ಏ. ೭ರಂದು ಶಿರಸಿಯಲ್ಲಿ ಬೃಹತ್‌ ಉದ್ಯೋಗ ಮೇಳ

| Published : Mar 30 2024, 12:45 AM IST

ಸಾರಾಂಶ

ಉದ್ಯೋಗ ಮೇಳದಲ್ಲಿ ಬೆಂಗಳೂರು, ಮಂಗಳೂರು, ಗೋವಾ ಸೇರಿದಂತೆ ವಿವಿಧ ಭಾಗಗಳಿಂದ ೩೦ ಖಾಸಗಿ ಕಂಪನಿಗಳು ಹಾಗೂ ರಾಜ್ಯದ ೨೫ ಖಾಸಗಿ ಶಿಕ್ಷಣ ಸಂಸ್ಥೆಗಳು ಭಾಗವಹಿಸುತ್ತಿವೆ.

ಶಿರಸಿ: ಉತ್ತರ ಕನ್ನಡ ಜಿಲ್ಲಾ ಶಿಕ್ಷಕ- ಶಿಕ್ಷಕಿಯರ ನಿರಂತರ ಸಹಾಯವಾಣಿ ಶಿರಸಿ, ಪಿಜಿಎಸ್ಎಸ್ ಇನ್‌ಸ್ಟಿಟ್ಯೂಟ್ ಆಫ್ ಫಾಯರ್ ಆ್ಯಂಡ್ ಸೇಫ್ಟಿ, ಹೋಟೆಲ್ ಮ್ಯಾನೇಜ್‌ಮೆಂಟ್ ಹಾಗೂ ಮಾರಿಕಾಂಬಾ ಕಾಲೇಜು ಅಭಿವೃದ್ಧಿ ಸಮಿತಿಯ ಆಶ್ರಯದಲ್ಲಿ ಏ. ೭ರಂದು ಬೆಳಗ್ಗೆ ೯ರಿಂದ ನಗರದ ಮಾರಿಕಾಂಬಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬೃಹತ್ ಉದ್ಯೋಗ ಮೇಳ, ಉತ್ತಮ ಶಿಕ್ಷಕರ ಹಾಗೂ ಉತ್ತಮ ಶಿಕ್ಷಣ ಸಂಸ್ಥೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಫ್ಯಾಷನ್ ಡಿಸೈನಿಂಗ್ ಎಕ್ಸಿಬಿಷನ್ ಕಮ್ ಸೇಲ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘಟಕ ಎಸ್.ಎಸ್. ಹೆಗಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯಾದ್ಯಂತ ಹಾಗೂ ಜಿಲ್ಲೆಯಲ್ಲಿ ಉಂಟಾಗಿರುವ ನಿರುದ್ಯೋಗ ಸಮಸ್ಯೆ ನಿವಾರಿಸುವ ದೃಷ್ಟಿಯಿಂದ ಉದ್ಯೋಗ ಆಕಾಂಕ್ಷಿಗಳಿಗೆ ಸ್ಥಳದಲ್ಲಿಯೇ ಉದ್ಯೋಗದ ನೇಮಕಾತಿ ಆಯ್ಕೆ ಪತ್ರವನ್ನು ನೀಡುವುದರ ಮೂಲಕ ಉದ್ಯೋಗ ನೀಡುವ ಉದ್ದೇಶ ಹೊಂದಿದ್ದೇವೆ. ಉದ್ಯೋಗ ಮೇಳದಲ್ಲಿ ಬೆಂಗಳೂರು, ಮಂಗಳೂರು, ಗೋವಾ ಸೇರಿದಂತೆ ವಿವಿಧ ಭಾಗಗಳಿಂದ ೩೦ ಖಾಸಗಿ ಕಂಪನಿಗಳು ಹಾಗೂ ರಾಜ್ಯದ ೨೫ ಖಾಸಗಿ ಶಿಕ್ಷಣ ಸಂಸ್ಥೆಗಳು ಭಾಗವಹಿಸುತ್ತಿವೆ. ೩ ಸಾವಿರಕ್ಕಿಂತ ಹೆಚ್ಚು ಉದ್ಯೋಗ ಅವಕಾಶಗಳು ಇದ್ದು, ಕಂಪನಿಗಳಲ್ಲಿ ವೇತನ ೧೫ ಸಾವಿರದಿಂದ ಪ್ರಾರಂಭವಾಗಿ ಅವರ ವಿದ್ಯಾರ್ಹತೆಗೆ ತಕ್ಕಂತೆ ವೇತನವನ್ನು ನೀಡುವಂತೆ ಈಗಾಗಲೇ ಭಾಗವಹಿಸುವ ಕಂಪನಿಗಳಿಗೆ ತಿಳಿಸಲಾಗಿದೆ. ಅದೇ ರೀತಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬೋಧನೆಗೆ ತೆರಳುವ ಶಿಕ್ಷಕರಿಗೆ, ಮುಖ್ಯಾಧ್ಯಾಪಕರಿಗೆ, ಪ್ರಾಂಶುಪಾಲರಿಗೆ, ಊಟ, ವಸತಿ, ಪ್ರಯಾಣಭತ್ಯೆ, ವೈದ್ಯಕೀಯ, ಪಿಎಫ್ ಸೌಲಭ್ಯದೊಂದಿಗೆ ಸರ್ಕಾರ ನಿಗದಿಪಡಿಸಿದ ವೇತನದಿಂದ ಒಂದು ಲಕ್ಷಕ್ಕಿಂತ ಹೆಚ್ಚಿನ ವೇತನವು ಸಿಗಲಿದೆ ಎಂದರು.

ಹೆಚ್ಚಿನ ಮಾಹಿತಿಗಾಗಿ ಮೊ. ೭೪೮೩೩೮೨೦೭೪, ೯೮೮೦೧೭೯೧೭೭ ಅಥವಾ ೮೬೧೮೩೫೯೫೮೮ ಈ ನಂಬರ್ ಸಂಪರ್ಕಿಸಬಹುದು ಎಂದರು. ಪಿಜಿಎಸ್ಎಸ್ ಇನ್‌ಸ್ಟಿಟ್ಯೂಟ್ ಆಫ್ ಫಾಯರ್ ಆ್ಯಂಡ್‌ ಸೇಪ್ಟಿ, ಹೋಟೆಲ್ ಮ್ಯಾನೇಜ್‌ಮೆಂಟ್ ಪ್ರಾಂಶುಪಾಲ ರಾಜು ಕದಂ, ಉ.ಕ. ಜಿಲ್ಲಾ ಶಿಕ್ಷಕ- ಶಿಕ್ಷಕಿಯರ ನಿರಂತರ ಸಹಾಯವಾಣಿಯ ಅಧ್ಯಕ್ಷ ವಿಶ್ವನಾಥ ಗೌಡ, ಖಜಾಂಚಿ ನೀಲಕಂಠ ಇದ್ದರು.

ಫೋಟೊ

ಸುದ್ದಿಗೋಷ್ಠಿಯಲ್ಲಿ ಎಸ್.ಎಸ್. ಹೆಗಡೆ ಮಾತನಾಡಿದರು.