ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮಾರುತಿ ಬಲೆನೋ ಕಾರು ನೋಡ ನೋಡುತ್ತಲೇ ಧಗಧಗನೆ ಹೊತ್ತಿ ಉರಿದ ಘಟನೆ ನಗರದ ಹದಡಿ ರಸ್ತೆಯ ವಿಶಾಲ್ ಮಾರ್ಟ್ ಎದುರು ಸೋಮವಾರ ಮಧ್ಯಾಹ್ನ ವರದಿಯಾಗಿದೆ.ಹೊನ್ನಾಳಿ ಪಟ್ಟಣದ ವಾಸಿ, ಶಿಕ್ಷಕ ಮಾದ ನಾಯ್ಕ ಎಂಬವರಿಗೆ ಸೇರಿದ ಕಾರು ಇದು ಎನ್ನಲಾಗಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ಮಗನ ಪರೀಕ್ಷೆ ಮುಗಿಯಲು ಬಂದಿದ್ದರಿಂದ ದಾವಣಗೆರೆಗೆ ಬಂದಿದ್ದ ಮಾಧನಾಯ್ಕ ಇಲ್ಲಿನ ವಿಶಾಲ್ ಮಾರ್ಟ್ ಎದುರು ಕಾರು ನಿಲ್ಲಿಸಿ, ಮೊಬೈಲನ್ನು ಕಾರಿನಲ್ಲೇ ಚಾರ್ಜ್ ಹಾಕಲು ಇಟ್ಟು ಹೋಗಿದ್ದರು.
ಮೊಬೈಲ್ ಚಾರ್ಜ್‌ಗೆ ಇಟ್ಟಿದ್ದ ಕಾರಿನ ಎಲ್ಲಾ ಕಿಟಕಿ ಗಾಜುಗಳ ಬಂದ್ ಮಾಡಿದ್ದು, ತೀವ್ರ ಬಿಸಿಲಿನ ತಾಪದಿಂದಾಗಿ ಕಾರಿನಲ್ಲಿ ಆಕಸ್ಮಿಕವಾಗಿ ಶಾರ್ಟ್ ಸರ್ಕ್ಯೂಟ್ ಆಗಿದೆ. ಸಣ್ಣದಾಗಿ ಹೊತ್ತಿ ಬೆಂಕಿ ಕಿಡಿಯು ನೋಡ ನೋಡುತ್ತಿದ್ದಂತೆಯೇ ದೊಡ್ಡ ಮಟ್ಟದಲ್ಲಿ ಇಡೀ ಕಾರನ್ನೇ ಆಪೋಷನ ತೆಗೆದುಕೊಂಡಿದೆ.ವಿಶಾಲ್ ಮಾರ್ಟ್ ಒಳಗಿನಿಂದ ಹೊರ ಬರುತ್ತಿದ್ದಂತೆ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದನ್ನು ನೋಡಿದ ಮಾಧನಾಯ್ಕರು ಬೆಂಕಿ ನಂದಿಸಲು ಮಾಡಿದ ಪ್ರಯತ್ನ ವಿಫಲವಾಯಿತು. ನಿಯಂತ್ರಣಕ್ಕೆ ಬಾರದ ಬೆಂಕಿ ಇಡೀ ಕಾರಿನ ತುಂಬೆಲ್ಲಾ ಹರಡಿತು. ತಕ್ಷಣವೇ ಸ್ಥಳದಲ್ಲಿದ್ದವರು ಅಗ್ನಿಶಾಮಕ ದಳ ಹಾಗೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಬಿಳಿ ಬಣ್ಣದ ಕಾರು ಪೂರ್ತಿ ಸುಟ್ಟು ಕರಲಾಗಿತ್ತು.
ಕಾರಿಗೆ ಬೆಂಕಿ ಹತ್ತಿಕೊಂಡಿದ್ದರಿಂದ ಅದು ಸಿಎನ್‌ಜಿ ಕಾರೋ ಅಥವಾ ಪೆಟ್ರೋಲ್ ಕಾರೋ ಎಂಬುದು ಗೊತ್ತಾಗದೇ ಸುಮಾರು ದೂರದಲ್ಲಿ ಜನರು ನಿಂತು, ದೃಶ್ಯದ ವೀಡಿಯೋ ಚಿತ್ರೀಕರಣ ಮಾಡಿಕೊಂಡರು. ಬಸ್‌ನಲ್ಲಿ ಇತರೆ ವಾಹನಗಳಲ್ಲಿ ಸಾಗುತ್ತಿದ್ದವರೂ ಹೊತ್ತಿ ಉರಿಯುತ್ತಿದ್ದ ಕಾರು ಎಲ್ಲಿ ಸ್ಪೋಟಗೊಂಡಿತೋ ಎಂಬ ಭಯ, ಆತಂಕದಲ್ಲೇ ಮುಂದೆ ಸಾಗುತ್ತಿದ್ದರು. ಅದೃಷ್ಟವಶಾತ್ ಕಾರಿನಲ್ಲಿ ಯಾರೂ ಇಲ್ಲದಿದ್ದಾಗ ಬೆಂಕಿ ಅವಘಡವಾಗಿದ್ದು, ಕಾರು ಸಮೇತ ಕಾರಿನಲ್ಲಿದ್ದ ದಾಖತೆ, ಮಹತ್ವದ ವಸ್ತುಗಳು ಸುಟ್ಟು ಹೋಗಿವೆ ಎನ್ನಲಾಗಿದೆ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.