ಸಾರಾಂಶ
ಸಾಗರ: ಗಣತಿಗೆ ಬರುವ ಶಿಕ್ಷಕರನ್ನು ನಿಮ್ಮ ಮನೆ ಅತಿಥಿಗಳಂತೆ ನೋಡಿ. ಸರ್ಕಾರ ಗಣತಿಗೆ ನಿಯೋಜಿಸಿರುವ ಶಿಕ್ಷಕರನ್ನು ಬೈಯಬೇಡಿ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮನವಿ ಮಾಡಿದರು.
ಪಟ್ಟಣದ ನೆಹರೂ ಮೈದಾನದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ತಾಲೂಕುಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.ಸರ್ಕಾರ ಮಹತ್ತರವಾದ ಉದ್ದೇಶದಿಂದ ಗಣತಿ ನಡೆಸುತ್ತಿದೆ. ತಾಲೂಕಿನಲ್ಲಿ ಈತನಕ ಶೇ.೯೮ರಷ್ಟು ಗಣತಿ ಕಾರ್ಯ ಮುಗಿದಿದೆ. ಕೆಲವು ಕಡೆಗಳಲ್ಲಿ ಮಾಹಿತಿ ಸಂಗ್ರಹಕ್ಕೆ ಬಂದ ಶಿಕ್ಷಕರನ್ನು ಕೇವಲವಾಗಿ ನಡೆಸಿಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸಾಧ್ಯವಾದರೆ ಮಾಹಿತಿ ಕೊಡಿ. ಇಲ್ಲವಾದಲ್ಲಿ ತಿರಸ್ಕಾರ ಮಾಡಿ. ತಾಲೂಕಿನಲ್ಲಿ ಶಿಕ್ಷಕರು ಗಣತಿಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರಿಗೆ ಸರ್ಕಾರದ ಪರವಾಗಿ ಅಭಿನಂದನೆ ಸಲ್ಲಿಸುತ್ತಿದ್ದೇನೆ ಎಂದರು.ಕ್ರೀಡಾಸ್ಫೂರ್ತಿಯಿಂದ ಮಕ್ಕಳು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ನೆಹರೂ ಮೈದಾನದಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಸುಸಜ್ಜಿತವಾದ ವೇದಿಕೆ, ಶೌಚಾಲಯ, ಡ್ರೆಸ್ಸಿಂಗ್ ರೂಮ್ ನಿರ್ಮಾಣಕ್ಕೆ ೪೦ ಲಕ್ಷ ರು. ಮೈದಾನದ ಸುತ್ತಲೂ ಫೆನ್ಸಿಂಗ್ ನಿರ್ಮಾಣಕ್ಕೆ ೨೦ ಲಕ್ಷ ರು. ಮೀಸಲಿರಿಸಿದ್ದು, ಅ.೧೮ಕ್ಕೆ ಕಾಮಗಾರಿ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದರು.ಶಿಕ್ಷಕರ ಸಂಘದ ಅಧ್ಯಕ್ಷ ಮಾಲತೇಶ್ ಅಧ್ಯಕ್ಷತೆ ವಹಿಸಿದ್ದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಸದಸ್ಯರಾದ ಗಣಪತಿ ಮಂಡಗಳಲೆ, ಮಧುಮಾಲತಿ, ಸೈಯದ್ ಜಾಕೀರ್, ಪ್ರಮುಖರಾದ ಪರಶುರಾಮಪ್ಪ, ಭೂಮೇಶ್, ರಮೇಶ್, ಶಿವಪ್ರಕಾಶ್.ಬಿ.ಎಲ್, ಚಂದ್ರಪ್ಪ, ಪಾರ್ವತಮ್ಮ, ರಾಜಶೇಖರ ಶೆಟ್ಟಿ, ಡಾ.ಅನ್ನಪೂರ್ಣ, ಮೂರ್ತಿ.ಎಂ.ವೈ ಹಾಜರಿದ್ದರು.