ಜಿಲ್ಲೆಯಲ್ಲಿ ಕೃಷಿ ವಿವಿಯಿಂದ ರೈತರಿಗೆ ವರದಾನ

| Published : Nov 11 2025, 01:30 AM IST

ಜಿಲ್ಲೆಯಲ್ಲಿ ಕೃಷಿ ವಿವಿಯಿಂದ ರೈತರಿಗೆ ವರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಇರುವುದು ನಮ್ಮ ರೈತರಿಗೆ ವರದಾನ. ಇದು ರೈತರಿಗೆ ಒಂದು ಮಾದರಿ ವಿಶ್ವವಿದ್ಯಾಲಯ ಎಂದು ರೈತ ಮುಖಂಡ ಎಚ್.ಆರ್.ಬಸವರಾಜಪ್ಪ ಹೇಳಿದರು.

ಶಿವಮೊಗ್ಗ: ಜಿಲ್ಲೆಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಇರುವುದು ನಮ್ಮ ರೈತರಿಗೆ ವರದಾನ. ಇದು ರೈತರಿಗೆ ಒಂದು ಮಾದರಿ ವಿಶ್ವವಿದ್ಯಾಲಯ ಎಂದು ರೈತ ಮುಖಂಡ ಎಚ್.ಆರ್.ಬಸವರಾಜಪ್ಪ ಹೇಳಿದರು.

ನಗರದಲ್ಲಿ ಸೋಮವಾರ ನವುಲೆಯಲ್ಲಿರುವ ಕೆಳದಿ‌ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕೃಷಿ ಮತ್ತು ತೋಟಗಾರಿಕಾ ಮೇಳದ ಸಮಾರೋಪದಲ್ಲಿ ಮಾತನಾಡಿದರು.

ಇಲ್ಲಿ ಎಲ್ಲ ರೀತಿಯ ಪ್ರಾತ್ಯಕ್ಷಿಕೆಗಳಿವೆ. ಯಾವುದೇ ವಿಚಾರದ ಬಗ್ಗೆಯಾದರೂ ಸಂಪೂರ್ಣ ಮಾಹಿತಿ ಕೊಡುವ ವಿಜ್ಞಾನಿಗಳಿದ್ದಾರೆ. ಇದನ್ನು ರೈತರು ಸದುಪಯೋಗ ಪಡಿಸಿಕೊಳ್ಳುತ್ತಿಲ್ಲ. ಇಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಎಲ್ಲಾ ರೀತಿಯ ಕೃಷಿ ಚಟುವಟಿಕೆಗಳ ಅನಾವರಣವಾಗಿದೆ. ಕೇವಲ ಯಾಂತ್ರೀಕರಣ ಮಳಿಗೆಗಳಿಗೆ ಮಾತ್ರ ಭೇಟಿ ನೀಡದೆ, ಸಾಕಷ್ಟು ಪಾತ್ಯಕ್ಷಿಕೆ ಮಳಿಗೆಗಳಿವೆ. ಅಲ್ಲಿಗೂ ಭೇಟಿ ನೀಡಿ ವಿಚಾರಗಳನ್ನು ತಿಳಿದುಕೊಳ್ಳಿ ಎಂದರು.

ಕೃಷಿ ಅನ್ನುವುದು ಒಂದು ಸಂಸ್ಕೃತಿ. ರೈತ ಒಬ್ಬ ವಿಜ್ಞಾನಿ ಯಾವ ಸಮಯಕ್ಕೆ ಯಾವ ಬೆಳೆ ಬೆಳೆಯಬೇಕು ಅನ್ನುವುದನ್ನ ಅರಿತ್ತಿದ್ದ. ಹಿಂದಿನ ಕಾಲದಲ್ಲಿ ಯಾವುದೇ ತಂತ್ರಜ್ಞಾನವಿಲ್ಲದೇ ನಮಗೆ ಅವಶ್ಯಕತೆ ಇರುವ ಎಲ್ಲಾ ಬೆಳೆಗಳನ್ನು ಬೆಳೆಯುತ್ತಿದ್ದೇವು. ಯಾವುದನ್ನು ಕೊಳ್ಳುತ್ತಿರಲ್ಲಿಲ್ಲ. ಯಾವುದೇ ರಾಸಾಯನಿಕ, ಕೀಟನಾಶಕ ಬಳಸದೆ ಉತ್ತಮ‌ ಆಹಾರ ಬೆಳೆದು ಆರೋಗ್ಯವಾಗಿ ಇದ್ದೆವು. ಆದರೆ, ದೇಶಕ್ಕೆ ಆಹಾರ ಉತ್ಪತ್ತಿ ಮಾಡಿಕೊಡುವ ದಾವಂತದಲ್ಲಿ ರಾಸಾಯನಿಕ, ಕೀಟನಾಶಕ, ಹೊಸ ತಂತ್ರಜ್ಞಾನ ಇವೆಲ್ಲವು ಬೇಕಾಯಿತು. ಈಗ ಹೊಸ ಹೊಸ ಬೆಳೆಗಳನ್ನ ಬೆಳೆಯುತ್ತಿದ್ದೇವೆ. ಆದರೆ ತಂತ್ರಜ್ಞಾನವನ್ನು ಚೆನ್ನಾಗಿ ತಿಳಿದುಕೊಳ್ಳಬೇಕು ಎಂದರು.

ಈಗಿನ ಪರಿಸ್ಥಿತಿಯಲ್ಲಿ ಎಲ್ಲರೂ ಏಕ ಬೆಳೆಗೆ ಮೊರೆ ಹೋಗಿದ್ದೇವೆ. ಪ್ರಪಂಚವೇ ಮಾರುಕಟ್ಟೆಯಾಗಿದೆ. ಬೇರೆ ದೇಶಗಳ ಆಹಾರ ಸಾಮಾಗ್ರಿಗಳು ನಮ್ಮ ದೇಶಕ್ಕೆ ಬರುತ್ತವೆ, ನಾವು ಅವರೊಂದಿಗೆ ಸ್ಪರ್ಧೆ ಮಾಡುವುದು ಕಷ್ಟ, ನಾವು ಸಮಗ್ರ ಸಾವಯವ ಕೃಷಿ ಪದ್ಧತಿಯನ್ನು ಅಳವಡಿಸಿ ಎಲ್ಲಾ ಬೆಳೆಗಳನ್ನು ಬೆಳೆದರೆ ಮಾತ್ರ ರೈತ ಬದುಕಲು ಸಾಧ್ಯ. ರೈತ ಇದನ್ನು ಅರಿಯಬೇಕು ಎಂದರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀನಾದಮಯಾನಂದ ಸ್ವಾಮೀಜಿ, ವಿಶ್ವವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್, ವಿಧಾನ ಪರಿಷತ್ ಸದಸ್ಯ ಬಲ್ಕೀಸ್ ಬಾನು, ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ, ಜಿಲ್ಲಾ ಕಾರ್ಯಾಧ್ಯಕ್ಷ ಪಿ.ಡಿ.ಮಂಜಪ್ಪ ಮತ್ತಿತರರು ಇದ್ದರು.