ಸನ್ಮಾರ್ಗದಲ್ಲಿ ನಡೆದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಶಾಸಕ ರವಿಕುಮಾರ್‌

| Published : Feb 04 2024, 01:33 AM IST

ಸನ್ಮಾರ್ಗದಲ್ಲಿ ನಡೆದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ಶಾಸಕ ರವಿಕುಮಾರ್‌
Share this Article
  • FB
  • TW
  • Linkdin
  • Email

ಸಾರಾಂಶ

ಅಂಬಿಗ ಚೌಡಯ್ಯರವರು ಸಮಾಜದ ಜನರ ಒಳಿತನ್ನು ಬಯಸಿ ಉತ್ತಮ ಚಿಂತನೆಯನ್ನೊಳಗೊಡಂತೆ ನೇರ ನಿರ್ಭೀತಿ ನುಡಿಗಳಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರ ಅನುಭವ ಮಂಟಪ ಕಟ್ಟುವಲ್ಲಿ ಅಂಬಿಗರ ಚೌಡಯ್ಯನವರ ಕಾಯಕ ಅತೀ ಮಹತ್ವದಾಗಿದೆ. ಸಮಾಜವು ಚೌಡಯ್ಯನವರ ಸಾಧನೆ, ಕೊಡುಗೆ, ಮಹತ್ವವನ್ನು ಸ್ಮರಿಸಬೇಕು.

ಕನ್ನಡಪ್ರಭ ವಾರ್ತೆ ಮಂಡ್ಯ

ಬಸವಣ್ಣನವರ ಸಮಕಾಲಿನವರಾದ ಅಂಬಿಗರ ಚೌಡಯ್ಯನವರು ಬಹಳ ನಿಷ್ಠೆಯಿಂದ ದೋಣಿ ನಡೆಸುವ ಕಾಯಕವನ್ನು ಮಾಡುತ್ತಿದ್ದರು. ಸತ್ಯ ಹಾಗೂ ನಂಬಿಗಸ್ಥರಾಗಿದ್ದರು. ಜನಸಾಮಾನ್ಯರು ಅಂಬಿಗ ಚೌಡಯ್ಯನವರ ಸನ್ಮಾರ್ಗದಲ್ಲಿ ನಡೆಯಬೇಕು. ಆಗ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದು ಶಾಸಕ ಪಿ.ರವಿಕುಮಾರ್ ಮಾತನಾಡಿದರು.

ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಡೆದ 2023-24ನೇ ಸಾಲಿನ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಅಂಬಿಗರ ಚೌಡಯ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಜಿಲ್ಲೆಯಲ್ಲಿರುವ ಸಣ್ಣ ಸಣ್ಣ ಸಮುದಾಯಗಳು ಆರ್ಥಿಕವಾಗಿ ಸಬಲವಾಗಬೇಕು. ಆ ಸಮುದಾಯಗಳು ಮುಖ್ಯವಾಹಿನಿಗೆ ಬಂದಾಗ ಇಂತಹ ಆಚರಣೆಗಳು ಅರ್ಥಪೂರ್ಣಗೊಳ್ಳುತ್ತವೆ ಎಂದರು.

ನಗರದಲ್ಲಿ ಸಮುದಾಯ ಭವನವನ್ನು ಕಟ್ಟಲು ವಿಧಾನ ಪರಿಷತ್ ಶಾಸಕರಾದ ತಿಪ್ಪಣ್ಣ ಕಮಕನೂರು ಅವರು 10 ಲಕ್ಷ ರು. ನೀಡುವುದಾಗಿ ಹೇಳಿದ್ದು, ಸರ್ಕಾರದ ನಿಧಿಯಿಂದ 10 ಲಕ್ಷ ರು. ನೀಡುವುದರ ಜೊತೆಗೆ ವೈಯಕ್ತಿಕವಾಗಿ 1 ಲಕ್ಷ ರು. ನೀಡುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರು ಮಾತನಾಡಿ, ಅಂಬಿಗರ ಚೌಡಯ್ಯ 12 ನೇ ಶತಮಾನದಲ್ಲಿ ಜೀವಿಸಿದ್ದ ಶಿವಶರಣ ಹಾಗೂ ವಚನಕಾರರಾಗಿದ್ದರು. ಇವರು ವೃತ್ತಿಯಲ್ಲಿ ಅನುಭಾವಿ ಅಂಬಿಗರಾಗಿದ್ದರು. ಅಂದಿನ ಸಮಾಜದಲ್ಲಿದ್ದ ಧಾರ್ಮಿಕ ನೀತಿ- ನಿಯಮಗಳು, ಕಟ್ಟುಪಾಡುಗಳು, ಆಚಾರ- ವಿಚಾರಗಳಲ್ಲಿ ಬಹಳಷ್ಟು ಮಾರ್ಪಾಡುಗಳನ್ನು ಅಂಬಿಗರ ಚೌಡಯ್ಯನವರ ವಚನದಲ್ಲಿ ಕಾಣಬಹುದು ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವಾರಾಜ್ ಮಾತನಾಡಿ, ಅಂಬಿಗ ಚೌಡಯ್ಯರವರು ಸಮಾಜದ ಜನರ ಒಳಿತನ್ನು ಬಯಸಿ ಉತ್ತಮ ಚಿಂತನೆಯನ್ನೊಳಗೊಡಂತೆ ನೇರ ನಿರ್ಭೀತಿ ನುಡಿಗಳಿಂದ ವಚನಗಳನ್ನು ರಚಿಸಿದ್ದಾರೆ. ಬಸವಣ್ಣನವರ ಅನುಭವ ಮಂಟಪ ಕಟ್ಟುವಲ್ಲಿ ಅಂಬಿಗರ ಚೌಡಯ್ಯನವರ ಕಾಯಕ ಅತೀ ಮಹತ್ವದಾಗಿದೆ. ಸಮಾಜವು ಚೌಡಯ್ಯನವರ ಸಾಧನೆ, ಕೊಡುಗೆ, ಮಹತ್ವವನ್ನು ಸ್ಮರಿಸಬೇಕು ಎಂದರು.

