ಎಲ್ಲರೂ ಕೈ ಜೋಡಿಸಿದ್ರೆ ಉತ್ತಮ ಸಮಾಜ ನಿರ್ಮಾಣ

| Published : Jun 24 2025, 12:32 AM IST

ಸಾರಾಂಶ

ರಾಜಕಾರಣಿಗಳಿಂದಲೇ ಎಲ್ಲವನ್ನು ನಿರೀಕ್ಷೆ ಮಾಡುವ ಬದಲು ಎಲ್ಲರೂ ಸೇರಿ ಕೆಲಸ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಕ್ರೆಡೈ ಅಫೋರ್ಡೇಬಲ್ ಹೌಸಿಂಗ್ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಿಜಿಕೆ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಚೈತನ್ಯ ಕುಲಕರ್ಣಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಜಕಾರಣಿಗಳಿಂದಲೇ ಎಲ್ಲವನ್ನು ನಿರೀಕ್ಷೆ ಮಾಡುವ ಬದಲು ಎಲ್ಲರೂ ಸೇರಿ ಕೆಲಸ ಮಾಡುವುದರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಕ್ರೆಡೈ ಅಫೋರ್ಡೇಬಲ್ ಹೌಸಿಂಗ್ ಕಮಿಟಿಯ ರಾಷ್ಟ್ರೀಯ ಅಧ್ಯಕ್ಷ ಮತ್ತು ಸಿಜಿಕೆ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಚೈತನ್ಯ ಕುಲಕರ್ಣಿ ಹೇಳಿದರು.

ನಗರದಲ್ಲಿ ಭಾನುವಾರ ಪ್ರಯತ್ನ ಸ್ವಯಂ ಸೇವಾ ಸಂಸ್ಥೆಯ 15ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ದಾನಿಗಳಿಗೆ ಕೊರತೆ ಇಲ್ಲ. ಆದರೆ, ಅದನ್ನು ಸತ್ಪಾತ್ರರಿಗೆ ತಲುಪಿಸುವವರು ಕಡಿಮೆ. ಆದರೆ ಪ್ರಯತ್ನ ಸಂಘಟನೆ ಯಾವುದೇ ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಪಡೆದ ದಾನವನ್ನು ಅವಶ್ಯ ಉಳ್ಳವರಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದು ಪ್ರಶಂಸಿಸಿದರು.ಮಹಿಳೆಯರು ತಮ್ಮ ಕೆಲಸದ ನಡುವೆಯೂ ಸಮಯ ಮಾಡಿಕೊಂಡು ಈ ರೀತಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಇಂತಹ ಸಂಘಟನೆಯ ಕುರಿತು ಜನರಿಗೆ ಮಾಹಿತಿ ಕೊರತೆ ಇದೆ. ಸರಿಯಾದ ಮಾಹಿತಿ ತಲುಪಿಸಿದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಾನಿಗಳು ಖಂಡಿತವಾಗಿ ಮುಂದೆ ಬರುತ್ತಾರೆ ಎಂದರು.ಸುರೇಶ ಅಂಗಡಿ ಎಜುಕೇಶನ್ ಫೌಂಡೇಶನ್ ನಿರ್ದೇಶಕಿ ಡಾ.ಸ್ಫೂರ್ತಿ ಪಾಟೀಲ ಮಾತನಾಡಿ, ಪ್ರಯತ್ನ ಸಂಘಟನೆ ಕಳೆದ 15 ವರ್ಷದಲ್ಲಿ ಸಮಾಜಕ್ಕಾಗಿ ಬಹಳ ದೊಟ್ಟಮಟ್ಟದಲ್ಲಿ ಕೆಲಸ ಮಾಡಿದೆ. ಇಂತಹ ಅಪರೂಪದ ಸಂಘಟನೆಗಳ ಜೊತೆ ಸಮಾಜ ಕೈ ಜೋಡಿಸಿದರೆ ಹೆಚ್ಚು ಹೆಚ್ಚು ಅವಶ್ಯಕತೆ ಉಳ್ಳವರನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.ಮುಂದಿನ ದಿನಗಳಲ್ಲಿ ಪ್ರಯತ್ನ ಸಂಘಟನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಸುರೇಶ ಅಂಗಡಿ ಫೌಂಡೇಶನ್‌ನಿಂದ ಬಡ, ಪ್ರತಿಭಾವಂತ ಮಕ್ಕಳಿಗೆ ಪ್ರಯತ್ನ ಸಂಘಟನೆಯ ಮೂಲಕ ವಿದ್ಯಾರ್ಥಿ ವೇತನ ನೀಡಲು ಸಿದ್ಧ. ಜೊತೆಗೆ ಯಾವುದೇ ನೆರವು ಅಪೇಕ್ಷಿಸಿದರೂ ತಾವು ಕೈ ಜೋಡಿಸುವುದಾಗಿ ತಿಳಿಸಿದರು. ಹಿರಿಯ ಪತ್ರಕರ್ತ ಎಂ.ಕೆ.ಹೆಗಡೆ ಮಾತನಾಡಿ, ಸಮಾಜ ಸೇವೆಗಿಂತ ಸ್ವಯಂ ಸೇವೆ ಮಾಡಿಕೊಳ್ಳುವ ಸ್ವಯಂ ಸೇವಾ ಸಂಘಟನೆಗಳೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಪ್ರಯತ್ನದಂತಹ ನಿಸ್ವಾರ್ಥ ಸಂಘಟನೆಗಳು ಮಾಡುತ್ತಿರುವ ಕಾರ್ಯ ಸ್ತುತ್ಯಾರ್ಹ. ಪ್ರಯತ್ನ ಸಂಘಟನೆ ಬಹಳ ದೊಡ್ಡದಾಗಿ ಬೆಳೆಯದಿರಬಹುದು. ಆದರೆ ಸಂಗ್ರಹವಾದ ಹಣದಲ್ಲಿ ಒಂದು ಪೈಸೆಯೂ ದುರುಪಯೋಗವಾಗದ ರೀತಿಯಲ್ಲಿ ಅದನ್ನು ಸಮಾಜಕ್ಕೆ ತಲುಪಿಸುವ ಕೆಲಸವನ್ನು ಈ ಒಂದೂವರೆ ದಶಕದಲ್ಲಿ ಮಾಡುತ್ತ ಬಂದಿದೆ ಎಂದರು. ದಾನಿಗಳಾದ ಮಲ್ಲಿಕಾ ಆಚಾರ್ಯ, ಗಾಯತ್ರಿ ಪಂಡಿತ, ಆರತಿ ಕುಲಕರ್ಣಿ, ಸ್ಮಿತಾ ದೀಕ್ಷಿತ, ಪ್ರಶಾಂತ ಶಿವಕುಮಾರ ಅವರನ್ನು ಹಾಗೂ ಕ್ರೀಡಾಪಟು ತನಿಷ್ಕಾ ಕಾಲಭೈರವ್ ಅವರನ್ನು ಸನ್ಮಾನಿಸಲಾಯಿತು. ಪ್ರಯತ್ನ ಸಂಘಟನೆ ಸದಸ್ಯರೆಲ್ಲ ಸೇರಿ ಅಧ್ಯಕ್ಷೆ ಶಾಂತಾ ಆಚಾರ್ಯ ಅವರನ್ನು ಸತ್ಕರಿಸಿದರು. ದಕ್ಷ ಬಾಲೋಜಿ ಪ್ರಾರ್ಥನೆ ಹಾಡಿದರು. ಪ್ರಯತ್ನ ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ ಸ್ವಾಗತಿಸಿ, ಪ್ರಯತ್ನ ಸಂಘಟನೆಯ ಕಾರ್ಯಗಳ ಕುರಿತು ವಿವರಿಸಿದರು. ಕಾರ್ಯಕಾರಿ ಸದಸ್ಯೆ ಪದ್ಮಾ ವೆರ್ಣೇಕರ್, ಶ್ವೇತಾ ಬಿಜಾಪುರೆ ಮಾತನಾಡಿದರು. ಪ್ರಯತ್ನ ಸಂಘಟನೆ ಕಾರ್ಯಕಾರಿ ಸಮಿತಿ ಸದಸ್ಯರಾದ ಆರತಿ ಭಟ್, ಗೌರಿ ಸರ್ನೋಬತ್, ಮಲ್ಲಿಕಾ ಆಚಾರ್ಯ, ಸುನೀತಾ ಭಟ್, ವರದಾ ಭಟ್, ಹೇಮಾ ಮುತಾಲಿಕ, ವೀಣಾ ಕುಲಕರ್ಣಿ ಅವರನ್ನು ಪರಿಚಯಿಸಲಾಯಿತು. ಸಮೃದ್ಧ ಫೌಂಡೇಶನ್ ಸದಸ್ಯರನ್ನು ಗೌರವಿಸಲಾಯಿತು. ಎನ್ ಎಸ್ ಪೈ ಕನ್ನಡ ಮಾಧ್ಯಮ ಶಾಲೆಯ ಪ್ರಾಚಾರ್ಯೆ ರಾಧಿಕಾ ನಾಯಕ, ಮನಿಷಾ ಕಂಕನಮೇಲಿ, ಸಮೃದ್ಧಿ ಫೌಂಡೇಶನ್ ಅಧ್ಯಕ್ಷ ಪ್ರಭು ಕಾಕತಿಕರ್, ಸಮೃದ್ಧ ಫೌಂಡೇಶನ್ ಅಧ್ಯಕ್ಷ ಶಿವನಗೌಡ ಮೊದಲಾದವರು ಮಾತನಾಡಿ, ಪ್ರಯತ್ನ ಸಂಘಟನೆಯಿಂದ ತಮ್ಮ ಸಂಸ್ಥೆಗೆ ಆಗಿರುವ ನೆರವನ್ನು ಸ್ಮರಿಸಿದರು. ಪಾಂಡುರಂಗ ರಡ್ಡಿ, ಗ್ರೀನ್ ಸೇವಿಯರ್ಸ್ ಅಧ್ಯಕ್ಷ ಸಮೀರ್ ಮಜಲಿ ಮಾತನಾಡಿದರು. ಸಮೃದ್ಧಿ ಫೌಂಡೇಶನ್ ಅನಾಥಾಶ್ರಮದ ಮಕ್ಕಳಿಂದ ನೃತ್ಯ ನಡೆಯಿತು. ಶ್ಯಾಮ್ ಆಚಾರ್ಯ, ವೈಷ್ಣವಿ ಕುಲಕರ್ಣಿ, ಪೂಜಾ ಆಚಾರ್ಯ, ಸಂಕಲ್ಪ ಸರ್ನೋಬತ್ ನಿರೂಪಿಸಿದರು. ಆರತಿ ಭಟ್ ವಂದಿಸಿದರು.