ಕೂಡಲಸಂಗಮ ಹಾಗೂ ಹರಿಹರ ಪಂಚಮಸಾಲಿ ಪೀಠದಲ್ಲಿನ ಲೆಕ್ಕಪತ್ರದ ಕುರಿತಂತೆ ಭುಗಿಲೆದ್ದಿರುವ ವಿವಾದ ಕುರಿತಾಗಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಪಂಚಮಸಾಲಿ ಮುಖಂಡರ ಸಭೆ ನಡೆಯಿತು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಕೂಡಲಸಂಗಮ ಹಾಗೂ ಹರಿಹರ ಪಂಚಮಸಾಲಿ ಪೀಠದಲ್ಲಿನ ಲೆಕ್ಕಪತ್ರದ ಕುರಿತಂತೆ ಭುಗಿಲೆದ್ದಿರುವ ವಿವಾದ ಕುರಿತಾಗಿ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಪಂಚಮಸಾಲಿ ಮುಖಂಡರ ಸಭೆ ನಡೆಯಿತು.

ಸಭೆಯಲ್ಲಿ ಕಾವೇರಿದ ಚರ್ಚೆ, ಮಾತಿನ ಚಕಮಕಿ, ವಾಗ್ವಾದಗಳು ನಡೆದವು. ಪಂಚಮಸಾಲಿ ಸಂಘ, ಟ್ರಸ್ಟ್ ಮತ್ತು ಸ್ವಾಮೀಜಿಗಳ ನಡುವೆ ಮನಸ್ತಾಪಗಳಿದ್ದು, ಪೀಠದಲ್ಲಿ ಸಮಸ್ಯೆ ಬಗೆಹರಿಸಲು ಪಕ್ಷಾತೀತವಾಗಿ 10 ಜನರ ಸಮಿತಿ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಈಗ ಎರಡು ಪೀಠಗಳಲ್ಲಿನ ವಿವಾದದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಐದು ಪೀಠ ಸ್ಥಾಪಿಸಬೇಕೋ ಅಥವಾ ಒಂದೇ ಪೀಠ ಸಾಕೋ? ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿದೆ. ಪಂಚಮಸಾಲಿ ಪೀಠದ ವಿವಾದಗಳ ಕುರಿತಾಗಿ ನಡೆದ ಸಮಾಜದ ಮುಖಂಡರ ಸಭೆಯಲ್ಲಿ ಕೆಲವರು 5 ಪೀಠ ಸ್ಥಾಪಿಸಬೇಕೆಂದು ಸಲಹೆ ನೀಡಿದ್ದಾರೆ. ಇದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿ, 2 ಪೀಠ ಇದ್ದಾಗಲೇ ಇಷ್ಟೊಂದು ಅಪಸ್ವರ, ಭಿನ್ನಾಭಿಪ್ರಾಯ ಮೂಡಿ ಬೀದಿ ರಂಪವಾಗಿದೆ. ಸಮಾಜಕ್ಕೆ ಕೆಟ್ಟ ಅಭಿಪ್ರಾಯಗಳು ಮೂಡುತ್ತಿವೆ. ಹೀಗಾಗಿ, 5 ಪೀಠ ಸ್ಥಾಪನೆ ಬೇಡವೇ ಬೇಡ. ಈಗಿರುವ ಎರಡರಲ್ಲಿ ಒಂದೇ ಪೀಠ ಮಾಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಪೀಠ ಸ್ಥಾಪಿಸುವ ಕುರಿತು ರಾಜ್ಯದ ಎಲ್ಲ ನಾಯಕರು ಸೇರಿ ಅಭಿಪ್ರಾಯ ಸಂಗ್ರಹಿಸಬೇಕು. ಇದಕ್ಕಾಗಿ ಮತ್ತೆ ಸಭೆ ನಡೆಸಿ, ಚರ್ಚಿಸಿದ ಬಳಿಕ ಸ್ಪಷ್ಟ ತೀರ್ಮಾನಕ್ಕೆ ಬರಬೇಕು. ಅಲ್ಲಿವರೆಗೂ ಪೀಠಗಳ ಸ್ಥಾಪನೆ ಬಗ್ಗೆ ಬಹಿರಂಗ ಚರ್ಚೆ ಬೇಡ ಎಂದು ಮನವಿಯನ್ನು ಇಂದಿನ ಸಭೆಯಲ್ಲಿ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.ಸಭೆಯಲ್ಲಿ ಹರಿಹರ ಪಂಚಮಸಾಲಿ ಪೀಠದ ವಿವಾದದ ಬಗ್ಗೆ ಚರ್ಚೆ ನಡೆಯಿತು. ಸಮಾಜದ ಮುಖಂಡರು ಸ್ವಾಮೀಜಿ ಪರ-ವಿರೋಧದ ಭಕ್ತರೊಂದಿಗೆ ಸಮಾಲೋಚನೆ ನಡೆಸಲು ಪ್ರಯತ್ನ ನಡೆಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಶಾಸಕರಾದ ಸಿ.ಸಿ.ಪಾಟೀಲ, ಅರವಿಂದ ಬೆಲ್ಲದ, ಮಾಚಿ ಸಚಿವ ಮುರಗೇಶ ನಿರಾಣಿ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಹರಿಹರ ಮಾಜಿ ಶಾಸಕ ಎಚ್.ಎಸ್.ಶಿವಶಂಕರ, ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಹಾಗೂ ಹರಿಹರದ ಮುಖಂಡರು ಸಭೆ ಸೇರಿ ಭಕ್ತರಿಂದ ಪೀಠದ ವಿಚಾರ ಆಲಿಸಿದರು.