ಸಮಾಜದ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಬೆಸ್ತ, ಗಂಗಾಮತ ಸಮುದಾಯದವರಿಗೆ ಅಂಬಿಗರ ಚೌಡಯ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕೃತರು:

ಎಲ್. ಲಿಂಗರಾಜು, (ಶಿಕ್ಷಣ ಕ್ಷೇತ್ರ), ಸಿದ್ದರಾಜು (ಪೂಜಾ ಕುಣಿತ), ಡಾ. ಜಯರಾಮು(ಸಮಾಜ ಸೇವಕರು), ಬೀಸುಬಲೆ ಮಹಾದೇವ ( ಮೀನುಗಾರಿಕೆ). ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶೇಖ್ ತನ್ವಿರ್ ಆಸೀಫ್, ತುಮಕೂರು ಜಿಲ್ಲೆಯ ವೇದವ್ಯಾಸ ಮಠದ ಬಸವಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯರು ತಿಪ್ಪಣ್ಣ ಕಮಕನೂರು, ಎನ್. ರವಿಕುಮಾರ್, ಮೀನುಗಾರಿಕೆ ಅಧ್ಯಕ್ಷ ಮಂಜುನಾಥ್, ಮುಖಂಡರು ಸಂದೇಶ್ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

ಮೆರವಣಿಗೆಗೆ ಚಾಲನೆ:

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಅಂಬಿಗರ ಚೌಡಯ್ಯರವರ ಅಲಂಕೃತ ಭಾವಚಿತ್ರ ಮೆರವಣಿಗೆಗೆ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಿಂದ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಅಂಬಿಗರ ಚೌಡಯ್ಯನವರು 12ನೇ ಶತಮಾನದ ಪ್ರಮುಖ ವಚನಗಾರರಾಗಿದ್ದು, ಬಸವಣ್ಣನವರ ಜೊತೆಗೂಡಿ ಅನೇಕ ರೀತಿಯ ಸಾಹಿತ್ಯವನ್ನು ರಚಿಸಿದ್ದಾರೆ. ನಾವೆಲ್ಲರೂ ಅವರನ್ನು ಸ್ಮರಿಸುವ ಮೂಲಕ ಅವರ ವಚನಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಅಂದಿನ ಸಮಾಜದಲ್ಲಿ ಶೋಷಿತರ ಬೆನ್ನೆಲುಬಾಗಿ ನಿಂತು ತಮ್ಮ ವಚನಗಳ ಮೂಲಕ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಿ ಸಮಾನತೆ ಹಾಗೂ ಸಾಮಾಜಿಕ ನ್ಯಾಯ ದೊರಕಿಸಲು ಮುಂದಾಗಿದ್ದಾರೆ. ಪ್ರಸ್ತುತ ಸಂವಿಧಾನದಲ್ಲಿರುವ ಸಾಮಾಜಿಕ ನ್ಯಾಯವನ್ನು ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಣುತ್ತೇವೆ. ಅವರ ಆದರ್ಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಡಾ. ಎಚ್.ಎಲ್ ನಾಗರಾಜು, ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶೇಖ್ ತನ್ವಿರ್ ಆಸೀಫ್ ರವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.