ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂಡರಗಿ, ಡಂಬಳದಲ್ಲಿ ತಂಡ ರಚನೆ

| Published : Mar 19 2024, 12:45 AM IST / Updated: Mar 19 2024, 12:46 AM IST

ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಂಡರಗಿ, ಡಂಬಳದಲ್ಲಿ ತಂಡ ರಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಡರಗಿ ತಾಲೂಕಿನಾದ್ಯಂತ ಈ ಬಾರಿ ಬರಗಾಲ ಎದುರಾಗಿರುವುದರಿಂದ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಸಮಸ್ಯೆ ಎದುರಿಸಲು ತಂಡಗಳನ್ನು ರಚನೆ ಮಾಡಲಾಗಿದೆ.

ರಿಯಾಜಅಹ್ಮದ ಎಂ. ದೊಡ್ಡಮನಿ

ಡಂಬಳ: ಅತ್ಯಂತ ಹಿಂದುಳಿದ ಪ್ರದೇಶವಾದ ಮುಂಡರಗಿ ತಾಲೂಕಿನಾದ್ಯಂತ ಈ ಬಾರಿ ಬರಗಾಲ ಎದುರಾಗಿರುವುದರಿಂದ ಜನ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆ ಈ ಎರಡು ಸಮಸ್ಯೆಗಳನ್ನು ಎದುರಿಸಲು ತಾಲೂಕಾಡಳಿತ ಮುಂಡರಗಿ ಮತ್ತು ಡಂಬಳ ಭಾಗದಲ್ಲಿ ತಂಡಗಳನ್ನು ರಚನೆ ಮಾಡಿಕೊಂಡು ಸನ್ನದ್ಧವಾಗಿದೆ.

ಪ್ರತಿ ಮಂಗಳವಾರ ಮತ್ತು ಬುಧವಾರ ಗ್ರಾಮಮಟ್ಟದ ಕಾರ್ಯಪಡೆ ಮತ್ತು ಪ್ರತಿ ಗುರುವಾರ ತಾಲೂಕು ಮಟ್ಟದ ಕಾರ್ಯಪಡೆ ಸಭೆ ನಡೆಯುತ್ತದೆ. ಜಿಲ್ಲಾಮಟ್ಟದಲ್ಲಿ ಪ್ರತಿ ಶುಕ್ರವಾರ ವಿಡಿಯೋ ಸಭೆ ನಡೆಯುತ್ತದೆ. ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು ಪಾಲ್ಗೊಂಡು ನೀರಿನ ಸಮಸ್ಯೆ ಮತ್ತು ಪಶುಗಳಿಗೆ ಆಹಾರದ ಕೊರತೆಯಾಗದಂತೆ ಕ್ರಮ ಕೈಗೊಳ್ಳುತ್ತಾರೆ. ಸಭೆಯಲ್ಲಿನ ನಡಾವಳಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲಾ ವೆಬ್‌ಸೈಟ್‌ನಲ್ಲಿ ಅಪ್‍ಲೋಡ್ ಮಾಡುವ ವ್ಯವಸ್ಥೆ ಮಾಡಲಾಗಿದೆ.

ತಾಲೂಕಿನ 19 ಗ್ರಾಪಂಗಳ ಪೈಕಿ 58 ಗ್ರಾಮಗಳು ಬರುತ್ತಿದ್ದು, ಈ ಗ್ರಾಮಗಳಿಗೆ ಡಿಬಿಒಟಿ ಹಾಗೂ ಎಂವಿಎಸ್ ಯೋಜನೆ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡಲಾಗುತ್ತಿದೆ. ಪ್ರಸಕ್ತವಾಗಿ ಪಟ್ಟಣ ಮತ್ತು ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮುಂದಿನ ದಿನಗಳಲ್ಲಿ 7 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಹುದು ಎಂದು ಅಂದಾಜಿಸಲಾಗಿದ್ದು, ಆ ಗ್ರಾಮಗಳಲ್ಲಿ 4 ಬೋರ್‌ವೆಲ್‌ಗಳನ್ನು ಗುರುತಿಸಲಾಗಿದೆ.

ನೀರಿಗಾಗಿ 52 ಲಕ್ಷ: ತುಂಗಭದ್ರಾ ನದಿಯ ಮೂಲಕ ಬಹುಗ್ರಾಮ ಕುಡಿಯುವ ನೀರು (ಡಿಬಿಒಟಿ) ಮೂಲಕ ಗ್ರಾಮಗಳಿಗೆ ನೀರು ಒದಗಿಸಲಾಗುತ್ತಿದೆ. ಈ ನೀರು ಕೇವಲ 10 ದಿನಗಳ ವರೆಗೆ ಮಾತ್ರ ಸಾಕಾಗಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಭದ್ರ ಅಣೆಕಟ್ಟೆಯಿಂದ ನೀರು ಬಿಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರು. ಆ ನೀರು ಸಹ ಬಂದಿದೆ. ಮುಂಡರಗಿಯ 9 ಗ್ರಾಪಂ, ಡಂಬಳ ಹೋಬಳಿಯ 10 ಗ್ರಾಪಂಗಳಲ್ಲಿ 694 ಸರ್ಕಾರಿ ಬೋರ್‌ವೆಲ್‌ಗಳು, ಅಲ್ಲದೆ ಕೆಲವು ಖಾಸಗಿ ಬೋರ್‌ವೆಲ್‍ಗಳನ್ನು ಕುಡಿಯುವ ನೀರಿಗಾಗಿ ಗುರುತಿಸಲಾಗಿದೆ. ಮುಂಡರಗಿಯಲ್ಲಿ 88 ಶುದ್ಧ ನೀರಿನ ಘಟಕಗಳು ಇದ್ದು, ಅದರಲ್ಲಿ 10 ರಿಪೇರಿಗಾಗಿ ಕಾದಿವೆ. ಗ್ರಾಮೀಣ ಮಟ್ಟದಲ್ಲಿ ಅತಿಯಾಗಿ ಕುಡಿಯುವ ನೀರಿನ ಸಮಸ್ಯೆಯಾದರೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಿಕೊಳ್ಳಲು ತಹಸೀಲ್ದಾರ್‌ ಪಿಡಿ ಖಾತೆಯ ಮೂಲಕ ತಲಾ ₹52 ಲಕ್ಷ ಕಾಯ್ದಿರಿಸಲಾಗಿದೆ.ಮೇವು ಬ್ಯಾಂಕ್: ಡಂಬಳ ಹೋಬಳಿಯ ಗ್ರಾಮಗಳು ಸೇರಿದಂತೆ ತಾಲೂಕಿನಾದ್ಯಂತ 5000 ಮೆಟ್ರಿಕ್ ಟನ್ ಮೇವು ಲಭ್ಯ ಇದೆ. ಅಲ್ಲದೆ ಮೇವು ಕೊರತೆಯಾಗಬಾರದು ಎನ್ನುವ ಹಿನ್ನೆಲೆ ಅಧಿಕಾರಿಗಳಿಂದ ಡಂಬಳ ಮತ್ತು ಬಾಗೇವಾಡಿ ಗ್ರಾಮಗಳಲ್ಲಿ ಮೇವು ಬ್ಯಾಂಕ್‌ ಪ್ರಾರಂಭವಾಗಿದೆ. ಹಂತ ಹಂತವಾಗಿ ಎಲ್ಲ 19 ಗ್ರಾಪಂಗಳ ಆವರಣಗಳಲ್ಲಿ ಮೇವಿನ ಬ್ಯಾಂಕ್‍ಗಳನ್ನು ತೆರೆಯುವ ತಯಾರಿಯಲ್ಲಿ ಇದ್ದು, ₹2ರಂತೆ ಒಂದು ವಾರಕ್ಕೆ 42 ಕೆಜಿ ಮೇವು ಕೊಡುವುದು, ಪ್ರತಿ ಮೇವು ಬ್ಯಾಂಕಿನಲ್ಲಿ 4ರಿಂದ 5 ಟನ್ ಮೇವು ಸಂಗ್ರಹವಿರುವಂತೆ ನೋಡುಕೊಳ್ಳಲಾಗುತ್ತಿದ್ದು ಅತ್ಯಂತ ಅವಶ್ಯಕತೆ ಇರುವ ರೈತರು ಸದುಪಯೋಗ ಪಡೆದುಕೊಳ್ಳಬಹುದಾಗಿದೆ.ಸಹಾಯವಾಣಿ ಆರಂಭ: ಮುಂಡರಗಿ ತಾಲೂಕಿನ ಕಚೇರಿಯ ಮೂಲಕ ವಿಪತ್ತು ನಿರ್ವಣೆಯ ಸಹಾಯವಾಣಿ 262237 ಸಂಖ್ಯೆಯಾಗಿದ್ದು, ರೈತರು ಸಾರ್ವಜನಿಕರು ನೀರಿನ ಮತ್ತು ಮೇವು ಪಡೆಯಲು ಈ ಸಹಾಯವಾಣಿಗೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬೇಕು.

ಈಗಾಗಲೆ ದಿನೇ ದಿನೇ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ನೀರಿನ ಅಭಾವವಾಗುವ ಮೂಲಕ ನಗರ ಗ್ರಾಮೀಣ ಪ್ರದೇಶದಲ್ಲಿ ನೀರಿನ ಬವಣೆ ಹೆಚ್ಚಾಗುವ ಸಾಧ್ಯತೆ ಇದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸುವ ಮೂಲಕ ನಲ್ಲಿಯ ನೀರನ್ನು ರಸ್ತೆಗಳಿಗೆ ಹರಿಯಲು ಬಿಡದೆ ಸೂಕ್ತವಾಗಿ ನೀರನ್ನು ಬಳಸಲು ಮುಂದಾಗುವ ಮೂಲಕ ಇಲಾಖೆಗಳೊಂದಿಗೆ ಸಹಕರಿಸಬೇಕಾಗಿದೆ. ಬೇಸಿಗೆ ನಿಮಿತ್ತ ಈಗಾಗಲೆ ತಾಲೂಕಾಡಳಿತ ಸಾರ್ವಜನಿಕರಿಗೆ ಕುಡಿಯುವ ನೀರಿನ ಹಾಗೂ ಜಾನುವಾರಗಳಿಗೆ ಮೇವು ತೊಂದರೆಯಾಗದಂತೆ ಎಲ್ಲ ರೀತಿಯಲ್ಲಿ ಹಿರಿಯ ಜಿಲ್ಲಾ ಮಟ್ಟದ ಅಧಿಕಾರಿಗಳ ಸಲಹೆ ಸೂಚನೆಯ ಮೇರೆಗೆ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಬೇಸಿಗೆಯನ್ನು ಎದುರಿಸಲು ಕಾರ್ಯಪಡೆ ಸನ್ನದ್ಧವಾಗಿದೆ ಎಂದು ತಹಸೀಲ್ದಾರ್‌ ಧನಂಜಯ ಮಾಲಗಿತ್ತಿ ಹೇಳಿದರು.