ಈ ವೇಳೆ, ಮಠದ ಭಕ್ತರ ಮಧ್ಯೆ ಮಾತಿನ ಚಕಮಕಿ, ವಾದ-ವಿವಾದ ನಡೆದು ವಿಕೋಪಕ್ಕೆ ತಿರುಗುತ್ತಿದ್ದಂತೆ ನಾಯಕರು ಮಧ್ಯಪ್ರವೇಶಿಸಿ ಸಮಾಧಾನಪಡಿಸಿದರು. ಸದ್ಯ ಹರಿಹರ ಮತ್ತು ಕೂಡಲಸಂಗಮ ಪೀಠದ ಗೊಂದಲಗಳ ಬಗ್ಗೆ ಅಷ್ಟೇ ಚರ್ಚಿಸಿ ಬಗೆಹರಿಸಬೇಕು ಎಂದು ಆಗ್ರಹಿಸಿದರು.ಸುದೀರ್ಘ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಸನಗೌಡ ಪಾಟೀಲ ಯತ್ನಾಳ, ಹರಿಹರ ಪೀಠದ ಟ್ರಸ್ಟ್ ಮತ್ತು ಸ್ವಾಮೀಜಿಗಳ ಮಧ್ಯೆ ಲೆಕ್ಕಪತ್ರ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಈಗಾಗಲೇ ಸಮಾಜಕ್ಕೆ ಧಕ್ಕೆ ಬರುವ ರೀತಿಯಲ್ಲಿ ಅಹಿತಕರ ಘಟನೆ ನಡೆದಿವೆ. ಈ ಹಿನ್ನೆಲೆಯಲ್ಲಿ ಎರಡೂ ಕಡೆಯವರನ್ನು ಸೇರಿಸಿ ಸಮಸ್ಯೆ ನಿವಾರಿಸುವ ಕೆಲಸ ಮಾಡಿದ್ದೇವೆ. ಶೇ.90ರಷ್ಟು ಸಮಸ್ಯೆ ಬಗೆಹರಿದಿದೆ ಎಂದು ಭಾವಿಸಿದ್ದೇವೆ. ಲೆಕ್ಕಪತ್ರದ ಬಗೆಗಿನ ಗೊಂದಲವನ್ನು ಮುಂದಿನ ದಿನಗಳಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಭಿನ್ನಾಭಿಪ್ರಾಯ ಸರಿಪಡಿಸಲು, ಸಹಜ ಸ್ಥಿತಿ ಮರಳಲು ಇನ್ನೂ ಮೂರ್ನಾಲ್ಕು ಸಭೆ ಮಾಡಬೇಕಾಗುತ್ತದೆ. ನಾಯಕರು ತೆಗೆದುಕೊಳ್ಳುವ ನಿರ್ಣಯಕ್ಕೆ ಬದ್ಧರಿರುವುದಾಗಿ ಎರಡೂ ಬಣದವರು ಹೇಳಿದ್ದಾರೆ ಎಂದು ವಿವರಿಸಿದರು.ಹರಿಹರ ಪೀಠ ಜತೆಗೆ ಕೂಡಲಸಂಗಮ ಪೀಠದ ವಿವಾದವನ್ನೂ ಬಗೆಹರಿಸಲಾಗುವುದು. ಯಾವ ಪೀಠ ಸ್ಥಾಪನೆ, ಮರುಸ್ಥಾಪನೆ ಇಲ್ಲ. ಇರುವ ಮಠಗಳನ್ನು ಸುಧಾರಿಸುವುದಷ್ಟೇ ಕೆಲಸ ಎಂದು ಸ್ಪಷ್ಟಪಡಿಸಿದರು.