ಹಳೇ ಸೊರಬದಲ್ಲಿ ಮನರಂಜಿಸಿದ ಹೋರಿ ಬೆದರಿಸುವ ಹಬ್ಬ

| Published : Jan 20 2024, 02:03 AM IST

ಸಾರಾಂಶ

ದೀಪಾವಳಿ ಕಾರ್ತಿಕ ಮಾಸದ ಸುಗ್ಗಿ ದಿನಗಳಲ್ಲಿ ಹೋರಿ ಬೆದರಿಸುವ ಹಬ್ಬ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಹತ್ವ ಪಡೆದಿದೆ. ಅಂತೆಯೇ, ಸೊರಬ ತಾಲೂಕಿನ ಹಳೇ ಸೊರಬ ಗ್ರಾಮದಲ್ಲಿ ಶ್ರೀ ರಾಮೇಶ್ವರ ಗ್ರಾಮಾಭಿವೃದ್ಧಿ ಸೇವಾ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಹೋರಿ ಬೆದರಿಸುವ ಹಬ್ಬದಲ್ಲಿ 200ಕ್ಕೂ ಅಧಿಕ ಹೋರಿಗಳ ನಾಗಾಲೋಟ ಜನರನ್ನು ರಂಜಿಸಿತು.

ಕನ್ನಡಪ್ರಭ ವಾರ್ತೆ ಸೊರಬ

ತಾಲೂಕಿನ ಹಳೇ ಸೊರಬ ಗ್ರಾಮದಲ್ಲಿ ಶ್ರೀ ರಾಮೇಶ್ವರ ಗ್ರಾಮಾಭಿವೃದ್ಧಿ ಸೇವಾ ಸಮಿತಿ ವತಿಯಿಂದ ವಿಶೇಷ ದೀಪಾವಳಿ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ರೈತರ ಜನಪದ ಕ್ರೀಡೆ ಹೋರಿ ಬೆದರಿಸುವ ಹಬ್ಬವನ್ನು ಸಂಭ್ರಮದಿಂದ ನಡೆಯಿತು. ದೀಪಾವಳಿ ಕಾರ್ತಿಕ ಮಾಸದ ಸುಗ್ಗಿ ದಿನಗಳಲ್ಲಿ ಹೋರಿ ಬೆದರಿಸುವ ಹಬ್ಬ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಮಹತ್ವ ಪಡೆದಿದೆ. ಕಾರ್ತಿಕ ಮಾಸದ ನಂತರದ ದಿನಗಳಲ್ಲಿ ತಮ್ಮ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಗ್ರಾಮೀಣರು ಇತ್ತೀಚಿನ ವರ್ಷಗಳಲ್ಲಿ ಜನವರಿ ತಿಂಗಳಿನ ಪುಷ್ಯ ಮಾಸದಲ್ಲಿಯೂ ಸಹ ಹೋರಿ ಬೆದರಿಸುವ ಹಬ್ಬ ಹಮ್ಮಿಕೊಂಡು ರಂಜನೆ ಪಡೆಯುವುದು ವಾಡಿಕೆಯಾಗಿದೆ.

ಹಳೇ ಸೊರಬದಲ್ಲಿ ಹಮ್ಮಿಕೊಂಡಿದ್ದ ಹೋರಿ ಹಬ್ಬದ ಅಖಾಡದಲ್ಲಿ ಹೋರಿಗಳು ಓಡುವುದನ್ನು ನೋಡಲು ನೆರೆಯ ಗ್ರಾಮಗಳನ್ನು ಸೇರಿದಂತೆ ನೆರೆಯ ತಾಲೂಕು ಹಾಗೂ ಜಿಲ್ಲೆಗಳಿಂದ ಹೋರಿ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಹೋರಿಗಳು ಓಡುವ ದೃಶ್ಯ ಮೈನವಿರೇಳಿಸಿತು. ಹೋರಿಗಳ ಮಾಲೀಕರು ತಮ್ಮ ನೆಚ್ಚಿನ ಹೋರಿಗಳನ್ನು ಬಣ್ಣ ಬಣ್ಣದ ಜೂಲ, ಬಲೂನು, ಹೂವು, ಕೊಬ್ಬರಿ ಹಾರ ಕಟ್ಟಿ ಶೃಂಗರಿಸಿದ್ದರು.

