ಕನ್ನಡಪ್ರಭ ವಾರ್ತೆ, ತುಮಕೂರು

ಸಾರ್ಥಕ ಜೀವನ ನಡೆಸಲು ಮಾರ್ಗದರ್ಶನ ನೀಡುವುದೇ ಶಿಕ್ಷಣ. ಅಜ್ಞಾನದ ಅಂಧಕಾರವನ್ನು ಕರಗಿಸಿ ಜ್ಞಾನದ ಬೆಳಕನ್ನು ನೀಡುವ ಗುರುತ್ವವುಳ್ಳ ವ್ಯಕ್ತಿ ಗುರು. ಗುರು ತೋರಿದ ದಾರಿಯಲ್ಲಿ ನಡೆದಾಗ ಆನಂದಭರಿತ ಜೀವನ ನಮ್ಮದಾಗುತ್ತದೆ ಎಂದು ಗದಗ - ವಿಜಯಪುರ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ನಿರ್ಭಯಾನಂದ ಸರಸ್ವತಿ ಅಭಿಪ್ರಾಯಪಟ್ಟರು.

ಅವರು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದಲ್ಲಿ ಆಯೋಜಿಸಿದ್ದ ಸ್ವಾಮಿ ವೀರೇಶಾನಂದ ಸರಸ್ವತಿರವರ ‘ಗುರು ಎಂದರೆ ಲಘು ಅಲ್ಲ’ ಲೋಕಾರ್ಪಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಚಾರಿತ್ರ್ಯವಂತ, ಬದ್ಧತೆಯುಳ್ಳ, ಜವಾಬ್ದಾರಿಯುಳ್ಳ ವ್ಯಕ್ತಿಗಳು ದೇಶಕ್ಕೆ ಅವಶ್ಯಕವಾಗಿದ್ದಾರೆ. ಇಂತಹ ವ್ಯಕ್ತಿಗಳ ನಿರ್ಮಾಣ ಶಿಕ್ಷಣದಿಂದ ಮಾತ್ರ ಸಾಧ್ಯ. ಸ್ವಾಮಿ ವಿವೇಕಾನಂದರು ಹೇಳುವಂತೆ ಶಿಕ್ಷಣವೆಂದರೆ ಚಮತ್ಕಾರ. ಶಿಕ್ಷಣವೆಂಬ ಚಮತ್ಕಾರದಿಂದ ಸಾಧಿಸಲಾಗದ್ದು ಯಾವುದೂ ಇಲ್ಲ. ಸ್ವಾಮಿ ವೀರೇಶಾನಂದರ ‘ಗುರು ಎಂದರೆ ಲಘು ಅಲ್ಲ’ ಕೃತಿ ಇಂದಿಗೆ ಬಹಳ ಪ್ರಸ್ತುತವಾದದ್ದು. ಸರಳ ಭಾಷೆಯಲ್ಲಿ ನೇರವಾಗಿ ಅತ್ಯಶ್ಯಕವಾದ ವಿಚಾರಗಳನ್ನು ಮಂಡಿಸಿದ್ದಾರೆ ಎಂದರು.

