ಸಾರಾಂಶ
ಇಂದು ರಾಜ್ಯದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ದೊರೆತಿದೆ. ಗ್ಯಾರಂಟಿಗಳ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧದ ವಿರೋಧ ಪಕ್ಷಗಳ ಸುಳ್ಳು ಆರೋಪಕ್ಕೆ ರಾಜ್ಯದ ಮೂರು ಭಾಗಗಳಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ರಾಮನಗರ: ಇಂದು ರಾಜ್ಯದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಸಂಪೂರ್ಣ ಬೆಂಬಲ ದೊರೆತಿದೆ. ಗ್ಯಾರಂಟಿಗಳ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧದ ವಿರೋಧ ಪಕ್ಷಗಳ ಸುಳ್ಳು ಆರೋಪಕ್ಕೆ ರಾಜ್ಯದ ಮೂರು ಭಾಗಗಳಲ್ಲಿ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ತಿಳಿಸಿದರು.
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಸುರೇಶ್, ಚನ್ನಪಟ್ಟಣದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಶಿಗ್ಗಾವಿಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಅವರ ಪುತ್ರರನ್ನು ಜನ ಸೋಲಿಸಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ, ವಿರೋಧ ಪಕ್ಷಗಳು ಸರ್ಕಾರಕ್ಕೆ ಅನಗತ್ಯವಾಗಿ ಅಡ್ಡಿಮಾಡಿ ಅಭಿವೃದ್ಧಿಗೆ ತೊಂದರೆ ನೀಡದಂತೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಿದರು.
ಸರ್ಕಾರದ ವಿರುದ್ಧದ ಆರೋಪಗಳಿಗೆ ಫಲಿತಾಂಶ ಉತ್ತರವೇ ಎಂದು ಕೇಳಿದಾಗ, ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವರು, ವಿರೋಧ ಪಕ್ಷಗಳ ನಾಯಕರ ಆರೋಪಗಳಿಗೆ ಜನ ಸ್ಪಷ್ಟ ತೀರ್ಪು ನೀಡಿದ್ದಾರೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಜನ ಈ ಸಂದೇಶ ನೀಡಿದ್ದಾರೆ. ಇನ್ನಾದರೂ ಸರ್ಕಾರ ಹಾಗೂ ಮುಖ್ಯಮಂತ್ರಿಗಳ ಮೇಲೆ ಸುಳ್ಳು ಆರೋಪ ಮಾಡುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಗೆ ಸಹಕಾರ ನೀಡಲಿ ಎಂದರು.
ಚನ್ನಪಟ್ಟಣದಲ್ಲಿ ಜಮೀರ್ ಅವರ ಹೇಳಿಕೆ ಅಡ್ಡಿಯಾಗಬಹುದು ಎಂಬ ಊಹಾಪೋಹ ಇತ್ತು ಎಂದು ಕೇಳಿದಾಗ, ಆ ಭಾವನೆ ಸ್ಥಳೀಯ ಮಟ್ಟದಲ್ಲಿಲ್ಲ ಎಂದು ನಾನು ಸ್ಪಷ್ಟನೆ ನೀಡಿದ್ದೆ. ಒಬ್ಬ ಅಭ್ಯರ್ಥಿಯ ಪರವಾಗಿ ಮಾಧ್ಯಮಗಳ ಸೃಷ್ಟಿ ಎಂದು ಹೇಳಿದ್ದೆ. ಇದರಿಂದ ಮಾಧ್ಯಮಗಳಿಗೆ ಬೇಸರವಾಗಿರಬಹುದು. ಜಮೀರ್ ಅವರ ಹೇಳಿಕೆ ಮೊದಲ ಬಾರಿಗೆ ಹೇಳಿದ್ದಲ್ಲ. ಜಮೀರ್ ಅವರು ಯಾರಿಗೆ ಈ ಪದ ಬಳಸಿದ್ದರು ಅವರು ಇದಕ್ಕೆ ಈ ಹಿಂದೆ ಆಕ್ಷೇಪ ಮಾಡಿರಲಿಲ್ಲ. ಈ ಹಿಂದೆ ಮಾಧ್ಯಮಗಳು ಪ್ರಶ್ನೆ ಮಾಡಿರಲಿಲ್ಲ ಎಂದು ಹೇಳಿದ್ದೆ. ನಾವು ಹಳ್ಳಿ ಹಳ್ಳಿಗೆ ಹೋಗಿ ಒಂದು ತಿಂಗಳ ಕಾಲ ಚುನಾವಣೆ ಮಾಡಿದ್ದೆವು. ಕ್ಷೇತ್ರದ ಹೊರಗೆ ಈ ವಿಚಾರ ಚರ್ಚೆಯಾಗುತ್ತಿತ್ತೇ ಹೊರತು, ಕ್ಷೇತ್ರದ ಒಳಗೆ ಅಭಿವೃದ್ಧಿ ವಿಚಾರವಷ್ಟೇ ಚರ್ಚೆಯಾಗಿತ್ತು ಎಂದು ಹೇಳಿದರು.
ಈ ಕ್ಷೇತ್ರ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಕ್ಷೇತ್ರ. ಅವರಿಂದ ತೆರವಾದ ಹಿನ್ನೆಲೆಯಲ್ಲಿ ಅವರ ಅಭಿವೃದ್ಧಿ ಯೋಜನೆಗಳ ಚರ್ಚೆಯಾಗಿತ್ತು. ನಾನು ನನ್ನ ಅಂತರಾಳದ ಮಾತುಗಳನ್ನು ವ್ಯಕ್ತಪಡಿಸಿದ್ದೆನೇ ಹೊರತು ಮಾಧ್ಯಮಗಳನ್ನು ದೂಷಿಸುವುದಲ್ಲ. ನನ್ನ ಮಾತಿನಿಂದ ಮಾಧ್ಯಮಗಳಿಗೆ ಬೇಸರವಾಗಿದ್ದರೆ ಕ್ಷಮೆ ಇರಲಿ ಎಂದು ಸುರೇಶ್ ಹೇಳಿದರು.