ಸಾರಾಂಶ
ಹಾನಗಲ್ಲ: ಬೆಳೆಯುವವರನ್ನು ಕಾಲು ಹಿಡಿದು ಎಳೆಯುವ ಕೆಲಸ ಮಾಡಬೇಡಿ, ವೀರಶೈವ ಲಿಂಗಾಯತರ ೯೯ ಪಂಗಡಗಳು ಒಂದಾಗಬೇಕು. ಪರಸ್ಪರ ವೈಮನಸ್ಸು ಅಸೂಯೆಯಿಂದ ಹೊರಬನ್ನಿ, ಸೌಹಾರ್ದ ಸಂಘಟನೆ ಬೇಕಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಕರೆ ನೀಡಿದರು.
ಭಾನುವಾರ ಇಲ್ಲಿ ಆಯೋಜಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಹಾನಗಲ್ಲ ತಾಲೂಕು ಘಟಕದ ಸೇವಾ ದೀಕ್ಷಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.೧೨೦ ವರ್ಷಗಳ ಇತಿಹಾಸ ಇರುವ ವೀರಶೈವ ಲಿಂಗಾಯತ ಮಹಾಸಭೆಯ ಚಟುವಟಿಕೆ ಇನ್ನೂ ಭರದಿಂದ ಸಮಾಜದ ಹಿತಕ್ಕಾಗಿ ಮುನ್ನಡೆಯಬೇಕಾಗಿದೆ. ವೀರಶೈವ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿ ನಿಲಯಗಳನ್ನು ತೆರೆಯಬೇಕಾಗಿದೆ. ನಾವು ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಶಕ್ತಿಯಾಗಬೇಕಾಗಿದೆ. ನಮ್ಮ ಮಂತ್ರಗಳು ಕನ್ನಡದಲ್ಲಿರಲಿ. ಜಿಲ್ಲೆಗೊಂದು ಉದ್ಯೋಗ ಮಾರ್ಗದರ್ಶನ ಕೇಂದ್ರಗಳನ್ನು ಆರಂಭಿಸಲಿದ್ದೇವೆ. ಉಪಜಾತಿ ಮರೆತು ವೀರಶೈವ ಲಿಂಗಾಯತರು ಒಂದಾಗೋಣ ಎಂದರು.ಬಮ್ಮನಹಳ್ಳಿ ವಿರಕ್ತಮಠದ ಶಿವಯೋಗೀಶ್ವರ ಮಹಾಸ್ವಾಮಿಗಳು ಮಾತನಾಡಿ, ವೀರಶೈವ ಲಿಂಗಾಯತರಲ್ಲಿ ಮೇಧಾವಿಗಳು, ಹೃದಯ ವಿಶಾಲತೆ ಉಳ್ಳವರು ಇದ್ದಾರೆ. ಆದರೆ ಅಸಂಘಟನೆಯಿಂದಾಗಿ, ರಾಜಕೀಯ ಐಕ್ಯತೆ ಇಲ್ಲದ ಕಾರಣ ನಮ್ಮವರು ಎಲ್ಲ ರಂಗಗಳಲ್ಲಿ ಹಿಂದುಳಿದಿದ್ದಾರೆ. ನಮ್ಮ ಸಮಾಜದ ಮಕ್ಕಳಿಗಾಗಿ ಉತ್ತಮ ಭವಿಷ್ಯಕ್ಕೆ ಈಗಲೇ ಆಲೋಚಿಸಬೇಕಾಗಿದೆ. ನಾಳೆಯ ನಮ್ಮ ಪೀಳಿಗೆಗಾಗಿ ಎಲ್ಲರೂ ಒಂದಾಗೋಣ ಎಂದರು.ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಬಾಳೂರು ಅಡವಿಸ್ವಾಮಿ ಮಠದ ಕುಮಾರಮಹಾಸ್ವಾಮಿಗಳು, ಅಕ್ಕಿಆಲೂರಿನ ಶಿವಬಸವಮಹಾಸ್ವಾಮಿಗಳು, ಹೋತನಹಳ್ಳಿ ಸಿದ್ಧಾರೂಢ ಮಠದ ಶಂಕರಾನಂದ ಮಹಾಸ್ವಾಮಿಗಳು, ಕೂಡಲದ ಗುರುನಂಜೇಶ್ವರ ಮಠದ ಗುರುಮಹೇಶ್ವರ ಮಹಾಸ್ವಾಮಿಗಳು, ತಿಳವಳ್ಳಿಯ ನಿರಂಜನ ಮಹಾಸ್ವಾಮಿಗಳು ಉತಸ್ಥಿತರಿದ್ದರು. ಜಿಲ್ಲಾಧ್ಯಕ್ಷ ಎಂ.ಎಸ್. ಕೋರಿಶೆಟ್ಟರ, ತಾಲೂಕು ಅಧ್ಯಕ್ಷ ಶಿವಕುಮಾರ ದೇಶಮುಖ, ಜಿಲ್ಲಾ ಪ್ರತಿನಿಧಿ ಬಸವರಾಜ ಹಾದಿಮನಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಹಾವೇರಿ, ರಾಜ್ಯ ಸದಸ್ಯ ಶಂಭು ಚಕ್ಕಡಿ, ಜಿಲ್ಲಾ ಪ್ರತಿನಿಧಿ ರಾಜೇಶ ಗುಡಿ, ರಾಣಿಬೆನ್ನೂರು ತಾಲೂಕು ಅಧ್ಯಕ್ಷ ಕೆ.ಎನ್. ಕೋರಧಾನ್ಯಮಠ, ಹಾವೇರಿ ತಾಲೂಕು ಅಧ್ಯಕ್ಷ ಮೃತ್ಯುಂಜಯ ಬುಕ್ಕಶೆಟ್ಟಿ, ಬ್ಯಾಡಗಿ ತಾಲೂಕು ಅಧ್ಯಕ್ಷ ವಿಶ್ವನಾಥ ಅಂಕಲಕೋಟಿ, ಹಿರೇಕೇರೂರು ತಾಲೂಕು ಅಧ್ಯಕ್ಷ ಶಿವಕುಮಾರ ತಿಪ್ಪಶೆಟ್ಟಿ, ಶಿಗ್ಗಾಂವಿ ತಾಲೂಕು ಅಧ್ಯಕ್ಷ ಬಸವರಾಜ ರಾಗಿ ಅತಿಥಿಗಳಾಗಿದ್ದರು. ಶಿವಯೋಗಪ್ಪ ಮಲ್ಲಿಗಾರ ಸ್ವಾಗತಿಸಿದರು. ನಾಗರಾಜ ಪಾವಲಿ ಪ್ರಾಸ್ತಾವಿಕ ಮಾತನಾಡಿದರು, ಷಣ್ಮುಖಪ್ಪ ಮುಚ್ಚಂಡಿ ಕಾರ್ಯಕ್ರಮ ನಿರೂಪಿಸಿದರು.