ಸಾರಾಂಶ
ಪಟ್ಟಣದಲ್ಲಿ ಬಾಳೆ ಅಭಿವೃದ್ಧಿ ಕೇಂದ್ರ ಆರಂಭಿಸಲು ರೈತ ಸಂಘದಿಂದ ಒತ್ತಾಯ
ಬಿ.ಎಚ್.ಎಂ. ಅಮರನಾಥಶಾಸ್ತ್ರಿಕನ್ನಡಪ್ರಭ ವಾರ್ತೆ ಕಂಪ್ಲಿ
ಈಚೆಗೆ ಬೀಸಿದ ಮಳೆ-ಗಾಳಿಯ ರಭಸಕ್ಕೆ ವಿವಿಧಡೆ ರೈತರು ಬೆಳೆದಿದ್ದ ಬಾಳೆ ಬೆಳೆ ನೆಲಕ್ಕೆ ಬಿದ್ದಿದ್ದು ರೈತರಲ್ಲಿ ನಷ್ಟದ ಭೀತಿ ಎದುರಾಗಿದೆ.ತಾಲೂಕಿನಲ್ಲಿ ಒಟ್ಟಾರೆ 1500 ಹೆಕ್ಟರ್ ಬಾಳೆ ಬೆಳೆಯಲಾಗಿದೆ. ಇನ್ನೇನು 20 ದಿನಗಳ ಒಳಗಾಗಿ ಬಾಳೆ ಕಟಾವಿಗೆ ಬರುತ್ತಿತ್ತು. 30 ದಿನಗಳ ಒಳಗಾಗಿ ಬಾಳೆ ಕಟಾವುಗೊಳಿಸಿ ಮಾರಾಟ ಮಾಡಲು ರೈತರು ಸಜ್ಜಾಗಿದ್ದರು. ಆದರೆ ಸೋಮವಾರ ಬೀಸಿದ ಗಾಳಿಯ ಭಾರಿ ರಭಸಕ್ಕೆ ಪಟ್ಟಣ, ರಾಮಸಾಗರ, ಅರಳಿಹಳ್ಳಿ, ಶಂಕರಸಿಂಗ್ ಕ್ಯಾಂಪ್, ನೆಲ್ಲೂಡಿ ಕೊಟ್ಟಾಲ್ ಸೇರಿದಂತೆ ಹಲವೆಡೆ ಸುಗುಂದಿ, ಯಾಲಕ್ಕಿ ಬಾಳೆ ಬೆಳೆ ನೆಲಕ್ಕೆ ಬಿದ್ದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ರೈತರದ್ದಾಗಿದೆ. ಯಾಲಕ್ಕಿ ಬಾಳೆಯ ಕಂಬ ಸುಮಾರು 18 ರಿಂದ 20 ಅಡಿಯವರೆಗೂ ಬೆಳೆದಿದ್ದು ಗಾಳಿ ಮಳೆಯಿಂದ ಅವುಗಳನ್ನು ರಕ್ಷಿಸಲು ರೈತರು ಪ್ರತಿ ಬಾಳೆಗೂ ಬಿದಿರು ಬೊಂಬುಗಳನ್ನು ಕಟ್ಟಿಸಿದ್ದರು. ಆದರೂ ಬಾಳೆ ನೆಲಕ್ಕೆ ಬಿದ್ದಿದೆ.