ಮಾಜಿ ಸಚಿವ ಮುರಗೇಶ ನಿರಾಣಿ ಮಾತನಾಡಿ, ಪಂಚಮಸಾಲಿ ಸಮಾಜವನ್ನು ಒಂದು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಈ ಸಭೆ ನಡೆಸಲಾಗಿದೆ. ಹರಿಹರ ಪೀಠದ ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡಿದ್ದೇವೆ. ಕೆಲವರು ಲೆಕ್ಕ ಕೇಳಿದ್ದರು, ಅದನ್ನು ತೋರಿಸಲಾಗಿದೆ. ಯಾರು ಬೇಕಾದರೂ ಬಂದು ಲೆಕ್ಕ ನೋಡಬಹುದು. ಆದರೆ, ಅದನ್ನು ಬಹಿರಂಗವಾಗಿ ತೋರಿಸಲಾಗುವುದಿಲ್ಲ ಎಂದು ಹೇಳಿದರು. ಭಕ್ತರ ಹಿತದೃಷ್ಟಿಯಿಂದ ಐದು ಪೀಠ, ಐದು ಸ್ವಾಮೀಜಿಗಳು ಇರಲಿ ಎಂಬ ಅಭಿಪ್ರಾಯಗಳಿವೆ. ಸಮಾಜದಿಂದ ಮಹಿಳಾ ಪೀಠ ಸೇರಿದಂತೆ ಪಂಚ ಪೀಠ ಮಾಡುವ ಉದ್ದೇಶವಿದೆ. ಕೆಲ ಮುಖಂಡರು ಒಂದೇ ಪೀಠದ ಬಗ್ಗೆಯೂ ಸಲಹೆ ನೀಡಿದ್ದಾರೆ. ಸಮಾಜದವರು ಸೇರಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.ಮಾಜಿ ಶಾಸಕರಾದ ಸೋಮಣ್ಣ ಬೇವಿನಮರದ, ಎಚ್.ಎಚ್.ಶಿವಶಂಕರಪ್ಪ ಮಾತನಾಡಿ, ಎರಡು ಪೀಠಗಳಲ್ಲಿ ಸಮಸ್ಯೆ ಇದ್ದು, ಸರಿ ಮಾಡಬೇಕಿದೆ. ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗಲು ನಾಯಕರು ಸೇರಿ ಸಭೆ ಮಾಡಿದ್ದೇವೆ. ಒಂದೇ ದಿನಕ್ಕೆ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ ಎಂದರು.ಸಮಿತಿ ರಚನೆ: ಪಂಚಮಸಾಲಿ ಸಂಘ, ಟ್ರಸ್ಟ್ ಮತ್ತು ಸ್ವಾಮೀಜಿಗಳ ನಡುವೆ ಮನಸ್ತಾಪಗಳಿವೆ. ಪೀಠದಲ್ಲಿ ಸಮಸ್ಯೆ ಬಗೆಹರಿಸಲು ಪಕ್ಷಾತೀತವಾಗಿ 10 ಜನರ ಸಮಿತಿ ರಚಿಸಲಾಗಿದೆ. ಸಮಿತಿ ನೀಡುವ ಸೂಚನೆಗೆ ಎರಡೂ ಪೀಠದ ಕಡೆಯವರು ಬದ್ಧರಾಗಿರಬೇಕು. ಸಂಘ, ಟ್ರಸ್ಟ್ ನಲ್ಲಿರುವವರು ರಾಜಕೀಯದಲ್ಲಿರಬಾರದು ಎಂಬ ಅಭಿಪ್ರಾಯಗಳಿವೆ. ಒಟ್ಟಾರೆ ಇನ್ನೂ ಎರಡ್ಮೂರು ಸಭೆಗಳ ನಂತರ ಅಂತಿಮ ತೀರ್ಮಾನಕ್ಕೆ ಬರಲಾಗುತ್ತದೆ ಎಂದು ಸಭೆಯ ಬಳಿಕ ಮಾಜಿ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.