ಕಮಲನಗರದಲ್ಲಿ ಸಾರಿಗೆ ಬಸ್ ಕೊರತೆ; ಬಸವಳಿದ ವಿದ್ಯಾರ್ಥಿಗಳು

| Published : Jul 26 2025, 12:00 AM IST

ಕಮಲನಗರದಲ್ಲಿ ಸಾರಿಗೆ ಬಸ್ ಕೊರತೆ; ಬಸವಳಿದ ವಿದ್ಯಾರ್ಥಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಸಾರಿಗೆ ಸಂಸ್ಥೆ ಬಸ್‌ಗಳ ಕೊರತೆ, ಶಕ್ತಿ ಯೋಜನೆ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಿ ಕಾಡುತ್ತಿದ್ದು, ಕಮಲನಗರ- ಸಂಗಮ ನಡುವಿನ ಸಂಚಾರ ಮಾಡಲು ಶಾಲಾ ಮಕ್ಕಳು ಅನಿವಾರ್ಯವಾಗಿ ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುವ ಸ್ಥಿತಿ ಉಲ್ಬಣಗೊಂಡಿದೆ.

ಕನ್ನಡಪ್ರಭ ವಾರ್ತೆ ಕಮಲನಗರ

ಸಾರಿಗೆ ಸಂಸ್ಥೆ ಬಸ್‌ಗಳ ಕೊರತೆ, ಶಕ್ತಿ ಯೋಜನೆ ವಿದ್ಯಾರ್ಥಿಗಳ ಪಾಲಿಗೆ ಶಾಪವಾಗಿ ಕಾಡುತ್ತಿದ್ದು, ಕಮಲನಗರ- ಸಂಗಮ ನಡುವಿನ ಸಂಚಾರ ಮಾಡಲು ಶಾಲಾ ಮಕ್ಕಳು ಅನಿವಾರ್ಯವಾಗಿ ಜೀವ ಕೈಯಲ್ಲಿ ಹಿಡಿದು ಪ್ರಯಾಣ ಮಾಡುವ ಸ್ಥಿತಿ ಉಲ್ಬಣಗೊಂಡಿದೆ.

ಪ್ರತಿನಿತ್ಯ ಸಂಗಮ, ಸಾವಳಿ, ಹೊಳಸಮುದ್ರ ಹಾಗೂ ಡಿಗ್ಗಿ ಗ್ರಾಮಗಳಿಂದ ನೂರಾರು ವಿದ್ಯಾರ್ಥಿಗಳು ಪಟ್ಟಣದ ವಿವಿಧ ಶಾಲೆಗಳಿಗೆ ವ್ಯಾಸಂಗಕ್ಕಾಗಿ ಆಗಮಿಸುತ್ತಾರೆ. ಬೆಳಿಗ್ಗೆ ಶಾಲೆಗೆ ಬರುವಾಗಲೂ ಸಂಜೆ ಮನೆಗೆ ವಾಪಸ್ಸಾಗುವಾಗಲೂ ಮಕ್ಕಳಿಗೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಸೀಟ್ ಗಳ ಸಿಗೋದ ಬಿಡಿ ಸರಿಯಾಗಿ ಬಸ್‌ನಲ್ಲಿ ನಿಂತಕೊಳ್ಳಲೂ ಆಗುವುದಿಲ್ಲ.

