹವನ್ನು ಬಿಟ್ಟು, ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕುತ್ತಿದೆ. ಸರ್ಕಾರದಿಂದ ಸವಲತ್ತು ಸಿಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಮಕ್ಕಳ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವೇಳೆ ಮುಖ್ಯ ಶಿಕ್ಷಕಿ ಎಸ್.ಶಕುಂತಲಾ, ಶಿಕ್ಷಕರಾದ ಡಿ.ಪಿ.ಮಹೇಶ್, ಕೃಷ್ಣಸ್ವಾಮಿ, ಸಿಆರ್ ಪಿ ಜಿ.ಎಸ್. ಕೃಷ್ಣ, ಎಸ್ ಡಿ ಎಂ ಸಿ ಅಧ್ಯಕ್ಷ ರವೀಶ ಹಾಗೂ ಸದಸ್ಯರಾದ ಪುಟ್ಟರಾಜು, ಮಹೇಶ ಸೇರಿದಂತೆ ಇತರರು ಇದ್ದರು.