ಸಾರಾಂಶ
ಬೆಂಗಳೂರು : ಮೋಟಾರು ವಾಹನ ತೆರಿಗೆ ಪಾವತಿಸದೆ ನಗರದಲ್ಲಿ ಸಂಚರಿಸುತ್ತಿದ್ದ ಎರಡು ಐಷಾರಾಮಿ ಕಾರುಗಳ ಮಾಲೀಕರಿಂದ ಸಾರಿಗೆ ಅಧಿಕಾರಿಗಳು ಶುಕ್ರವಾರ 99 ಲಕ್ಷ ರು. ತೆರಿಗೆ ವಸೂಲಿ ಮಾಡಿದ್ದಾರೆ.
ಇಂದಿರಾನಗರದ ನಿವಾಸಿ ಉದ್ಯಮಿ ರಾಜೀವ್ ಎಂಬುವರಿಗೆ ಸೇರಿದ 5 ಕೋಟಿ ರು. ಮೌಲ್ಯದ ಫೆರಾರಿ ಹಾಗೂ 2 ಕೋಟಿ ರು. ಮೌಲ್ಯದ ಬೆಂಜ್ ಕಾರುಗಳು ಹೊರ ರಾಜ್ಯದಲ್ಲಿ ನೋಂದಣಿಯಾಗಿದ್ದು, ರಾಜ್ಯದಲ್ಲಿ ತೆರಿಗೆ ಪಾವತಿಸಿರಲಿಲ್ಲ. ಅದರಂತೆ ಪಿವೈ 05 ಕೆ 6309 ನೋಂದಣಿ ಸಂಖ್ಯೆಯ ಮರ್ಸಿಡಿಜ್ ಬೆಂಜ್ ಕಾರನ್ನು ಪಾಂಡಿಚೆರಿಯಲ್ಲಿ ನೋಂದಣಿ ಮಾಡಿಕೊಂಡು, ಅಲ್ಲಿ 12.22 ಲಕ್ಷ ರು. ತೆರಿಗೆ ಪಾವತಿಸಿದ್ದರು. ಹಾಗೆಯೇ, ಜೆಎಚ್ 10 ಬಿಎಸ್ 0099 ನೋಂದಣಿ ಸಂಖ್ಯೆಯ ಫೆರಾರಿ ಕಾರನ್ನು ಜಾರ್ಖಂಡ್‌ನಲ್ಲಿ ನೋಂದಣಿ ಮಾಡಿಸಿ, ಅಲ್ಲಿ 14.53 ಲಕ್ಷ ರು. ಮೊಟಾರು ವಾಹನ ತೆರಿಗೆ ಪಾವತಿಸಿದ್ದರು. ಹೀಗಾಗಿ ಎರಡೂ ಕಾರುಗಳಿಗೆ ರಾಜ್ಯದಲ್ಲಿ ತೆರಿಗೆ ಪಾವತಿಸದೇ ಸಂಚರಿಸಲಾಗುತ್ತಿದೆ.
ಈ ಕುರಿತು ಮಾಹಿತಿಯನ್ನಾಧರಿಸಿ ಕಳೆದೆರಡು ತಿಂಗಳ ಹಿಂದೆಯೇ ಕಾರಿನ ಮಾಲೀಕರಿಗೆ ತೆರಿಗೆ ಪಾವತಿಸುವಂತೆ ಸಾರಿಗೆ ಅಧಿಕಾರಿಗಳು ಕಾರಿನ ಮಾಲೀಕರಿಗೆ ನೋಟಿಸ್ ನೀಡಿದ್ದರು. ಆದರೆ, ತೆರಿಗೆ ಪಾವತಿಸಲು ಕಾರಿನ ಮಾಲೀಕರು ಮುಂದಾಗಿರಲಿಲ್ಲ. ಹೀಗಾಗಿ ಶುಕ್ರವಾರ ಸಾರಿಗೆ ಅಧಿಕಾರಿಗಳು ಮತ್ತೊಮ್ಮೆ ಕಾರಿನ ಮಾಲೀಕರಿಗೆ ನೋಟಿಸ್ ನೀಡಿ ತೆರಿಗೆ ಪಾವತಿಸಲು ಸೂಚಿಸಿದ್ದಾರೆ. ಒಂದು ವೇಳೆ ತೆರಿಗೆ ಪಾವತಿಸದಿದ್ದರೆ ಕಾರುಗಳನ್ನು ಜಪ್ತಿ ಮಾಡುವುದಾಗಿಯೂ ತಿಳಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಕಾರಿನ ಮಾಲೀಕರು ಪಿವೈ 05 ಕೆ 6309 ನೋಂದಣಿ ಸಂಖ್ಯೆಯ ಮರ್ಸಿಡಿಜ್ ಬೆಂಜ್ ಕಾರಿಗೆ 37.03 ಲಕ್ಷ ರು. ಮತ್ತು ಜೆಎಚ್ 10 ಬಿಎಸ್ 0099 ನೋಂದಣಿ ಸಂಖ್ಯೆಯ ಫೆರಾರಿ ಕಾರಿಗೆ 61.94 ಲಕ್ಷ ರು. ಒಟ್ಟು 98.98 ಲಕ್ಷ ರು. ತೆರಿಗೆ ಪಾವತಿಸಿದ್ದಾರೆ.