4 ಜನರ ಬಾಳಿಗೆ ಬೆಳಕಾದ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿ

| Published : Nov 15 2025, 02:15 AM IST

4 ಜನರ ಬಾಳಿಗೆ ಬೆಳಕಾದ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಮಹತ್ವದ ಘಟನೆಯು ನ. 13ರಂದು ರಾತ್ರಿ ಹುಲಕೋಟಿಯ ರೂರಲ್ ಮೆಡಿಕಲ್ ಸಂಸ್ಥೆಯ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಜರುಗಿತು. ಬೆಟಗೇರಿಯ ನಿವಾಸಿಯಾದ ನಾರಾಯಣ ವನ್ನಾಲ ಅವರ ಮೆದುಳು ನಿಷ್ಕ್ರಿಯಗೊಂಡ ನಂತರ, ಕುಟುಂಬದವರು ಅಂಗಾಂಗ ದಾನಕ್ಕೆ ಮುಂದಾದರು.

ವಿಶೇಷ ವರದಿ

ಗದಗ: ಮೆದುಳು ನಿಷ್ಕ್ರಿಯಗೊಂಡ(ಬ್ರೈನ್ ಡೆಡ್) ಸ್ಥಿತಿಯಲ್ಲಿದ್ದ ಬೆಟಗೇರಿಯ ಯುವಕ ನಾರಾಯಣ ವನ್ನಾಲ ಅವರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಅವರ ಕುಟುಂಬಸ್ಥರು ಮಾನವೀಯತೆ ಮೆರೆದಿದ್ದಾರೆ. ದುಃಖದ ನಡುವೆಯೂ ಈ ಉದಾತ್ತ ನಿರ್ಧಾರ ಕೈಗೊಂಡ ವನ್ನಾಲ ಕುಟುಂಬದವರು, ನಾಲ್ಕು ವ್ಯಕ್ತಿಗಳಿಗೆ ಹೊಸ ಜೀವನ ನೀಡಿದ ಘಟನೆ ನಡೆದಿದ್ದು, ಜಿಲ್ಲೆಯಲ್ಲಿ ಹೊಸ ಇತಿಹಾಸವಾಗಿ ನಿರ್ಮಾಣವಾಯಿತು.

ಈ ಮಹತ್ವದ ಘಟನೆಯು ನ. 13ರಂದು ರಾತ್ರಿ ಹುಲಕೋಟಿಯ ರೂರಲ್ ಮೆಡಿಕಲ್ ಸಂಸ್ಥೆಯ ಕೆ.ಎಚ್. ಪಾಟೀಲ ಆಸ್ಪತ್ರೆ ಹಾಗೂ ಸಂಶೋಧನಾ ಸಂಸ್ಥೆಯಲ್ಲಿ ಜರುಗಿತು. ಬೆಟಗೇರಿಯ ನಿವಾಸಿಯಾದ ನಾರಾಯಣ ವನ್ನಾಲ ಅವರ ಮೆದುಳು ನಿಷ್ಕ್ರಿಯಗೊಂಡ ನಂತರ, ಕುಟುಂಬದವರು ಅಂಗಾಂಗ ದಾನಕ್ಕೆ ಮುಂದಾದರು.

ನಾಲ್ಕು ರೋಗಿಗಳಿಗೆ ಮರುಜೀವ: ವನ್ನಾಲ ಕುಟುಂಬದವರ ನಿರ್ಣಯದಂತೆ ನಾರಾಯಣ ಅವರ 2 ಕಿಡ್ನಿಗಳು ಹಾಗೂ 2 ಕಣ್ಣುಗಳನ್ನು ದಾನ ಮಾಡಲಾಯಿತು. ಈ ಅಂಗಾಂಗಗಳನ್ನು ಪೊಲೀಸ್ ಇಲಾಖೆಯ ಸಹಾಯದೊಂದಿಗೆ ಜೀರೋ ಟ್ರಾಫಿಕ್ ಮೂಲಕ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಯಿತು. ಒಂದು ಕಿಡ್ನಿಯನ್ನು ಎಸ್‌ಡಿಎಂ ಆಸ್ಪತ್ರೆ ಧಾರವಾಡಕ್ಕೆ ಇನ್ನೊಂದು ಕಿಡ್ನಿಯನ್ನು ಕೆ.ಎಚ್. ಪಾಟೀಲ ಆಸ್ಪತ್ರೆ ಹುಲಕೋಟಿ (ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗೆ). ಎರಡು ಕಣ್ಣುಗಳು ಡಾ. ಎಂ.ಎಂ. ಜೋಶಿ ಆಸ್ಪತ್ರೆ ಹುಬ್ಬಳ್ಳಿಗೆ ತಲುಪಿಸಿದ್ದು ನಾಲ್ಕು ರೋಗಿಗಳಿಗೆ ಮರುಜೀವ ದೊರೆತಂತಾಗಿದೆ.

