ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ದುರ್ಗಾದೇವಿ ಜಾತ್ರೆ ವಿಚಾರವಾಗಿ ಎರಡು ಗುಂಪುಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಗಾಳಿಯಲ್ಲಿ ಹಾರಿಸಿದ ಗುಂಡು ತಗುಲಿ ಬಾಲಕಿ ಗಾಯಗೊಂಡಿರುವ ಘಟನೆ ತಾಲೂಕಿನ ಅಂಕಲಗಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಅಂಕಲಗಿ ಗ್ರಾಮದ ರಾಮು ವಡ್ಡರ ಎಂಬಾತ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಮನೆಯ ಮಾಳಿಗೆ ಮೇಲೆ ನಿಂತಿದ್ದ ಅಪ್ರಾಪ್ತ ಬಾಲಕಿಯ ಬಲಗಾಲಿನ ತೊಡೆಗೆ ಗುಂಡು ತಾಗಿ ಗಾಯಗೊಂಡಿದ್ದಾಳೆ. ಗಾಯಗೊಂಡ ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಈ ಘಟನೆ ಸಂಬಂಧ ಎರಡೂ ಗುಂಪುಗಳಿಂದ 21 ಆರೋಪಿಗಳ ವಿರುದ್ಧ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಜತೆಗೆ ಇದುವರೆಗೂ 14 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.
ಏನಿದು ಘಟನೆ..?:ಅಂಕಲಗಿಯಲ್ಲಿ ಅ.1ರಂದು ದುರ್ಗಾದೇವಿ ಜಾತ್ರೆ ನಡೆದಿತ್ತು. ಈ ಜಾತ್ರೆಯಲ್ಲಿ ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಉಂಟಾದ ಜಗಳ ತಾರಕಕ್ಕೇರಿತ್ತು. ಈ ವೇಳೆ ಜಾತ್ರೆಗೆ ಸಮಸ್ಯೆ ಆಗಬಾರದೆಂದು ಅಷ್ಟಕ್ಕೆ ಜಗಳ ಮೊಟಕುಗೊಳಿಸಿ ಜಾತ್ರೆ ನಡೆಸಲಾಯಿತು. ಆದರೆ, ಇದೇ ವಿಚಾರವಾಗಿ ಜಾತ್ರೆ ಮುಗಿದ ಮಾರನೇ ದಿನ ಅ.3ರಂದು ಬೆಳಗ್ಗೆ ಮತ್ತೆ ಎರಡೂ ಗುಂಪುಗಳ ಮಧ್ಯೆ ಜಗಳ ಶುರುವಾಗಿದೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಎರಡೂ ಗುಂಪಿನವರು ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಅಷ್ಟರಲ್ಲಿ ಒಂದು ಗುಂಪಿನಲ್ಲಿದ್ದ ಆರೋಪಿ ರಾಮು ಅಂಕಲಗಿ ಎಂಬಾತ ತನ್ನ ಪರವಾನಗಿ ಪಡೆದ ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ. ಆ ಗುಂಡು ಮನೆಯೊಂದರ ಮಾಳಿಗೆ ಮೇಲೆ ನಿಂತಿದ್ದ ಬಾಲಕಿ ತೊಡೆಗೆ ತಾಗಿದ್ದು, ಬಾಲಕಿ ಗಾಯಗೊಂಡಿದ್ದಾಳೆ. ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಗಲಾಟೆ ವಿಷಯ ತಿಳಿದ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಸ್ಪತ್ರೆಗೆ ಹೆಚ್ಚುವರಿ ಎಸ್ಪಿ ರಾಮನಗೌಡ ಹಟ್ಟಿ, ಡಿವೈಎಸ್ಪಿ ತುಳಜಪ್ಪ ಸುಲ್ಪಿ ಭೇಟಿ ನೀಡಿ ಮಾಹಿತಿ ಪಡೆದರು. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.------------
ಕೋಟ್....ಅಂಕಲಗಿ ದುರ್ಗಾದೇವಿ ಜಾತ್ರೆ ವಿಚಾರದಲ್ಲಿ ವಡ್ಡರ ಹಾಗೂ ಪೂಜಾರಿ ಗುಂಪುಗಳ ನಡುವೆ ನಡೆದ ಗಲಾಟೆ ಹಾಗೂ ಗಾಳಿಯಲ್ಲಿ ಗುಂಡು ಪ್ರಕರಣ ಸಂಬಂಧ ಎರಡೂ ಗುಂಪುಗಳ ಒಟ್ಟು 14 ಜನರನ್ನು ಬಂಧಿಸಲಾಗಿದೆ. ಗಲಾಟೆ ವೇಳೆ ರಾಮು ವಡ್ಡರ ಎಂಬಾತ ಪರವಾನಗಿ ಪಿಸ್ತೂಲಿನಿಂದ ಗಾಳಿಯಲ್ಲಿ ಹಾರಿಸಿದ್ದು, ಆ ಗುಂಡು ಬಾಲಕಿ ಕಾಲಿಗೆ ತಗುಲಿತ್ತು. ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಎರಡೂ ಗುಂಪುಗಳ ಒಟ್ಟು 21 ಜನರ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್ಪಿ