ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆಯಿಲ್ಲದ ಬಜೆಟ್, ನಿರೀಕ್ಷೆ ಹುಸಿ

| Published : Feb 17 2024, 01:15 AM IST

ಸಾರಾಂಶ

ಹಾವೇರಿ ಜಿಲ್ಲೆಯಾಗಿ 26 ವರ್ಷಗಳೇ ಗತಿಸಿದರೂ ಇನ್ನೂ ಜಿಲ್ಲಾ ಕೇಂದ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಮೂಲಸೌಲಭ್ಯಗಳ ಕೊರತೆ ಎಲ್ಲ ಕ್ಷೇತ್ರಗಳಲ್ಲಿ ಎದ್ದು ಕಾಣುತ್ತಿದೆ

ಹಾವೇರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ದಾಖಲೆಯ 15ನೇ ಬಜೆಟ್‌ನಲ್ಲಿ ಜಿಲ್ಲೆಯ ಪಾಲಿಗೆ ನಿರಾಸೆ ಮೂಡಿಸಿದೆ. ಹಳೆಯ ಘೋಷಣೆಗಳನ್ನೇ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದನ್ನು ಬಿಟ್ಟರೆ ಜಿಲ್ಲೆಗೆ ವಿಶೇಷವಾದ ಯಾವ ಕೊಡುಗೆಯೂ ಸಿಕ್ಕಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕೆಲಸಕ್ಕೆ ಭರಪೂರ ಅನುದಾನ ಕಂಡಿದ್ದ ಹಾವೇರಿ ಜಿಲ್ಲೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ವಿವಿಧ ನಿರೀಕ್ಷೆಗಳು ಹುಸಿಯಾಗಿವೆ.

ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ರಾಣೆಬೆನ್ನೂರಿನಲ್ಲಿ ₹112ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 222 ಎಕರೆ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸುವುದು ಎಂದಿದ್ದಾರೆ. ಈಗಾಗಲೇ ಮೆಗಾ ಮಾರುಕಟ್ಟೆ ಹಿಂದಿನ ಸರ್ಕಾರದ ಅವಧಿಯಲ್ಲೇ ಪೂರ್ಣಗೊಂಡಿದೆ. ಅದರಲ್ಲೇ ಒಣಮೆಣಸಿಕಾಯಿ ಮಾರುಕಟ್ಟೆ ಆರಂಭಿಸುವುದಾಗಿ ಹೇಳಿದ್ದಾರೆ.

ಈಗಾಗಲೇ ಹಾವೇರಿ ವಿಜ್ಞಾನ ಕೇಂದ್ರದ ಕಾಮಗಾರಿ ಮುಗಿದಿದ್ದು, ಸಿಎಂ ಅವರೇ ಫೆ.18ರಂದು ಉದ್ಘಾಟಿಸಲಿದ್ದಾರೆ. ತ್ರಿಪದಿಗಳ ಮೂಲಕ ಜೀವನಸಾರ ಹೇಳಿದ ವಚನಕಾರ ಸರ್ವಜ್ಞ ಸ್ಮಾರಕದ ಅಭಿವೃದ್ಧಿಗೆ ಕ್ರಮ ಎಂದಿದ್ದಾರೆ. ಆದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿ ಅನುದಾನವೂ ಬಿಡುಗಡೆಯಾಗಿತ್ತು. ಅದಕ್ಕೂ ಈ ಬಜೆಟ್‌ನಲ್ಲಿ ಹೊಸ ಅನುದಾನ ಘೋಷಿಸಿಲ್ಲ, ಹೊಸದಾಗಿ ರಾಣೆಬೆನ್ನೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೆಜ್ ನಿರ್ಮಾಣದ ಬಗ್ಗೆ ಮಾತ್ರ ಪ್ರಸ್ತಾಪವಾಗಿರುವುದನ್ನು ಬಿಟ್ಟರೆ ಉಳಿದಂತೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಯಾವುದೇ ಯೋಜನೆ, ಅನುದಾನ ಘೋಷಣೆ ಮಾಡಿಲ್ಲ.