ಅಖಾಡದಲ್ಲಿ ಚಂದ್ರಗುತ್ತಿಯ ಚಂದ್ರಗುತ್ಯಮ್ಮ, ಚಿಕ್ಕಾವಲಿ ನಾಗ, ಹಾರ್ನಳ್ಳಿ ಸೂರ್ಯಪುತ್ರ, ಮರೂರು ತಾರಕಾಸುರ, ಹರಿಗಿ ಗ್ಯಾಂಗ್ ಸ್ಟಾರ್, ಕರ್ನಾಟಕ ನಂದಿ, ಹುಣಸೆಕಟ್ಟೆ ಜೈಹನುಮ, ಸಾರೇಕೊಪ್ಪದ ಸರದಾರ, ಸಾರೆಕೊಪ್ಪದ ಕಿಂಗ್, ಶಿಗ್ಗದ ಸಾರಂಗ, ಕುಪ್ಪಗಡ್ಡೆ ಯಜಮಾನ, ಓಟೂರು ಗೂಳಿ, ಓಟೂರು ಮಲೆನಾಡು ಮಹಾರಾಜ, ಓಟೂರು ರಾವಣ ಸೇರಿದಂತೆ ವಿವಿಧ ಹೆಸರಿನ ಸುಮಾರು 200ಕ್ಕೂ ಅಧಿಕ ಹೋರಿಗಳು ಓಡಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಹೋರಿ ಹಬ್ಬದ ಅಭಿಮಾನಿಗಳ ಕಣ್ಮನ ಸೆಳೆದವು.

ಹೋರಿ ಹಬ್ಬದ ಆಯೋಜಿಸಿದ್ದ ಶ್ರೀ ರಾಮೇಶ್ವರ ಗ್ರಾಮಾಭಿವೃದ್ಧಿ ಸೇವಾ ಸಮಿತಿಯವರು ಅಖಾಡದಲ್ಲಿ ಎರಡು ಬದಿಯಲ್ಲಿ ಸುರಕ್ಷತಾ ಕ್ರಮ ಕೈಗೊಂಡು, ಕ್ರಮವಾಗಿ ಒಂದೊಂದೇ ಹೋರಿಗಳನ್ನು ಓಡಿಸಿದರು. ಇದರಿಂದ ಯಾವುದೇ ಅಪಾಯಗಳು ಸಂಭವಿಸಲಿಲ್ಲ. ಆಯೋಜಕರು ಉತ್ತಮ ರೀತಿಯಲ್ಲಿ ಸುರಕ್ಷತೆಗೆ ಗಮನ ನೀಡಿದ್ದರು. ಇದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲ ಪ್ರದರ್ಶನ ತೋರಿದ ಯುವಕರನ್ನು ಗುರುತಿಸಿ ವಿಶೇಷ ಬಹುಮಾನ ನೀಡಲಾಯಿತು.

- - - -19ಕೆಪಿಸೊರಬ02:

ಸೊರಬ ತಾಲೂಕಿನ ಹಳೇ ಸೊರಬದಲ್ಲಿ ಶ್ರೀ ರಾಮೇಶ್ವರ ಗ್ರಾಮಾಭಿವೃದ್ಧಿ ಸೇವಾ ಸಮಿತಿಯಿಂದ ವಿಶೇಷ ದೀಪಾವಳಿ ಅಂಗವಾಗಿ ಹೋರಿ ಬೆದರಿಸುವ ಹಬ್ಬ ಸಂಭ್ರಮದಿಂದ ಜರುಗಿತು.