ಸಾರಾಂಶ
ದೊಡ್ಡಬಳ್ಳಾಪುರ: ಸಾಮಾನ್ಯವಾಗಿ ಬಗೆಬಗೆಯ ಸೌಂದರ್ಯ ಪ್ರದರ್ಶನ ಸ್ಪರ್ಧೆಗಳು ಆಯೋಜಿಸಲಾಗುತ್ತದೆ. ಯುವತಿಯರ ಸೌಂದರ್ಯ ಪ್ರದರ್ಶನ ಸ್ಪರ್ಧೆ ಸಾಮಾನ್ಯವಾದರೆ, ರೈತರು ಮಗುವಿನಂತೆ ಸಾಕಿದ ರಾಸುಗಳ ಸೌಂದರ್ಯ ಪ್ರದರ್ಶನ ಸ್ಪರ್ಧೆ ನಿಜಕ್ಕೂ ವಿಶೇಷ. ಇಂತಹ ಅಪರೂಪದ ಕಾರ್ಯಕ್ರಮಕ್ಕೆ ವೇದಿಕೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡ ತಿಮ್ಮನಹಳ್ಳಿ ಗ್ರಾಮ. ನವ ಕರ್ನಾಟಕ ಯುವಶಕ್ತಿ ವೇದಿಕೆಯ ವತಿಯಿಂದ ವಿಜಯ ದಶಮಿ ಪ್ರಯುಕ್ತ ಹಳ್ಳಿಕಾರ್ ಸೌಂದರ್ಯ ಸ್ಪರ್ಧೆ ಇಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಮಾಜಸೇವಕ ಎಸ್.ಆರ್. ಮುನಿರಾಜು, ಹಳ್ಳಿಕಾರ್ ತಳಿ ರಾಸುಗಳು ಕರ್ನಾಟಕದ ಅತ್ಯಂತ ಹೆಸರಾಂತ ದೇಶಿ ತಳಿಯ ದನಗಳು. ಇವುಗಳ ವೈಶಿಷ್ಟ್ಯವೆಂದರೆ ಜಮೀನಿನ ಉಳಿಮೆ, ಎತ್ತಿನಗಾಡಿ, ಗಾಣದ ಕೆಲಸ ಹೀಗೆ ಎಲ್ಲ ರೀತಿಯ ಕಠಿಣ ಕೃಷಿ ಕಾರ್ಯಗಳಲ್ಲಿ ಸಮರ್ಥವಾಗಿದ್ದು, ಉತ್ತಮ ಗುಣಮಟ್ಟದ ಹಾಲನ್ನೂ ನೀಡುತ್ತವೆ. ಜೊತೆಗೆ ಜಾತ್ರೆಗಳಲ್ಲಿ, ಎತ್ತಿನಗಾಡಿ ಸ್ಪರ್ಧೆಗಳಲ್ಲಿ ಈ ತಳಿಯ ಎತ್ತುಗಳನ್ನು ಗೌರವದಿಂದ ಪ್ರದರ್ಶಿಸಲಾಗುತ್ತದೆ ಎಂದರು.ನವ ಕರ್ನಾಟಕ ಯುವಶಕ್ತಿ ವೇದಿಕೆ ಮಾರ್ಗದರ್ಶಕ ನಾಗರಾಜು ಅಪ್ಪಯಣ್ಣ ಮಾತನಾಡಿ, ಈಗಿನ ಕಾಲದಲ್ಲಿ ಕೃಷಿ ಯಾಂತ್ರೀಕರಣ ಹೆಚ್ಚಾಗುತ್ತಿರುವುದರಿಂದ ಹಳ್ಳಿಕಾರ್ ತಳಿ ದನಗಳು ನಿಧಾನವಾಗಿ ಕಣ್ಮರೆಯಾಗುತ್ತಿವೆ. ಹಾಲಿನ ಉತ್ಪಾದನೆಗಾಗಿ ಮಿಶ್ರ ತಳಿಗಳ ಸಾಕಣೆ ಹೆಚ್ಚಾಗುತ್ತಿದೆ. ಆದ್ದರಿಂದ ಭಾರತೀಯ ಸಂಸ್ಕೃತಿಯ ವೈಭವವಾಗಿರುವ ಹಳ್ಳಿಕಾರ್ ತಳಿಯನ್ನು ಸಂರಕ್ಷಿಸಿ ಉತ್ತೇಜಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ವಕೀಲ ಪ್ರತಾಪ್ ಮಾತನಾಡಿ, ನವ ಕರ್ನಾಟಕ ಯುವಶಕ್ತಿ ವೇದಿಕೆ ರೈತರ ಕಲ್ಯಾಣ ಮತ್ತು ಕನ್ನಡ ಭಾಷೆ-ಸಂಸ್ಕೃತಿಯ ಉತ್ತೇಜನಕ್ಕಾಗಿ ಶ್ರಮಿಸುತ್ತಿರುವ ಯುವ ಸಂಘಟನೆ. ಸಮಾಜಮುಖಿ ಕಾರ್ಯಗಳಲ್ಲಿ ಯುವಕರನ್ನು ತೊಡಗಿಸಿಕೊಳ್ಳಲು ಇದು ಉತ್ತಮ ವೇದಿಕೆಯಾಗಿದೆ ಎಂದರು.ಸ್ಪರ್ಧೆಯಲ್ಲಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಿಂದ ನೂರಕ್ಕೂ ಹೆಚ್ಚು ಹಳ್ಳಿಕಾರ್ ರಾಸುಗಳು ಪಾಲ್ಗೊಂಡು ತಮ್ಮ ಸೌಂದರ್ಯವನ್ನು ಪ್ರದರ್ಶಿಸಿತು.