ಬಾಳೆ ಬೆಲೆ ಕುಸಿತ:ಗೊಬ್ಬರ, ಕೃಷಿ ಕಾರ್ಮಿಕರ ಕೂಲಿ ಎಲ್ಲಾ ಸೇರಿ ಬಾಳೆ ಬೆಳೆಯಲು ಎಕರೆಗೆ ₹2 ಲಕ್ಷದವರೆಗೂ ಖರ್ಚಾಗಿದ್ದು, 4 ಲಕ್ಷ ಲಾಭದ ನಿರೀಕ್ಷೆಯಿತ್ತು. ಒಟ್ಟಾರೆ 20 ಎಕರೆ ಗದ್ದೆಯಲ್ಲಿ ಬಾಳೆ ಬೆಳೆದಿರುವೆ. ಈಚೆಗೆ ಸುರಿದ ಗಾಳಿ ಸಹಿತ ಮಳೆಗೆ ಒಂದು ಎಕರೆ ಜಮೀನಿನಲ್ಲಿ 300ಕ್ಕೂ ಹೆಚ್ಚು ಬಾಳೆ ಕಂಬಗಳು ನೆಲಕ್ಕೆ ಬಿದ್ದಿವೆ. ಉಳಿದ ಕಿಂಚಿತ್ತು ಬಾಳೆಯನ್ನಾದರೂ ಮಾರಿ ಖರ್ಚನ್ನಾದರೂ ತೆಗೆಯೋಣವೆಂದರೆ ಬಾಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ಬೆಲೆ ಇಲ್ಲ. ಸುಗುಂದಿ ಕೆಜಿಗೆ ₹13ಗೆ, ಯಾಲಕ್ಕಿ ₹36ಗೆ ದರ ಕುಸಿತಗೊಂಡಿದೆ. ಇದರಿಂದ ಅಪಾರ ನಷ್ಟ ಉಂಟಾಗಲಿದೆ ಎಂದು ಬಾಳೆ ಬೆಳೆಗಾರ ಕಾಕರ್ಲ ಭಾಸ್ಕರ್ ರಾವ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಬಾಳೆ ಅಭಿವೃದ್ಧಿ ಕೇಂದ್ರ ಆರಂಭಿಸಿ:ಕಂಪ್ಲಿ, ಕಮಲಾಪುರ, ಹೊಸಪೇಟೆ ಭಾಗಗಲ್ಲಿ ಬೆಳೆಯುವ ಬಾಳೆಯು ಬೆಂಗಳೂರು, ಗೋವಾ ಸೇರಿದಂತೆ ರಾಜ್ಯವಲ್ಲದೆ ಹೊರ ರಾಜ್ಯಗಳಿಗೂ ರಫ್ತಾಗುತ್ತದೆ. ಈ ಭಾಗದಲ್ಲಿ ಅತೀ ಹೆಚ್ಚಾಗಿ ಬಾಳೆ ಬೆಳೆಯುವ ರೈತರಿಗೆ ಬಾಳೆ ಗೊನೆ ಮಾರಾಟ ಹೊರತು ಪಡಿಸಿ ಬಾಳೆ ಬೆಳೆಯಿಂದಾಗುವ ಇತರೆ ಲಾಭದಾಯಕ ವಿಚಾರಗಳ ಬಗ್ಗೆ ಮಾಹಿತಿ ಇಲ್ಲ. ಬಾಳೆಯ ದಿಂಡಿನಲ್ಲಿ (ಕಾಂಡ) ದೊರೆಯುವ ರಸದ ಸೇವನೆಯಿಂದಾಗಿ ಮನುಷ್ಯನ ಕಿಡ್ನಿಯಲ್ಲಿನ ಕಲ್ಲನ್ನು ಕರಗಿಸಬಹುದಲ್ಲದೆ, ಬಿಪಿ, ಶುಗರ್, ಗ್ಯಾಸ್ಟಿಕ್ ಗಳನ್ನು ನಿಯಂತ್ರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ರಸಕ್ಕೆ ಇತ್ತೀಚೆಗೆ ಬೇಡಿಕೆ ಹೆಚ್ಚುತ್ತಿದ್ದು, ಒಂದು ಬಾಳೆ ದಿಂಡಿನಲ್ಲಿ ಕನಿಷ್ಠವೆಂದರೂ 2 ಲೀಟರ್ ರಸ ಬರುತ್ತದೆ. ಈ ರಸವನ್ನು ಮಾರುಕಟ್ಟೆಯಲ್ಲಿ ಒಂದು ಲೀಟರ್ ₹440ಕ್ಕೆ ಮಾರಾಟ ಮಾಡಲಾಗುತ್ತಿದೆ. ವ್ಯರ್ಥವೆಂದು ರೈತರು ಬಿಸಾಡುತ್ತಿರುವ ಬಾಳೆ ದಿಂಡಿನಿಂದಾಗುವ ಲಾಭದ ಬಗ್ಗೆ ಸರಿಯಾದ ಮಾಹಿತಿ ನೀಡುವ ಅವಶ್ಯಕತೆ ಇದೆ. ಇನ್ನು ಈ ಭಾಗದ ರೈತರಿಗೆ ಬಾಳೆ ಡ್ರೈ ಫ್ರೂಟ್, ಬಾಳೆ ಪೌಡರ್, ಬಾಳೆ ಪ್ಲೇಟ್ಸ್, ಬಾಳೆ ನೂಲು ಸೇರಿ ಬಾಳೆ ಬೆಳೆಯಿಂದ ಪರ್ಯಾಯವಾಗಿ ಏನನೆಲ್ಲಾ ಮಾಡಿ ಲಾಭ ಪಡೆಯಬಹುದು ಎಂಬ ಸೂಕ್ತ ಮಾಹಿತಿಯನ್ನು ತಿಳಿಸಲು ಸರ್ಕಾರ ಪಟ್ಟಣದಲ್ಲಿ ಬಾಳೆ ಅಭಿವೃದ್ಧಿ ಕೇಂದ್ರ ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಬಿ.ವಿ. ಗೌಡ ಒತ್ತಾಯಿಸಿದ್ದಾರೆ.