ನಿರೀಕ್ಷೆಗಳೆಲ್ಲವೂ ಹುಸಿ:

ಹಾವೇರಿ ಜಿಲ್ಲೆಯಾಗಿ 26 ವರ್ಷಗಳೇ ಗತಿಸಿದರೂ ಇನ್ನೂ ಜಿಲ್ಲಾ ಕೇಂದ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಮೂಲಸೌಲಭ್ಯಗಳ ಕೊರತೆ ಎಲ್ಲ ಕ್ಷೇತ್ರಗಳಲ್ಲಿ ಎದ್ದು ಕಾಣುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾದ ಯೋಜನೆ ಘೋಷಿಸಿ, ಅದಕ್ಕೆ ಅಗತ್ಯವಿರುವ ಅನುದಾನ ಘೋಷಿಸುವ ನಿರೀಕ್ಷೆ ಎಲ್ಲರಲ್ಲಿತ್ತು. ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಈಗಿನ ಮುಖ್ಯ ಬೇಡಿಕೆಗಳಲ್ಲಿ ಒಂದಾಗಿದೆ. ಜಿಲ್ಲೆಯಲ್ಲಿ ರೈತರು ಹೆಚ್ಚಿದ್ದು, ಸಮರ್ಪಕವಾಗಿ ಬೆಳೆ ಸಾಲ ಸಿಗುತ್ತಿಲ್ಲ. ಬೇರೆ ಜಿಲ್ಲೆಗಳಲ್ಲಿ ರೈತರಿಗೆ ಗರಿಷ್ಠ ಪ್ರಮಾಣದಲ್ಲಿ ಶೂನ್ಯ ಬಡ್ಡಿ ದರದ ಬೆಳೆ ಸಾಲ ಸಿಗುತ್ತಿದೆ. ಅದಕ್ಕಾಗಿ ಪ್ರತ್ಯೇಕ ಡಿಸಿಸಿ ಬ್ಯಾಂಕ್ ಸ್ಥಾಪನೆ ಬೇಡಿಕೆಯಿತ್ತು. ಆದರೆ, ಈ ನಿರೀಕ್ಷೆ ಹುಸಿಯಾಗಿದೆ.

ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಿನ್ನೆಲೆ ರೈತರು ಬೆಳೆದಂತೆ ಉತ್ಪನ್ನಗಳಿಗೆ ಪೂರಕವಾಗುವಂತಹ ಕೈಗಾರಿಕೆ ಸ್ಥಾಪಿಸಬೇಕು ಎಂಬುದು ರೈತ ಮುಖಂಡರ ಒತ್ತಾಸೆಯಾಗಿದೆ. ಕೃಷಿ ಪೂರಕ ಕೈಗಾರಿಕೆ ಸ್ಥಾಪಿತಗೊಂಡರೆ ರೈತರು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ, ಸ್ಥಳೀಯವಾಗಿ ಮಾರುಕಟ್ಟೆ ಸೌಲಭ್ಯ ಸಿಗಲಿದೆ. ಜತೆಗೆ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗುವಂತೆ ಬಹೃತ್ ಕೈಗಾರಿಕೆಗಳ ಸ್ಥಾಪನೆಗೂ ಒತ್ತು ನೀಡಿ ಕೈಗಾರಿಕಾ ಹಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂಬುದು ಒತ್ತಾಸೆಯಾಗಿತ್ತು. ಆದರೆ, ಜಿಲ್ಲೆಯ ಜನರ ಯಾವ ಬೇಡಿಕೆಯೂ ಈಡೇರಿಲ್ಲ.