ಬೆಂಗಳೂರಿನ ಹಿರಿಯ ಕನ್ನಡ ಪ್ರಾಧ್ಯಾಪಕರು ಹಾಗೂ ಸುಪ್ರಸಿದ್ಧ ಗ್ರಂಥಕರ್ತ ಪ್ರೊ, ಜಿ. ಅಶ್ವತ್ಥನಾರಾಯಣ ಸ್ವಾಮಿ ವಿವೇಕಾನಂದರ ನುಡಿಗಳು ಇಂದಿಗೂ ನಿತ್ಯೋಜ್ವಲ. ಅಂತರ್ಗತವಾಗಿರುವ ಚೈತನ್ಯವನ್ನು ಉದ್ಘೋಷಿಸಿದವರು ಸ್ವಾಮಿ ವಿವೇಕಾನಂದರು. ಸ್ವಾಮಿ ವೀರೇಶಾನಂದರ ‘ಗುರು ಎಂದರೆ ಲಘು ಅಲ್ಲ’ ಎಂಬ ಅತ್ಯಂತ ಪ್ರಸ್ತುತವಾದ ಈ ಗ್ರಂಥದಲ್ಲಿ ಅಧ್ಯಾಯಗಳ ಶೀರ್ಷಿಕೆಗಳೇ ಬಹಳ ಮಾರ್ಮಿಕವಾಗಿವೆ. ಜನಮನದ ಜ್ಞಾನಗಂಗೋತ್ರಿಯ ಸಂಗಮವಿದು ಎಂದರು. ಭಾರತ ಸರ್ವೋಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ರಾಮದಾಸ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಕರು ವೇತನಕ್ಕಾಗಿ ಮಾತ್ರವಲ್ಲದೆ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ಹೊಸ ನಿಯಮಾವಳಿಗಳಿಂದ ಅಡೆತಡೆಯುಂಟಾದರೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮಾರ್ಗದರ್ಶನ ನೀಡಬೇಕು ಎಂದರು. ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಸಿಬಂತಿ ಪದ್ಮನಾಭ ಅವರು, ಈ ಕೃತಿಯಲ್ಲಿ ಪ್ರಾಚೀನ ಮತ್ತು ಆಧುನಿಕ ಪರಿಕಲ್ಪನೆಗಳ ಸಮತೋಲಿತ ಮಿಶ್ರಣ ಇದೆ. ದೇಶದ ವರ್ತಮಾನ ಮತ್ತು ಭವಿಷ್ಯಕ್ಕೆ ಶಿಕ್ಷಕರ ವ್ಯಕ್ತಿತ್ವ ಕಾರಣ. ವಿದ್ಯಾರ್ಥಿಗೆ ಶಿಕ್ಷಕನೇ ಪಠ್ಯಪುಸ್ತಕ. ಶಿಕ್ಷಕರಿಗೆ ಚಾರಿತ್ರ್ಯವೇ ಮೂಲ. ಚಾರಿತ್ರ್ಯವನ್ನು ಕಲಿಸಲು ಚಾರಿತ್ರ್ಯವಂತ ಶಿಕ್ಷಕರೇ ಬೇಕು. ಸ್ವಾಮಿ ವಿವೇಕಾನಂದರ ಚಿಂತನೆಯ ಬೆಳಕಿನಲ್ಲಿ ಶಿಕ್ಷಣವನ್ನು ವಿಶ್ಲೇಷಿಸುವುದರ ಮೂಲಕ ಪೂಜ್ಯ ಸ್ವಾಮೀಜೀರವರು ಶಿಕ್ಷಣಕ್ಷೇತ್ರಕ್ಕೆ ಅಮೂಲ್ಯ ಕೊಡುಗೆಯನ್ನು ನೀಡಿದ್ದಾರೆ ಎಂದರು.


ಇದೇ ಸಂದರ್ಭದಲ್ಲಿ ಸ್ವಾಮಿ ವೀರೇಶಾನಂದಜೀರವರ ಕುರಿತು ಪತ್ರಕರ್ತ ನಾಗಣ್ಣ ಹಾಗೂ ವಿಶ್ರಾಂತ ಪ್ರಾಧ್ಯಾಪಕಿ ಪ್ರೊ.ಬಿ.ಜಿ.ಲಲಿತಮ್ಮ ಮಾಜಿ ಸಂಸದ ಬಸವರಾಜು ಗದಗಿನ ಮಾಜಿ ಶಾಸಕ ಡಿ. ಆರ್. ಪಾಟೀಲ್, ಪ್ರೊ. ಎಚ್. ಎಸ್, ನಾಗರಾಜ್, ನಾಗರಾಜ್, ಪದ್ಮಪ್ರಸಾದ್, ಡಾ. ಎಚ್.ಜಿ. ಚಂದ್ರಶೇಖರ್, ಡಾ. ಪದ್ಮಜಾ ವೆಂಕಟೇಶ್, ಡಾ. ಟಿ.ವಿ. ರಾಜು, ಕರಣ್ ಕುಮಾರ್ , ಪುದುವೆಂದಲ ಪ್ರಶಾಂತ ಶಾಸ್ತ್ರಿ ಮುಂತಾದವರು ಪುಸ್ತಕ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ವಾಮಿ ವೀರೇಶಾನಂದಜೀರವರು ಸ್ವಾಗತಿಸಿ, ಡಾ.ವಿವೇಕ್ ನಿರೂಪಿಸಿ ವಂದಿಸಿದರು.