ಸಾರಾಂಶ
ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭವಾರ್ತೆ ಚಿತ್ರದುರ್ಗಬಸವ ಪುತ್ಥಳಿ ಸ್ಥಾಪನೆ ವಿಚಾರದಲ್ಲಿ ಮುರುಘಾಮಠದ ಚಿಂತನೆಗಳು ದ್ವಂದ್ವ ನಿಲುವಿನಿಂದ ಕೂಡಿದ್ದು, ಸರ್ಕಾರಿ ಅನುದಾನಕ್ಕೆ ಕಿಮ್ಮತ್ತು ಕಟ್ಟಲಾಗಿಲ್ಲ. ಹೇಗೆ ಬೇಕೋ ಹಾಗೆ, ಹೆಂಗೆಂಗೋ ಮನಸ್ಸಿಗೆ ತೋಚಿದಂತೆ ನಡೆದುಕೊಳ್ಳಲಾಗಿದೆ ಎಂಬ ವಾಸ್ತವ ಸಂಗತಿಯ ಬಸವಪುತ್ಥಳಿ ಪುರಾಣ ಬಿಡಿ ಬಿಡಿಯಾಗಿ ತೆರೆದಿಡುತ್ತದೆ.
ಕಲ್ಲಿನಲ್ಲಿ 100 ಅಡಿ ಎತ್ತರದ ಏಕಶಿಲೆಯ ಬಸವಪುತ್ಥಳಿ ಅರಳಿಸುವುದು ಕಷ್ಟದ ಕೆಲಸ ಎಂಬುದು ಗೊತ್ತಾಗಿ ಮುರುಘಾಮಠ ವಿಚಲಿತಗೊಂಡಿತ್ತು. 115 ಅಡಿ ಕಲ್ಲು ಸಾಗಿಸುವುದು, ನಂತರ ತಂದು ನಿಲ್ಲಿಸುವುದರ ನೆನಪು ಮಾಡಿಕೊಂಡೇ ಬೆಚ್ಚಿದ ಮುರುಘಾಮಠದ ಹಿತೈಷಿಗಳಿಗೆ ಕ್ಷಣ ಕಾಲ ಕಣ್ಣ ಮುಂದೆ ಕಂಚಿನ ಪುತ್ಥಳಿ ಸಹಜವಾಗಿಯೇ ಹಾದು ಹೋಗಿದೆ. ಕಂಚಿನ ಪುತ್ಥಳಿ ನೆನಪಾಗಲು ಬೇರೆಯದೇ ಕಾರಣವಿತ್ತು. ಚಿತ್ರದುರ್ಗದಲ್ಲಿ ಈಗಾಗಲೇ ಮದಕರಿನಾಯಕನ ಕಂಚಿನ ಪ್ರತಿಮೆ ಇತ್ತು. ಹಾಗಾಗಿ ಪಾದ, ಕೈ ಕಾಲು, ಎದೆ, ಕತ್ತು ಬಿಡಿ ಬಿಡಿಯಾಗಿ ಮಾಡಿ ಪೋಣಿಸಿದರೆ ಸುಲಭವಾಗಿ ಬಸವ ಪ್ರತಿಮೆ ಸಿದ್ದವಾಗುತ್ತದೆ. ಬಾಳೆಹಣ್ಣನ್ನು ಸುಲಿದು ತಿಂದಷ್ಟೇ ಸಲೀಸು ಎಂದು ಭಾವಿಸಿದ ಮುರುಘಾಮಠ ಕಂಚಿನ ಪುತ್ಥಳಿ ನಿರ್ಮಾಣದ ಸಿದ್ದತೆ ನಡೆಸಿತು.ರಾಜ್ಯ ಸರ್ಕಾರ ಬಿಡುಗಡೆ ಮಾಡಿದ ಐದು ಕೋಟಿ ರುಪಾಯಿಗೆ ಹಣ ಬಳಕೆ ಪ್ರಮಾಣ ಪತ್ರ ಕೊಡುವ ಅನಿವಾರ್ಯತೆ ಇದ್ದುದರಿಂದ ಕಂಚಿನ ಪುತ್ಥಳಿಗೆ ಯೋಜನೆ ಸಿದ್ದವಾಗಿ ಸರ್ಕಾರದ ಮುಂದೆ ಹೋಯಿತು. ಇದು ಕೂಡಾ ಸಲೀಸಾಗಿರಲಿಲ್ಲ. 100 ಅಡಿ ಕಂಚಿನ ಪ್ರತಿಮೆ ಮಾಡಲು ಸ್ಥಳೀಯ ಅಕ್ಕಸಾಲಿಗರಾಗಲೀ, ಅಥವ ಶಿಲ್ಪಿಗಳನ್ನಾಗಲಿ ನಚ್ಚಿ ಕುಳಿತುಕೊಳ್ಳುವಂತಿರಲಿಲ್ಲ. ಈ ಮೊದಲು ಇಂತಹದ್ದೊಂದು ಪ್ರತಿಮೆ ಮಾಡಿದವರು ಬೇಕಾಗಿತ್ತು. ತಾಂತ್ರಿಕ ಅಂಶಗಳ ಅಡಕ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿಬೇಕಿತ್ತು. ಆಗ ನೆನಪಾಗಿದ್ದು ಕರ್ನಾಟಕ ಚಿತ್ರಕಲಾ ಪರಿಷತ್ತು.
ಬಿ.ಎಲ್.ಶಂಕರ್ ಚಿತ್ರ ಕಲಾ ಪರಿಷತ್ತಿನ ಅಧ್ಯಕ್ಷರಾಗಿದ್ದು ಅವರನ್ನು ಸಂಪರ್ಕಿಸಿದ ಮುರುಘಾಮಠ ಪರಿಷತ್ತಿನಲ್ಲಿ ವೈಸ್ ಪ್ರಿನ್ಸಿಪಾಲ್ ಆಗಿದ್ದ ತೇಜೇಂದ್ರ ಬೋನಿ ಅವರನ್ನು ಬಸವಪುತ್ಥಳಿ ನಿರ್ಮಾಣ ಕಾರ್ಯಕ್ಕೆ ನಿಯೋಜನೆ ಮೇಲೆ ಕಳಿಸುವಂತೆ ಕೋರಿಕೊಂಡರು. ತೇಜೇಂದ್ರ ಬೋನಿ ಈ ಮೊದಲು ಚಿತ್ರದುರ್ಗದ ಮದಕರಿನಾಯಕ ಕಂಚಿನ ಪ್ರತಿಮೆ ನಿರ್ಮಾಣ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ಹಾಗಾಗಿ ಅವರೇ ಸೂಕ್ತವೆಂದು ಭಾವಿಸಿ ಮಾಡಿಕೊಂಡ ಮನವಿಗೆ ಬಿ.ಎಲ್. ಶಂಕರ್ ಒಪ್ಪಿಗೆ ಸೂಚಿಸಿ ಕಳಿಸಿಕೊಟ್ಟರು.ನಿಯೋಜನೆ ಮೇರೆಗೆ ತೇಜೇಂದ್ರ ಬೋನಿ ಮುರುಘಾಮಠಕ್ಕೆ ಎಂಟ್ರಿ ಕೊಟ್ಟ ನಂತರ 100 ಅಡಿ ಕಂಚಿನ ಪ್ರತಿಮೆ ನಿರ್ಮಾಣಕ್ಕೆ 30 ಕೋಟಿ ರುಪಾಯಿ ವೆಚ್ಚದ ತಾಂತ್ರಿಕ ಅಂಶಗಳನ್ನೊಡಗೊಂಡ ಪ್ರಸ್ತಾವನೆ ಸಿದ್ದವಾಯಿತು. ಚೀಫ್ ಆರ್ಕಿಟೆಕ್ ಅನುಮೋದನೆ ಪಡೆಯಲು ಶಿವಮೊಗ್ಗ, ಧಾರವಾಡ ಕಚೇರಿಗಳಲ್ಲಿ ಪರಿಶೀಲನೆಗೆ ಒಳಪಟ್ಟು ಅಂತಿಮವಾಗಿ ಒಪ್ಪಿಗೆ ಪಡೆಯಲಾಯಿತು. ವಿಸ್ತೃತ ಯೋಜನೆ ವರದಿ ತಯಾರಿಸಿ ಮತ್ತೆ ಹತ್ತು ಕೋಟಿ ರುಪಾಯಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಯಿತು. ಮೊದಲು ಬಿಡುಗಡೆಯಾಗಿದ್ದ ಐದು ಕೋಟಿ ಜೊತೆಗೆ ಹೆಚ್ಚುವರಿಯಾಗಿ ಮತ್ತೆ ಹತ್ತು ಕೋಟಿ ಬಿಡುಗಡೆಯಾಯಿತು.