ಬಿಜೆಪಿ ಸರ್ಕಾರದ ಕೊನೆಯ ಬಜೆಟ್‌ನಲ್ಲಿ ಹತ್ತಾರು ಯೋಜನೆ ಘೋಷಿಸಿತ್ತು. ಈಗ ಅವು ಈಡೇರುವುದು ಸಹ ಅನುಮಾನ. ಹೀಗಾಗಿ ಈ ಸರ್ಕಾರದ ಎರಡನೇ ಬಜೆಟ್ ಆಗಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಕೂಡ ಹೆಚ್ಚಿತ್ತು. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಒತ್ತು ಸಿಗಬೇಕಿತ್ತು. ನೂತನ ತಾಲೂಕು ರಟ್ಟೀಹಳ್ಳಿಯ ಅಭಿವೃದ್ಧಿ, ಸರ್ವಜ್ಞ ಪ್ರಾಧಿಕಾರಕ್ಕೆ ಅನುದಾನ, ಜಿಲ್ಲಾ ಕೇಂದ್ರವಾದ ಹಾವೇರಿ ನಗರಕ್ಕೆ ಇದುವರೆಗೂ ಸಮರ್ಪಕ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ. ತುಂಗಭದ್ರಾ ನದಿಗೆ ಬ್ಯಾರೇಜ್ ನಿರ್ಮಾಣ, ಹಾವೇರಿ ನಗರದಲ್ಲಿ ರಿಂಗ್ ರೋಡ್ ನಿರ್ಮಾಣ ಜತೆಗೆ ಒಳಚರಂಡಿ ವ್ಯವಸ್ಥೆಯೂ ಆಗಿಲ್ಲ. ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಠಿಯಿಂದ ಯಾವ ಯೋಜನೆಗಳೂ ಬಜೆಟ್‌ನಲ್ಲಿ ಘೋಷಣೆಯಾಗದಿರುವುದಕ್ಕೆ ಅನೇಕರು ನಿರಾಸೆ ವ್ಯಕ್ತಪಡಿಸಿದ್ದಾರೆ.

ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು: ರಾಣೆಬೆನ್ನೂರಿನಲ್ಲಿ ₹112ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ 222 ಎಕರೆ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭಿಸುವುದು, ತ್ರಿಪದಿಗಳ ಮೂಲಕ ಜೀವನಸಾರ ಹೇಳಿದ ವಚನಕಾರ ಸರ್ವಜ್ಞ ಸ್ಮಾರಕದ ಅಭಿವೃದ್ಧಿಗೆ ಕ್ರಮ, ಹಾವೇರಿ ವಿಜ್ಞಾನ ಕೇಂದ್ರದ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸುವುದು ಹಾಗೂ ರಾಣೆಬೆನ್ನೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೋಲ್ಡ್ ಸ್ಟೋರೆಜ್ ನಿರ್ಮಾಣ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರಲ್ಲಿ ₹ 112 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ 222 ಎಕರೆ ಮೆಗಾ ಮಾರುಕಟ್ಟೆ ಪ್ರಾಂಗಣದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭ, ಸರ್ವಜ್ಞನ ಸ್ಮಾರಕವನ್ನು ಹಿರೇಕೆರೂರು ತಾಲೂಕಿನಲ್ಲಿ ಅಭಿವೃದ್ಧಿಗೆ ಕ್ರಮ ಸೇರಿದಂತೆ ರೈತರ ಹಿತರಕ್ಷಣೆ ದೃಷ್ಟಿಯಿಂದ ಎಪಿಎಂಸಿ ಬಲಪಡಿಸಲು ಹಲವು ಯೋಜನೆ, ಕಬ್ಬು ಬೆಳೆಗಾರರ ಹಿತರಕ್ಷಣೆಗೆ ಎಪಿಎಂಸಿಗಳಿಂದ ವೇ ಬ್ರಿಡ್ಜ್ ಸ್ಥಾಪನೆಗೆ ನಿರ್ಧಾರ ಘೋಷಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ.