ಬಳ್ಳಾರಿ: ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಎಲ್ಲ ರಂಗದಲ್ಲಿಯೂ ಸಾಧನೆಯ ಮುನ್ನೆಡೆಯಿಂದ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾಳೆ. ಇದು ಸಮಾಜ ಪ್ರಗತಿಯ ಸ್ಪಷ್ಟ ಸೂಚಕವಾಗಿದ್ದು, ಮಹಿಳೆಯರು ಆತ್ಮವಿಶ್ವಾಸ, ಧೈರ್ಯ ಮತ್ತು ತಾಳ್ಮೆಯಿಂದ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿದೆ ಎಂದು ಮೋಕಾ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಿ. ಭಾರತಿ ಅಭಿಪ್ರಾಯಪಟ್ಟರು.

ತಾಲೂಕಿನ ಮೋಕಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸೆ ಕೋಶ ಮತ್ತು ಮಹಿಳಾ ಸಬಲೀಕರಣ ಕೋಶದಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಇಂದು ಮಹಿಳೆಯರ ಮುಂದೆ ಅನೇಕ‌ ಸವಾಲುಗಳಿವೆ. ಎಲ್ಲವುಗಳನ್ನು ನಿಭಾಯಿಸುವ ಸಹನಾ ಶಕ್ತಿಯೂ ಮಹಿಳೆಗಿದೆ. ಉದ್ಯೋಗದಲ್ಲಿ ಸಮಾನ ಅವಕಾಶಗಳು, ವೇತನದಲ್ಲಿ ಸಮಾನತೆ, ಸುರಕ್ಷತೆ ಮತ್ತು ಸಾಮಾಜಿಕ ಮನೋಭಾವದ ಬದಲಾವಣೆ ಇನ್ನೂ ಸಂಪೂರ್ಣ ಬದಲಾಗಿಲ್ಲ. ಈ ಸವಾಲುಗಳನ್ನು ನಿವಾರಿಸಿದಾಗ ಮಹಿಳೆಯರ ಪೂರ್ಣ ಪ್ರಮಾಣದ ಸಾಮರ್ಥ್ಯ ಸಮಾಜಕ್ಕೆ ಲಭಿಸಲಿದೆ ಎಂದರಲ್ಲದೆ, ಮಾಡುವ ಕಾರ್ಯಗಳಲ್ಲಿ ಶ್ರೇಷ್ಠ ಕನಿಷ್ಠ ಎಂದೆಣಿಸದೆ ಸಹಭಾಗಿತ್ವದಿಂದ ಮಹಿಳೆಯರು ಸದೃಢ ಸಮಾಜವನ್ನು ಕಟ್ಟಬೇಕು ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮೋಕಾದ ಘನ ಮತ್ತು ದ್ರವ ತ್ಯಾಜ್ಯ ವಾಹನ ಚಾಲಕಿ ಕೆ.ಎ. ಕವಿತಾ ಅವರು ಮಾತನಾಡಿ, ಇಂದು ಮಹಿಳೆಯರು ಸಬಲರಾಗುತ್ತಿದ್ದಾರೆ. ತಮ್ಮ ಇಚ್ಛಾಶಕ್ತಿಯಿಂದ ಆರ್ಥಿಕ ಮತ್ತು ಸಾಮಾಜಿಕವಾಗಿಯೂ ಕುಟುಂಬವನ್ನು ಮುನ್ನೆಡೆಸುತ್ತಿದ್ದಾಳೆ. ಆತ್ಮಸ್ಥೆರ್ಯದೊಂದಿಗೆ ಹೆಜ್ಜೆ ಹಾಕಿದಾಗ ಖಂಡಿತ ಯಶಸ್ಸು ದೊರೆಯುತ್ತದೆ. ಯಾವ ಕೆಲಸವಾದರೂ ಶ್ರದ್ಧೆ ಪ್ರಾಮಾಣಿಕತೆಯಿಂದ ಮಾಡುವ ಗುಣ ಮಹಿಳೆಯರಲ್ಲಿದೆ ಎಂದು ಹೇಳಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿ. ಸರೋಜಾ ಅವರು, ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಅನನ್ಯವಾಗಿದೆ. ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಹಿಳೆಯ ಶ್ರಮ ಮತ್ತು ತ್ಯಾಗವನ್ನು ಸಮಾಜ ಗೌರವಿಸಬೇಕು. ಪ್ರಾತಿನಿಧಿಕವಾಗಿ ಮಹಿಳೆಯರು ಪಾಲ್ಗೊಂಡರೆ ಸಾಲದು ಒಳಗೊಳ್ಳುವಿಕೆಯ ಮೂಲಕ ಉನ್ನತಿ ಸಾಧಿಸಬೇಕು. ಮಹಿಳೆಯರಿಗೆ ಇಂದು ಎಲ್ಲ ಕ್ಷೇತ್ರದಲ್ಲೂ ಪ್ರಾಧಾನ್ಯತೆ ಸಿಗುತ್ತಿದೆ. ಹೆಣ್ಣುಮಕ್ಕಳು ಮತ್ತಷ್ಟು ಉನ್ನತ ಶಿಕ್ಷಣ ಪಡೆದು ತಮಗಿಷ್ಟವಾದ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಡಾ. ಬಿ.ಜಿ. ಕಲಾವತಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮಹಿಳೆಯರು ಕುಟುಂಬ ಮತ್ತು ಸಮುದಾಯದ ಜವಾಬ್ದಾರಿಗಳನ್ನು ಬದ್ಧತೆಯಿಂದ ನಿರ್ವಹಿಸುವ ಮೂಲಕ ತನ್ನ ಅಸ್ತಿತ್ವದ ಅಸ್ಮಿತೆಯನ್ನು ಕಂಡುಕೊಂಡಿದ್ದಾಳೆ. ಮಹಿಳಾ ದಿನಾಚರಣೆಯು ಮಹಿಳೆಯರ ಹಕ್ಕುಗಳು, ಸಮಾನತೆ ಮತ್ತು ವಿಮೋಚನೆಗಾಗಿ ಮಹಿಳೆಯರ ಹೋರಾಟ, ಲಿಂಗ ಸಮಾನತೆ, ಮಹಿಳೆಯರ ಮೇಲಿನ ಹಿಂಸೆ ಮತ್ತು ದೌರ್ಜನ್ಯದಂತಹ ವಿಷಯಗಳಿಗೆ ಗಮನ ನೀಡುವುದಲ್ಲದೆ ಪುರುಷ -ಸ್ತ್ರೀ ಸಮಾನತೆಯ ಜಗತ್ತನ್ನು ರೂಪಿಸುವುದಾಗಿದೆ. ಪ್ರತಿಯೊಬ್ಬ ಮಹಿಳೆಯೂ ತನ್ನ ಮೌಲ್ಯವನ್ನು ಅರಿತುಕೊಂಡು, ತನ್ನ ಕನಸುಗಳನ್ನು ನನಸಾಗಿಸಿಕೊಳ್ಳುವ ಅವಲೋಕನವಾಗಿದೆ ಎಂದು ತಿಳಿಸಿದರು.


ಕನ್ನಡ ಅಧ್ಯಾಪಕ ಡಾ. ಸೋಮಶೇಖರ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ, ಕವಿತಾ ಕೆ.ಎ.( ಘನ ಮತ್ತು ದ್ರವ ತ್ಯಾಜ್ಯ ವಾಹನ ಚಾಲಕಿ ) ಡಾ. ಸಿ. ಭಾರತಿ (ಆಡಳಿತ ವೈದ್ಯಾಧಿಕಾರಿ, ಸಮುದಾಯ ಆರೋಗ್ಯ ಕೇಂದ್ರ) ಉಮೇರಾ ವಿ.( ಕಿರಿಯ ಅಭಿಯಂತರರು, ಕೆ.ಪಿ.ಟಿ.ಸಿ.ಎಲ್.) ಹೊಳಗುಂದಿ ಶ್ರುತಿ (ಮಹಿಳಾ ಪೊಲೀಸ್ ಪೇದೆ) ಪಾರ್ವತಿ ( ಅಧ್ಯಕ್ಷರು, ಮುದಿ ಮಲ್ಲೇಶ್ವರ ಸಂಜೀವಿನಿ, ಗ್ರಾಮ‌ಪಂಚಾಯಿತಿ, ಮೋಕಾ) ಲಲಿತಾ (ಗ್ರಂಥ ಪಾಲಕರು) ಅವರನ್ನು ಕಾಲೇಜಿನಿಂದ ಸನ್ಮಾನಿಸಲಾಯಿತು.

ವಿದ್ಯಾರ್ಥಿನಿಯರಾದ ಶ್ವೇತಾ, ಪೂಜಿತಾ ಹಾಗೂ ಸಂಗಡಿಗರು ನಿರ್ವಹಿಸಿದರು. ಕಾಲೇಜು ಅಧ್ಯಾಪಕರು ಸಿಬ್ಬಂದಿ ಉಪಸ್ಥಿತರಿದ್ದರು.