100 ಅಡಿ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ತಳಪಾಯ(ಪೀಠ) ದ ಕಾರ್ಯ ಶುರುವಾಯಿತು, ಸಿಮೆಂಟ್ ಕಬ್ಬಿಣ ಬಂದು ಬಿತ್ತು. ಭೂಮಿಯಾಳದಿಂದ ಫಿಲ್ಲರ್ ಗಳು ಮೇಲೆದ್ದವು. ಪ್ರತಿಮೆ ನಿರ್ಮಾಣದ ಚಟುವಟಿಕೆಗಳಿಗೆ ಪೂರಕವಾಗಿ ಸಣ್ಣದೊಂದು ಶೆಡ್ ಮೇಲೆದ್ದಿತು. ಪ್ರತಿಮೆ ತಯಾರಿಸಲು ಅಗತ್ಯವಾಗಿ ಬೇಕಾದ ಫೈಬರ್ ಮೌಲ್ಡ್ ಗಳ ನಿರ್ಮಾಣವೂ ಶುರುವಾಯಿತು. ಐದಾರು ವರ್ಷ ಪ್ರತಿಮೆ ನಿರ್ಮಾಣದ ಕಾರ್ಯ ಕುಂಟುತ್ತಾ ಸಾಗಿತ್ತು. ಪ್ರತಿಮೆ ನಿರ್ಮಾಣಕ್ಕೆ ಯಾಕಾದರೂ ಕೈ ಹಾಕಿದವೋ ಎಂಬ ಭಾವ ಮುರುಘಾಮಠವ ಆವರಿಸಿತ್ತು. ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲವೆಂಬ ಬಸವಣ್ಣನ ಮಾತು ಮುರುಘಾಮಠದ ಪ್ರಾಂಗಣದಲ್ಲಿ ಮಾರ್ದನಿಸಿತು. ಬಸವಣ್ಣನ ಸ್ಥಾವರ ಮಾಡುವುದು ದುಸ್ಸಾಹಸದ ಕೆಲಸವೆಂಬ ಅರಿವು ಉಂಟಾಗಿತ್ತು.ಇದ್ದಕ್ಕಿದ್ದಂತೆ 100 ಅಡಿ ಕಂಚಿನ ಪ್ರತಿಮೆ ಆಯಾಮ ಬದಲಾಯಿತು.100 ಅಡಿ ಇದ್ದದ್ದು 323ಕ್ಕೆ ಫಿಕ್ಸ್ ಆಯಿತು. ಮುರುಘಾಮಠದ ಭಕ್ತರು ಕೈಗೊಂಡ ಅಮೇರಿಕಾ ಪ್ರವಾಸ ಇಂತಹದ್ದೊಂದು ಬದಲಾವಣೆಗೆ ನಾಂದಿ ಆಡಿತು. ನ್ಯೂಯಾರ್ಕ್ ಲಿಬರ್ಟಿ ಪ್ರತಿಮೆ ನೋಡುತ್ತಿದ್ದಂತೆ ಬಸವಣ್ಣನ ಪ್ರತಿಮೆಯನ್ನು ಕೂಡ ಅಷ್ಟು ಎತ್ತರಕ್ಕೆ ಕೊಂಡೊಯ್ಯವ ಹೊಸ ಆಲೋಚನೆಗಳಿಗೆ ಗರಿಗೆದರಿ ಕಂಚಿನ ಪುತ್ಥಳಿ ಪಥ ಬದಲಿಸಿತು.