ರೋಣ: ವಿದ್ಯಾರ್ಥಿಗಳ ದಿಶೆಯಿಂದಲೇ ಸತತ ಪರಿಶ್ರಮಿಗಳಾದಲ್ಲಿ ಭವಿಷ್ಯದ ಜೀವನ ಉಜ್ವಲಗೊಳ್ಳುವುದರ ಜತೆಗೆ ಗುರಿ, ಸಾಧನೆ ಸುಲಭವಾಗುವುದು ಎಂದು ಬಿಇಒ ಅರ್ಜುನ ಕಾಂಬೋಗಿ ತಿಳಿಸಿದರು.

ಇತ್ತೀಚೆಗೆ ತಾಲೂಕಿನ ಚಿಕ್ಕಮಣ್ಣೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2025- 26ನೇ ಸಾಲಿನ ಶಾಲಾ ವಾರ್ಷಿಕೋತ್ಸವ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

ಸುಂದರ ಜೀವನಕ್ಕೆ ಶಿಕ್ಷಣ ಬುನಾದಿಯಾಗಿದ್ದು, ಆಸಕ್ತಿ,‌ ಶ್ರದ್ಧೆಯಿಂದ ವಿದ್ಯೆ ಸಂಪಾದನೆಯಲ್ಲಿ ವಿದ್ಯಾರ್ಥಿಗಳು ತೊಡಗಬೇಕು. ಕಲಿಸಿದ ಗುರುಗಳು, ಶಾಲೆಗೆ ಕೀರ್ತಿ ತರುವಲ್ಲಿ ಶ್ರಮಿಸಬೇಕು. ಮಕ್ಕಳ‌ ಸರ್ವಾಂಗೀಣ ಪ್ರಗತಿಗೆ ಸರ್ಕಾರ ಶಿಕ್ಷಣ ಇಲಾಖೆಗೆ ಅನೇಕ ಯೋಜನೆಗಳನ್ನು ಕಲ್ಪಿಸಿದೆ. ಪ್ರತಿಯೊಬ್ಬರಿಗೂ ಶಿಕ್ಷಣ ಲಭಿಸುವಂತಾಗಬೇಕು. ಶಿಕ್ಷಣದಿಂದ ಯಾರೊಬ್ಬರು ವಂಚಿತರಾಗಬಾರದು ಎಂದರು.

ಅಧ್ಯಕ್ಷತೆಯನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ ಉಸ್ತವಾರಿ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎನ್.ಆರ್. ಬೇವಿನಮರದ ಪ್ರಾಸ್ತಾವಿಕವಾಗಿ ಮಾತನಾಡಿದರು. 2025- 26ನೇ ಸಾಲಿನಲ್ಲಿ ಶಾಲೆಗೆ ವಿವಿಧ ಸಾಮಗ್ರಿಗಳನ್ನು ದೇಣಿಗೆ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

2024- 25ನೇ ಸಾಲಿನಲ್ಲಿ ಏಳನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಎಸ್.ಜೆ. ಹಿರೇಮಠ, ರುದ್ರಗೌಡ ಸೋಮನಗೌಡ್ರ, ಬಸನಗೌಡ ವಿರುಪಾಕ್ಷಗೌಡ ಪಾಟೀಲ, ಎಂ.ಬಿ. ಮುಳ್ಳೂರ, ಯು.ಎಂ. ಡಂಬಳ, ಎಸ್.ಎಚ್. ಗುಮ್ಮಗೋಳ, ವೈ.ಎಸ್. ಕರೇಕುಲದ ಎಸ್.ಬಿ. ಚಕ್ರಸಾಲಿ ಮುಂತಾದವರು ಉಪಸ್ಥಿತರಿದ್ದರು. ಎನ್.ಪಿ. ಸತ್ರೋಜಿ ವಂದಿಸಿದರು. ಎಸ್.ಜಿ. ಹೂಗಾರ ನಿರೂಪಿಸಿದರು.