ಸಾರಾಂಶ
ಲಕ್ಷ್ಮೇಶ್ವರ: ಮೂತ್ರಪಿಂಡ ಪ್ರತಿಯೊಬ್ಬ ಮನುಷ್ಯನ ಆರೋಗ್ಯಕ್ಕೆ ಸಹಕಾರಿ ಆಗಿದ್ದು. ಮೂತ್ರ ಪಿಂಡ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಡಯಾಲಿಸಿಸ್ ಯಂತ್ರಗಳು ವರದಾನವಾಗಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಶನಿವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೂತನವಾಗಿ ಆರಂಭಗೊಂಡ ಡಯಾಲಿಸಿಸ್ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದರು.ಈ ಹಿಂದೆ ಲಕ್ಷ್ಮೇಶ್ವರ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಮಾಡುವ ಸೌಲಭ್ಯ ಇರಲಿಲ್ಲ. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ರೋಗಿಗಗಳು ಡಯಾಲಿಸಿಸ್ ಯಂತ್ರದ ಸಹಾಯದಿಂದ ರಕ್ತ ಸ್ವಚ್ಛಗೊಳಿಸುವ ಕಾರ್ಯ ಮಾಡುವ ಮೂಲಕ ರೋಗಿಗಳು ಜೀವ ಉಳಿಸಲು ಸಾಧ್ಯವಾಗುತ್ತದೆ. ಡಯಾಲಿಸಿಸ್ ಮಾಡಿಸಿಕೊಳ್ಳಲು ಪಟ್ಟಣ ಹಾಗೂ ತಾಲೂಕಿನ ಜನರು ಬೇರೆಡೆಗೆ ಹೋಗಬೇಕಾಗಿತ್ತು. ಈಗ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಸೇವೆ ಆರಂಭವಾಗಿರುವುದು ಸಂತೋಷದ ಸಂಗತಿಯಾಗಿದೆ.ಉಚಿತವಾಗಿ ಡಯಾಲಿಸಿಸ್ ಮಾಡುವ ಮೂಲಕ ತಾಲೂಕಿನ ಸಾರ್ವಜನಿಕರಿಗೆ ಆರೋಗ್ಯಕ್ಕೆ ಒಳ್ಳೆಯ ಕಾರ್ಯ ಸರ್ಕಾರ ಮಾಡಿದೆ. ಕೆಲವು ರೋಗಿಗಳಿಗೆ ವಾರದಲ್ಲಿ ೨-೩ ದಿನಕ್ಕೆ ಡಯಾಲಿಸಿಸ್ ಮಾಡುವ ಕಾರ್ಯ ಮಾಡಲಾಗುವುದು ಎಂದು ಹೇಳಿದರು.
ಡೆಂಘೀ ರೋಗವು ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತಿದೆ. ಡೆಂಘೀ ರೋಗದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ನಮ್ಮ ಮನೆಯ ಸುತ್ತಮುತ್ತ ಇರುವ ಕಸ ಹಾಗೂ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ಡೆಂಘೀ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡುವಂತೆ ಸೂಚನೆ ನೀಡಲಾಗಿದೆ. ಡೆಂಘೀ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಗ್ರಾಪಂಗಳ ಪಿಡಿಓಗಳು ಫಾಗಿಂಗ್ ಕಾರ್ಯ ಆಂಭಿಸಿದ್ದಾರೆ ಎಂದು ಹೇಳಿದರು.ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿ, ಲಕ್ಷ್ಮೇಶ್ವರ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸಿಸ್ ಕೇಂದ್ರ ಆರಂಭ ಮಾಡಿರುವುದು ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವೇಳೆ ಬಿಜೆಪಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ಮಾತನಾಡಿದರು. ವಾಸು ಪಾಟೀಲ, ನವೀನ ಬೆಳ್ಳಟ್ಟಿ, ವಿಜಯ ಮೆಕ್ಕಿ, ವೈದ್ಯಾಧಿಕಾರಿ ಡಾ. ಶ್ರೀಕಾಂತ್ ಖಾಟೇವಾಲೆ, ಗದಗ ಜಿಲ್ಲಾ ಡಯಾಲಿಸಿಸ್ ಆರೋಗ್ಯಾಧಿಕಾರಿ ಸಿದ್ದಲಿಂಗೇಶ್ವರ ಶಿವಸಿಂಪಗೇರ, ಲೆಂಕೆಪ್ಪ ಶೆರಸೂರಿ, ಅನಿಲ ಮುಳಗುಂದ, ಗಿರೀಶ ಚೌರೆಡ್ಡಿ, ಕುಮಾರಸ್ವಾಮಿ ಹಿರೇಮಠ, ತಿಮ್ಮರೆಡ್ಡಿ ಮರೆಡ್ಡಿ, ಡಾ. ಸುನೀಲ ಸಜ್ಜನರ. ತಾಂತ್ರಿಕ ಸಹಾಯಕ ವೆಂಕಟೇಶ್ ರಾಠೋಡ, ಸುನೀಲಗೌಡ ಪಾಟೀಲ, ಬಸವರಾಜ ಚಕ್ರಸಾಲಿ ಇದ್ದರು.