ಇಲ್ಲಿ ಬಿಟ್ಟ ದುಶ್ಚಟವನ್ನು ಊರಿಗೆ ಮರಳಿದ ನಂತರ ಹಳೆಯ ಸ್ನೇಹಿತರೊಂದಿಗೆ ಸೇರಿ ಮತ್ತೆ ದುಶ್ಚಟಕ್ಕೆ ದಾಸರಾಗಬೇಡಿ. ಯುವಕರ ದುಶ್ಚಟದಿಂದಾಗಿ ಬೇಸತ್ತ ಕುಟುಂಬಸ್ಥರು ಸೇರಿ ದುಶ್ಚಟಕ್ಕೆ ದಾಸರಾದವರನ್ನು ದೂರ ಮಾಡುವ ಸಂದರ್ಭ ಬರಬಹುದಾಗಿದೆ.

ಯಲ್ಲಾಪುರ: ದುಶ್ಚಟ ಬಿಟ್ಟರೆ ಅಭಿವೃದ್ಧಿ ಹೊಂದಿ ಉತ್ತಮ ಜೀವನ ಪಡೆಯಲು ಸಾಧ್ಯವಿದೆ. ಇಂತಹ ಸಮಾಜಮುಖಿ ಕಾರ್ಯವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಮಾಜಿ ಶಾಸಕ ವಿ.ಎಸ್. ಪಾಟೀಲ ಹೇಳಿದರು.

ಮಂಗಳವಾರ ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಅಡಿಯಲ್ಲಿ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆಯೋಜಿಸಿದ ೨೧೧೪ನೇ ಮದ್ಯವರ್ಜನ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಇಲ್ಲಿ ಬಿಟ್ಟ ದುಶ್ಚಟವನ್ನು ಊರಿಗೆ ಮರಳಿದ ನಂತರ ಹಳೆಯ ಸ್ನೇಹಿತರೊಂದಿಗೆ ಸೇರಿ ಮತ್ತೆ ದುಶ್ಚಟಕ್ಕೆ ದಾಸರಾಗಬೇಡಿ. ಯುವಕರ ದುಶ್ಚಟದಿಂದಾಗಿ ಬೇಸತ್ತ ಕುಟುಂಬಸ್ಥರು ಸೇರಿ ದುಶ್ಚಟಕ್ಕೆ ದಾಸರಾದವರನ್ನು ದೂರ ಮಾಡುವ ಸಂದರ್ಭ ಬರಬಹುದಾಗಿದೆ ಎಂದು ಎಚ್ಚರಿಸಿದರು.

ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ ಎಂ. ಮಾತನಾಡಿ, ಚಟಮುಕ್ತ ಸಮಾಜ ನಿರ್ಮಾಣದ ಕುರಿತಾಗಿ ಸಂಸ್ಥೆ ಪ್ರಬಲ ಸಂಘಟನೆ ಮಾಡಿದೆ. ಮನುಷ್ಯನಾಗಿ ಹುಟ್ಟಿದಾಗ ಯಾವುದೇ ಚಟಗಳಿರುವುದಿಲ್ಲ. ನಾವು ತಪ್ಪು ದಾರಿ ಹಿಡಿಯುವುದು ನಮ್ಮಿಂದಲೇ ಹೊರತು ಇದಕ್ಕೆ ಕಾರಣ ಬೇರೆಯವರಲ್ಲ. ಯಾವುದೇ ಧರ್ಮ ಕೆಟ್ಟದ್ದನ್ನು ಬೋಧಿಸದು. ಇಲ್ಲಿ ಮದ್ಯ ತ್ಯಜಿಸಿದವರ ಕುಟುಂಬ ಅಭಿವೃದ್ಧಿಯಾಗುವ ಮೂಲಕ ಜೀವನ ಬದಲಾವಣೆಯಾಗಬೇಕು ಎಂದರು.

ಬಸವರಾಜ ನಡುವಿನಮನಿ ಮಾತನಾಡಿ, ಸುಂದರ ಬದುಕು ಏಳು ದಿನಕ್ಕೆ ಸೀಮಿತವಾಗಿರದೇ ಜೀವನುದ್ದಕ್ಕೂ ನಿಮ್ಮದಾಗಿರಲಿ ಎಂದರು.

ಶಿಬಿರದಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಫಾ. ಜೊಯಸ್ಟನ್, ಜಿಲ್ಲಾ ಸಮಿತಿ ಸದಸ್ಯ ಡಿ.ಎನ್. ಗಾಂವ್ಕರ್ ಮಾತನಾಡಿದರು. ಶಿಬಿರಾರ್ಥಿ ನಾಗೇಶ ಪಟಗಾರ ಅನಿಸಿಕೆ ವ್ಯಕ್ತಪಡಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷೆ ಗೌರಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

ಪ್ರಮುಖರಾದ ಭವ್ಯ ಶೆಟ್ಟಿ, ವಿನಾಯಕಪೈ, ಶಿವಲಿಂಗಯ್ಯ ಅಲ್ಲಯ್ಯನವವರಮಠ, ಮುರಳಿ ಹೆಗಡೆ, ಶೇಖರ ಶೇಟ, ಫಾ. ರಾಯಿಸ್ಟನ್ ಗೊನ್ಸಾಲ್ಬಿಸ್, ಡಾ. ರವಿ ಭಟ್ಟ, ಲೋಕನಾಥ ಗಾಂವ್ಕರ್, ಗಜಾನನ ನಾಯ್ಕ, ಎಂ.ಎಸ್. ಹೆಗಡೆ, ಗೌರಿ ನಾಯ್ಕ, ಕುಮುದಾ ಸಾಣೆ, ಲಕ್ಷ್ಮೀ ರಾಜು, ರಮೇಶ, ಗಣೇಶ ಆಚಾರ್ಯ, ಗಣೇಶ ಹೆಗಡೆ, ಪ್ರೇಮಾನಂದ ನಾಯ್ಕ ವೇದಿಕೆಯಲ್ಲಿದ್ದರು.

೬೩ ಶಿಬಿರಾರ್ಥಿಗಳು ಮದ್ಯಪಾನ ತ್ಯಜಿಸಿ ನವಜೀವನಕ್ಕೆ ಕಾಲಿಟ್ಟರು. ಯೋಜನಾಧಿಕಾರಿ ಸಂತೋಷಕುಮಾರ ಸ್ವಾಗತಿಸಿದರು. ರಾಜೀವಿ ನಿರೂಪಿಸಿದರು. ಭರತ ವಂದಿಸಿದರು.