ಹಲವು ಸೆಲೆಬ್ರಿಟಿಗಳು ಭಾಗಿ:ಕಾರ್ಯಕ್ರಮಕ್ಕೆ ಬಿಗ್ ಬಾಸ್ ಖ್ಯಾತಿಯ ಉಗ್ರಂ ಮಂಜು, ರಕ್ಷಕ್ ಬುಲೆಟ್, ಸೈಕ್ ನವಾಜ್, ಬಾಲನಟ ಮಹಾನಿಧಿ ಸಾಯಿ ತೇಜ್ ಸೇರಿದಂತೆ ಹಲವು ಚಲನಚಿತ್ರ ಕಲಾವಿದರು ಭಾಗಿಯಾಗಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನ ಸೆಳೆಯಿತು. ಪುಟಾಣಿ ಮಕ್ಕಳ ಯೋಗಪ್ರದರ್ಶನ ವಿಶೇಷ ಆಕರ್ಷಣೆಯಾಯಿತು.
ಬೊಮ್ಮಸಂದ್ರದ ರಾಸುಗಳು ಚಾಂಪಿಯನ್:ಸ್ಪರ್ಧೆಯಲ್ಲಿ ಬೆಂಗಳೂರಿನ ಬೊಮ್ಮಸಂದ್ರದ ಮಂಜುನಾಥ ಅವರ ರಾಸುಗಳು ಚಾಂಪಿಯನ್ ಆಗಿ ಆಯ್ಕೆಯಾಗಿದ್ದು, ಅವರಿಗೆ ಹಿರೋ ದ್ವಿಚಕ್ರ ವಾಹನ ಬಹುಮಾನವಾಗಿ ನೀಡಲಾಯಿತು. ಉಳಿದ ಆರು ವಿಭಾಗಗಳಲ್ಲಿ ಸೈಕಲ್ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಮಾಲೀಕರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು ಎಂದು ನವ ಕರ್ನಾಟಕ ಯುವಶಕ್ತಿ ವೇದಿಕೆ ಕಾರ್ಯದರ್ಶಿ ಉದಯ ಆರಾಧ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆ ಅಧ್ಯಕ್ಷ ಹಳ್ಳಿ ರೈತ ಅಂಬರೀಶ್, ಶ್ರೀದೇವರಾಜ್ ಅರಸ್ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಜೆ. ರಾಜೇಂದ್ರ, ತೆಂಗು ನಾರು ಮಂಡಳಿ ಅಧ್ಯಕ್ಷ ವೆಂಕಟೇಶ್ ಬಾಬು, ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ಬಿ.ಕೆ. ನಾರಾಯಣಸ್ವಾಮಿ, ಸಪ್ಪಲಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಅಶ್ವಥಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಪ್ಪ, ಮಾಜಿ ಅಧ್ಯಕ್ಷರು ಸುರೇಶ್ ಬಾಬು, ರಾಜಕುಮಾರ್, ವೈದ್ಯೆ ಸೌಮ್ಯ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನುಂಜಯ, ಮುಖಂಡರು ಕನಕದಾಸ, ಶೇಷಗಿರಿ, ಯುವ ಮುಖಂಡ ಎಚ್.ಎನ್. ನರಸಿಂಹಮೂರ್ತಿ, ಮಧು ಹಾಗೂ ನವ ಕರ್ನಾಟಕ ಯುವಶಕ್ತಿ ವೇದಿಕೆಯ ಕಾರ್ಯದರ್ಶಿ ಉದಯ ಆರಾಧ್ಯ, ಪದಾಧಿಕಾರಿಗಳಾದ ಶ್ರೀಧರ್, ಮುಬಾರಕ್, ನಾಗರಾಜು ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.ಫೋಟೋ-
3ಕೆಡಿಬಿಪಿ5- ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯಲ್ಲಿ ನಡೆದ ಹಳ್ಳಿಕಾರ್ ಫ್ಯಾಷನ್ ಶೋನಲ್ಲಿ ಗಮನ ಸೆಳೆದ ರಾಸುಗಳು.--
3ಕೆಡಿಬಿಪಿ6- ಹಳ್ಳಿಕಾರ್ ಫ್ಯಾಶನ್ ಶೋ ಉದ್ಘಾಟಿಸಿದ ಗಣ್ಯರು.--
3ಕೆಡಿಬಿಪಿ7- ಹಳ್ಳಿಕಾರ್ ಫ್ಯಾಶನ್ ಶೋ ವಿಜೇತ ರಾಸುಗಳ ಮಾಲೀಕನಿಗೆ ಬಹುಮಾನವಾಗಿ ದ್ವಿಚಕ್ರವಾಹನ ನೀಡಲಾಯಿತು.