ಮಹಿಳೆ ಹೊಟ್ಟೆಯಿಂದ ಬರೋಬ್ಬರಿ 6 ಕೆಜಿ ಗೆಡ್ಡೆ ಪತ್ತೆ..!

| Published : Feb 21 2024, 02:08 AM IST

ಸಾರಾಂಶ

ಜ್ಯೋತಿ ಕಳೆದ ಆರು ತಿಂಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಲವು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಒಳಗಾಗಿದ್ದು, ಈ ವೇಳೆ ಗೆಡ್ಡೆ ಇರುವುದು ಪತ್ತೆಯಾಗಿದೆ. ಅಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರು. ವೆಚ್ಚ ಭರಿಸಬೇಕಾಗಿದ್ದರಿಂದ ಅಸಹಾಯಕರಾಗಿದ್ದರು. ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಬಂದು ಪರೀಕ್ಷೆಗೆ ಒಳಗಾಗಿದ್ದರು.

ಕನ್ನಡಪ್ರಭ ವಾರ್ತೆ ಮಳವಳ್ಳಿಮಹಿಳೆ ಹೊಟ್ಟೆಯಲ್ಲಿ ಬೆಳೆದಿದ್ದ 6 ಕೆಜಿ ಗೆಡ್ಡೆಯನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ವೈದ್ಯರ ತಂಡ ಸತತ 2 ಗಂಟೆಗಳ ಕಾಲ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆದು ಸಾರ್ವಜನಿಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಮದ್ದೂರು ತಾಲೂಕಿನ ದೊಡ್ಡರಸಿನಕೆರೆ ಗ್ರಾಮದ ಜ್ಯೋತಿ (40) ಎಂಬ ಮಹಿಳೆ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ. ಹೊಟ್ಟೆಯಲ್ಲಿ ಬೆಳೆದಿದ್ದ ಗೆಡ್ಡೆಯನ್ನು ಸಾರ್ವಜನಿಕ ಆಸ್ಪತ್ರೆ ಶಸ್ತ್ರ ಚಿಕಿತ್ಸೆ ತಜ್ಞ ಡಾ.ಮುರುಳೀಧರ್, ಪ್ರಶೂತಿ ತಜ್ಞೆ ಡಾ.ರೇಣುಕಾದೇವಿ, ಡಾ.ಜ್ಯೋತಿ, ಅರವಳಿಕೆ ತಜ್ಞ ಡಾ.ಪ್ರಶಾಂತ್, ವೈದ್ಯರ ತಂಡ ಶಸ್ತ್ರ ಚಿಕಿತ್ಸೆಯಲ್ಲಿ ಪಾಲ್ಗೊಂಡು ಯಶಸ್ಸು ಪಡೆದಿದ್ದಾರೆ.

ಜ್ಯೋತಿ ಕಳೆದ ಆರು ತಿಂಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಹಲವು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಒಳಗಾಗಿದ್ದು, ಈ ವೇಳೆ ಗೆಡ್ಡೆ ಇರುವುದು ಪತ್ತೆಯಾಗಿದೆ. ಅಲ್ಲದೇ, ಖಾಸಗಿ ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಲಕ್ಷಾಂತರ ರು. ವೆಚ್ಚ ಭರಿಸಬೇಕಾಗಿದ್ದರಿಂದ ಅಸಹಾಯಕರಾಗಿದ್ದರು.

ಸ್ಥಳೀಯ ಸರ್ಕಾರಿ ಆಸ್ಪತ್ರೆ ವೈದ್ಯರ ಸಲಹೆ ಮೇರೆಗೆ ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ಬಂದು ಪರೀಕ್ಷೆಗೆ ಒಳಗಾಗಿದ್ದರು. ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸಂಜಯ್ ರೋಗಿಯನ್ನು ಸಂಪರ್ಕಿಸಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಆತ್ಯಾಧುನಿಕ ಉಪಕರಣದೊಂದಿಗೆ ಉತ್ತಮ ಶಸ್ತ್ರ ಚಿಕಿತ್ಸಾ ಸೌಲಭ್ಯವಿದ್ದು, ಬಳಸಿಕೊಳ್ಳಬೇಕೆಂದು ಸಲಹೆ ನೀಡಿದರು.

ವೈದ್ಯರ ಸಲಹೆಯಂತೆ ಫೆ.20ರ ಮಂಗಳವಾರ ಶಸ್ತ್ರ ಚಿಕಿತ್ಸೆ ತಜ್ಞ ಡಾ.ಮುರುಳೀಧರ್ ನೇತೃತ್ವದಲ್ಲಿ 6 ಮಂದಿ ವೈದ್ಯರ ತಂಡ ಮಹಿಳೆ ಹೊಟ್ಟೆಯೊಳಗಿದ್ದ 6 ಕೆ.ಜಿ ಗಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ. ರೋಗಿಯೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.ಶಾಸಕರ ಪ್ರಶಂಸೆ:

ಮಕ್ಕಳು ಮತ್ತು ಮಹಿಳೆಯರಿಗೆ ಉತ್ತಮ ಆರೋಗ್ಯ ಸೌಲಭ್ಯ ಸಿಗಬೇಕೆಂಬ ಆಕಾಂಕ್ಷೆಯೊಂದಿಗೆ ಮಳವಳ್ಳಿಗೆ ಮಕ್ಕಳು ಮತ್ತು ಮಹಿಳಾ ಆಸ್ಪತ್ರೆಯನ್ನು ನನ್ನ ಹಿಂದಿನ ಅವಧಿಯಲ್ಲಿ ತರಲಾಗಿತ್ತು. ಆಸ್ಪತ್ರೆಗೆ ಬೇಕಾದ ಆಧುನಿಕ ಉಪಕರಣವನ್ನು ಒದಗಿಸಿದ ಹಿನ್ನೆಲೆಯಲ್ಲಿ ಮಹಿಳೆ ಹೊಟ್ಟೆಯಲ್ಲಿದ್ದ 6 ಕೆಜಿ ತೂಕದ ಗೆಡ್ಡೆಯನ್ನು ವೈದ್ಯರು ಹೊರ ತೆಗಿದ್ದಾರೆ. ಕ್ಷೇತ್ರದ ಜನರು ಚಿಕಿತ್ಸೆಗಾಗಿ ಬೆಂಗಳೂರು, ಮೈಸೂರಿಗೆ ತೆರಳದೇ ಮಳವಳ್ಳಿಯಲ್ಲಿಯೇ ಚಿಕಿತ್ಸೆ ಸಿಗಬೇಕೆಂಬ ನನ್ನ ಆಸೆ ಈಡೇರಿದಂತಾಗಿದೆ. ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರ ತಂಡಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.

- ಪಿ.ಎಂ.ನರೇಂದ್ರಸ್ವಾಮಿ, ಶಾಸಕರು