ಗ್ರೀನ್ ಕಾರಿಡಾರ್ ಮೂಲಕ ಕಿಡ್ನಿ ರವಾನೆ: ಅಂಗಾಂಗ ದಾನದ ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಎಸ್ಪಿ ರೋಹನ ಜಗದೀಶ ಅವರು, ವನ್ನಾಲ ಕುಟುಂಬದವರಿಗೆ ಸಾಂತ್ವನ ಹೇಳಿ, ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ಒಂದು ಕಿಡ್ನಿಯನ್ನು ಶೀಘ್ರವಾಗಿ ಮತ್ತು ಸುರಕ್ಷಿತವಾಗಿ ಸಾಗಿಸಲು ಗ್ರೀನ್ ಕಾರಿಡಾರ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟರು. ಈ ಮೂಲಕ ಅಂಗಾಂಗ ಸಾಗಾಟ ಯಶಸ್ವಿಯಾಗಿ ನಡೆಯಲು ನೆರವಾಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಮೆಚ್ಚುಗೆಗೆ ಪಾತ್ರವಾಯಿತು.

ಬೆಟಗೇರಿಯ ಕುರುಹಿನಶೆಟ್ಟಿ ಸಮಾಜದ ನೀಲಕಂಠೇಶ್ವರ ಮಠದ ನೀಲಕಂಠ ಪಟ್ಟದಾರ್ಯ ಸ್ವಾಮಿಗಳು ಆಸ್ಪತ್ರೆಗೆ ಆಗಮಿಸಿ, ಮರಣದ ನಂತರ ಅಂಗಾಂಗ ದಾನ ಮಾಡಿ ಮತ್ತೊಬ್ಬರಿಗೆ ಬದುಕು ನೀಡಿದ್ದು, ಇದು ಇತರರಿಗೆ ಮಾದರಿಯಾದ ಕಾರ್ಯ ಎಂದು ಹೇಳುವ ಮೂಲಕ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಹುಲಕೋಟಿ ರೂರಲ್ ಮೆಡಿಕಲ್ ಸಂಸ್ಥೆಯ ಚೇರಮನ್ ಡಾ. ಎಸ್.ಆರ್. ನಾಗನೂರ ಮಾತನಾಡಿ, ನಾರಾಯಣ ವನ್ನಾಲ ಅವರು ನಾಲ್ಕು ಜನರಿಗೆ ಬದುಕು ನೀಡಿದ್ದಾರೆ ಎಂದ ಅವರು, ಕುಟುಂಬದವರ ಉದಾತ್ತ ನಿರ್ಧಾರವನ್ನು ಅಭಿನಂದಿಸಿದರು. ಕೊನೆಯಲ್ಲಿ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳು ನಾರಾಯಣ ವನ್ನಾಲ ಅವರ ಪಾರ್ಥಿವ ಶರೀರಕ್ಕೆ ಪುಷ್ಪನಮನ ಸಲ್ಲಿಸಿ, ಅಂತಿಮ ಗೌರವ ಸಲ್ಲಿಸಿದರು, ನಂತರ ಶರೀರವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು.

ವೈದ್ಯಕೀಯ ತಂಡಕ್ಕೆ ಅಭಿನಂದನೆ

ಕೆ.ಎಚ್. ಪಾಟೀಲ ಆಸ್ಪತ್ರೆಯ ಕಿಡ್ನಿ ಟ್ರಾನ್ಸ್‌ಪ್ಲಾಂಟ್ ವಿಭಾಗದ ಮುಖ್ಯ ವೈದ್ಯರಾದ ಡಾ. ಅವಿನಾಶ ಓದುಗೌಡರ ನೇತೃತ್ವದ ವೈದ್ಯರ ತಂಡವು ಈ ಸಂಕೀರ್ಣ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿತು.

ಡಾ. ಭುವನೇಶ ಆರಾಧ್ಯ, ಡಾ. ಪವನ ಕೋಳಿವಾಡ, ಡಾ. ದೀಪಕ ಕುರಹಟ್ಟಿ, ಡಾ. ನಿಯಾಜ್, ಡಾ. ವಿನಾಯಕ ಪಂಚಗಾರ ಸೇರಿದಂತೆ ಸಂಪೂರ್ಣ ವೈದ್ಯಕೀಯ ತಂಡದ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.