ಬಸ್‌ನ ಬಾಗಿಲಿನಲ್ಲಿ ಜೋತು ಬಿದ್ದು ಇಕ್ಕಟ್ಟಾದ ಸ್ಣಳದಲ್ಲೇ ಒಬ್ಬರನೊಬ್ಬರು ಹಿಡಿದುಕೊಂಡು ಅಪಾಯಕಾರಿ ಪ್ರಯಾಣ ಮಾಡುತ್ತಿರುವುದು ಕಂಡು ಬಂದಿದೆ. ಈ ಮಾರ್ಗ ಭಾಲ್ಕಿ-ಉದಗಿರ್ ಎಕ್ಸ್‌ಪ್ರೆಸ್ ಬಸ್ ಗಳ ಸಂಖ್ಯೆ ಜಾಸ್ತಿಯಿದ್ದು, ಈ ಮಾರ್ಗದಲ್ಲಿ ಸಾಮಾನ್ಯ ಬಸ್‌ಗಳ ಓಡಾಟ ತೀರಾ ಕಮ್ಮಿ ಇದೆ. ಬರುವ ಒಂದೆರಡು ಬಸ್‌ಗಳಲ್ಲಿ ಶಕ್ತಿ ಯೋಜನೆ ಮಹಿಳೆಯರು ಜಾಸ್ತಿ ಇರುತ್ತಾರೆ. ಅಲ್ಲದೆ, ಬಸ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಸಮಸ್ಯೆ ತೀವ್ರಗೊಂಡಿದೆ. ಹೀಗಾಗಿ ಮಕ್ಕಳು ಸಂಜೆ ವೇಳೆಯಲ್ಲಿ ಮನೆಗೆ ಹೋಗುವ ಅವಸರದಲ್ಲಿ ತುಂಬಿದ ಬಸ್‌ನಲ್ಲಿ 15 ರಿಂದ 20 ಜನ ವಿದ್ಯಾರ್ಥಿಗಳು ಹೆಗಲಿಗೆ ಬ್ಯಾಗ್‌ಹಾಕ್ಕೊಂಡು, ಬಾಗಿಲಲ್ಲಿ ಜೋತು ಬಿದ್ದು ಪ್ರವಾಸ ಮಾಡುತ್ತಿರುವ ಘಟನೆ ನಿರಂತರವಾಗಿ ನಡೆಯುತ್ತಿದೆ.

ಮಕ್ಕಳಿಗೆ ಏನಾದ್ರು ಆದ್ರೆ, ಹೊಣೆ ಯಾರು?

ಕಮಲನಗರ ತಾಲೂಕು ಕೇಂದ್ರವಾದರೂ ಇಲ್ಲಿರುವ ಬಸ್ ನಿಲ್ದಾಣಕ್ಕೆ ಯಾವುದೇ ಬಸ್ ಸಂಚಾರ ಮಾಡುವುದಿಲ್ಲ. ಅಲ್ಲಮಪ್ರಭು ವೃತದಲ್ಲೆ ಬಸ್‌ಗಳು ಬಂದು ಹೊಗುತ್ತವೆ. ಹೀಗಾಗಿ ಸಾರಿಗೆ ಸಂಸ್ಥೆ ಇಲ್ಲೊಬ್ಬ ಸಾರಿಗೆ ನಿಯಂತ್ರಣಾಧಿಕಾರಿ ಹಾಕಿ ಪ್ರವಾಸಿಗರ ಹಿತ ಕಾಪಾಡಬೇಕಾಗಿದೆ. ಆದರೆ, ಹಿಂದುಳಿದ ಭಾಗ ಇದಾಗಿದೆ. ಯಾರು ಏನು ಮಾಡಿದರೂ ಕೇಳುವುದಿಲ್ಲ. ಈ ನಡುವೆ ಮಕ್ಕಳಿಗೆ ಏನಾದ್ರು ಆದ್ರೆ, ಯಾರು ಹೊಣೆಗಾರರು? ಎಂದು ಸಂತೋಷ ಬಿರಾದರ ಆತಂಕ ವ್ಯಕ್ತಪಡಿಸಿದ್ದಾರೆ.

ಅವ್ಯವಸ್ಥೆ ಸರಿಪಡಿಸಲಾಗುವುದು

ಕಮಲನಗರ ಸಂಗಮ ಮಾರ್ಗದಲ್ಲಿನ ಪರಿಸ್ಥಿತಿ ಕುರಿತು ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತಂದು ಅಲ್ಲಿನ ಅವ್ಯವಸ್ಥೆ ಸರಿಪಡಿಸಲಾಗುವುದು ಎಂದು ಘಟಕ ವ್ಯವಸ್ಥಾಪಕ ರಾಜಶೇಖರ್ ''''''''''''''''ಕನ್ನಡಪ್ರಭ''''''''''''''''ಕ್ಕೆ ಸ್ಪಷ್ಟಪಡಿಸಿದ್ದಾರೆ.