ನೀರಸವಾದ ರಾಷ್ಟ್ರೀಯ ಮತದಾರರ ದಿನಾಚರಣೆ

| Published : Jan 26 2024, 01:47 AM IST

ಸಾರಾಂಶ

ಎದ್ದು ಕಂಡ ತಾಲೂಕು ಮಟ್ಟದ ಅಧಿಕಾರಿಗಳ ಗೈರು ಹಾಜರಿ. ಒಂದು ಗಂಟೆ ತಡವಾಗಿ ಬಂದ ತಹಸೀಲ್ದಾರ ಮಂಜುಳಾ ನಾಯಕ. ಇದರಿಂದ ನ್ಯಾಯಾಧೀಶರು ಕೂಡ ಕಾಯಕಬೇಕಾಯಿತು.

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಇಲ್ಲಿನ ಮಿನಿವಿಧಾನ ಸೌಧದ ಸಭಾಭವನದಲ್ಲಿ ಗುರುವಾರ ನಡೆದ ಹುಕ್ಕೇರಿ ತಾಲೂಕು ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ತಾಲೂಕು ಆಡಳಿತ, ತಾಲೂಕು ಕಾನೂನು ಸೇವಾ ಸಮಿತಿ, ಶಿಕ್ಷಣ ಇಲಾಖೆ, ನ್ಯಾಯವಾದಿಗಳ ಸಂಘದ ಸಹಯೋಗದಲ್ಲಿ ಏರ್ಪಡಿಸಿದ ಈ ಕಾರ್ಯಕ್ರಮಕ್ಕೆ ಬಹುತೇಕ ತಾಲೂಕು ಮಟ್ಟದ ಅಧಿಕಾರಿಗಳ ಗೈರು ಹಾಜರಿ ಎದ್ದು ಕಂಡಿತು. ಯಾವುದೇ ಸಂಘ, ಸಂಸ್ಥೆ, ಚುನಾಯಿತ ಪ್ರತಿನಿಧಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ ನೀಡಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬಂದವು. ಮತದಾರರ ದಿನಾಚರಣೆಗೆ ಉತ್ಸಾಹವೇ ಇಲ್ಲದಂತಾಗಿ ಸಪ್ಪೆ ಎನಿಸಿತು.

ನಿಗದಿತ ಬೆಳಗ್ಗೆ 10ಕ್ಕೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಒಂದು ಗಂಟೆಗೂ ಹೆಚ್ಚು ಕಾಲ 11.12ಕ್ಕೆ ತಡವಾಗಿ ಶುರುವಾಯಿತು. ಇದಕ್ಕೆ ಕಾರಣ ಅಧ್ಯಕ್ಷತೆ ವಹಿಸಬೇಕಿದ್ದ ತಹಸೀಲ್ದಾರ ಮಂಜುಳಾ ನಾಯಕ ಅವರು ತಡವಾಗಿ ಬಂದಿರುವುದರಿಂದ ಕಾರ್ಯಕ್ರಮ ಆರಂಭ ಒಂದು ಗಂಟೆ ವಿಳಂಬವಾಯಿತು.

ನ್ಯಾಯಾಧೀಶರನ್ನೇ ಕಾಯಿಸಿದ ಹುಕ್ಕೇರಿ ತಹಸೀಲದಾರ:

ಇನ್ನು ಉದ್ಘಾಟಕರಾದ ನ್ಯಾಯಾಧೀಶರು, ಮುಖ್ಯ ಅತಿಥಿಗಳು, ವಿಶೇಷ ಉಪನ್ಯಾಸಕರು, ವಿಶೇಷ ಆಹ್ವಾನಿತರು ಸಭಾಭವನದಲ್ಲಿ ತಹಸೀಲ್ದಾರ ಬರುವ ಹಾದಿ ಕಾದು ಕಾದು ಸುಸ್ತಾದರು. ಈ ಮೂಲಕ ತಹಸೀಲದಾರ ಮಂಜುಳಾ ನಾಯಕ ಲೇಟ್ ಲತೀಪ ಎಂಬ ಮೂದಲಿಕೆ ಒಳಗಾದರು. ಇನ್ನು ತಾಲೂಕು ಪಂಚಾಯಿತಿ ಕೋರ್ಟ್ ಸರ್ಕಲ್ ಬಳಿ ಏರ್ಪಡಿಸಿದ ಮತದಾರರ ಜಾಗೃತಿ ಜಾಥಾದಲ್ಲಿ ಬೆರಳಣಿಕೆ ಅಧಿಕಾರಿಗಳು ಭಾಗವಹಿಸಿದ್ದರು. ಇದಕ್ಕೆ ತಾಪಂ ಅಧಿಕಾರಿಗಳು ಅಗತ್ಯ ಪ್ರಚಾರ ನಡೆಸುವಲ್ಲಿ ವಿಫಲವಾಗಿದ್ದಾರೆ ಎಂಬ ಆರೋಪಗಳಿವೆ.

ಸಿವಿಲ್ ನ್ಯಾಯಾಧೀಶ ಅಂಬಣ್ಣ ಕೆ., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ ಕಟ್ಟಿ, ಬಿಇಒ ಪ್ರಭಾವತಿ ಪಾಟೀಲ, ಸಿಡಿಪಿಒ ಎಚ್.ಹೊಳೆಪ್ಪ, ವಕೀಲರ ಸಂಘದ ಅಧ್ಯಕ್ಷ ಅನೀಸ ವಂಟಮೂರಿ, ಎಜಿಪಿ ಅನೀಲ ಕರೋಶಿ, ಗ್ರೇಡ್-2 ತಹಸೀಲದಾರ ಪ್ರಕಾಶ ಕಲ್ಲೋಳಿ, ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಸಾರಾಪುರೆ, ಚುನಾವಣಾ ಶಾಖೆ ಸಿಬ್ಬಂದಿ ಸಂತೋಷ ನಾಯಕರ ಮತ್ತಿತರರು ಉಪಸ್ಥಿತರಿದ್ದರು.

ಮತ ಚಲಾಯಿಸಿ ಪ್ರಜಾಪ್ರಭುತ್ವ ಯಶಸ್ವಿಗೊಳಿಸಿ:

ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಸ್.ರೊಟ್ಟೇರ ಸಮಯದ ಅಭಾವವಿದೆ ಎಂದು ತಹಸೀಲ್ದಾರ ತಡವಾಗಿ ಬಂದಿರುವುದಕ್ಕೆ ತೀವ್ರ ಅಸಮಾಧಾನ ಹೊರಹಾಕಿ ಮಾತು ಆರಂಭಿಸಿ, ಅಂಬೇಡ್ಕರ ಅವರು ರಚಿಸಿದ ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ರಾಷ್ಟ್ರ ನಮ್ಮದಾಗಿದೆ. ಮತ ಪಟ್ಟಿಯಲ್ಲಿರುವ ಪ್ರತಿಯೊಬ್ಬರೂ ತಪ್ಪದೇ ಮತ ಚಲಾವಣೆ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ಮಾಡಿದರು.

ಹಿಡಕಲ್ ಡ್ಯಾಮ್ ಎಚ್‌ಡಿಪಿ ಶಾಲೆ ಸಹಶಿಕ್ಷಕ ಜೆ.ಎಸ್.ಕರೆಣ್ಣವರ ಉಪನ್ಯಾಸ ನೀಡಿದರು. ಇದೇ ವೇಳೆ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾತ ವಿತರಿಸಿ ಗೌರವಿಸಲಾಯಿತು. ಸಾಂಕೇತಿಕವಾಗಿ ಯುವ ಮತದಾರರಿಗೆ ಎಫಿಕ್ ಕಾರ್ಡ್ ವಿತರಿಸಲಾುತು. ಬಿಆರ್‌ಸಿ ಎ.ಎಸ್.ಪದ್ಮಣ್ಣವರ ಸ್ವಾಗತಿಸಿದರು. ಬಿಆರ್‌ಪಿ ಸುಮಾ ಮಡಿವಾಳರ ನಿರೂಪಿಸಿದರು.