ಸಾರಾಂಶ
ಬ್ಯಾಡಗಿ: ಸ್ಥಳೀಯ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಗೆ ಸೋಮವಾರ 2 ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲ ಆವಕವಾಗಿದ್ದು, ಸಾಕಷ್ಟು ಪೊಲೀಸ್ ಭದ್ರತೆಗಳ ನಡುವೆ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ದರದಲ್ಲಿ ಸ್ಥಿರತೆ ಮುಂದುವರೆದಿದ್ದು, ರೈತರಲ್ಲಿ ಮೂಡಿದ್ದ ದರ ಕುಸಿತದ ಸಂಶಯ ಮತ್ತು ಆತಂಕ ದೂರವಾಗಿದೆ.
ಮೆಣಸಿನಕಾಯಿ ಚೀಲದೊಂದಿಗೆ ಆಗಮಿಸಿದ್ದ ಕರ್ನಾಟಕ ಸೇರಿದಂತೆ ಆಂಧ್ರ ಹಾಗೂ ತೆಲಂಗಾಣದ ರೈತರು ಇಂದು ನಿರ್ಭಯವಾಗಿ ತಮ್ಮೆಲ್ಲಾ ಮೆಣಸಿನಕಾಯಿ ವಹಿವಾಟುಗಳನ್ನು ಪೂರ್ಣಗೊಳಿಸಿದರು.ಊಹಿಸಲಾರದ ಘಟನೆ: ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಕಳೆದ ಮಾ.11ರಂದು ಬೆಲೆ ಕುಸಿತಗೊಂಡಿದೆ ಎಂದು ಆರೋಪಿಸಿ ಕೆಲ ರೈತರ ಗುಂಪೊಂದು ಎಪಿಎಂಸಿ ಕಾರ‍್ಯಾಲಯಕ್ಕೆ ನುಗ್ಗಿ ದಾಂಧಲೆ ನಡೆಸಿದ್ದರು, 2 ಖಾಸಗಿ 5 ಸರ್ಕಾರಿ ಸೇರಿದಂತೆ ಒಟ್ಟು 7 ವಾಹನಗಳಿಗೆ ಬೆಂಕಿ ಹಚ್ಚಿದ್ದ ರೈತರು ಕೈಗೆ ಸಿಕ್ಕಂತಹ ದಾಖಲೆಗಳನ್ನು ಸುಟ್ಟು ಆಕ್ರೋಶವನ್ನು ವ್ಯಕ್ತಪಡಿಸಿದ್ದರು.ಪೊಲೀಸ್ ಪಥಸಂಚಲನ: ರಕ್ಷಣಾ ಇಲಾಖೆ, ಪ್ಯಾರಾ ಮಿಲಿಟರಿ ಫೋರ್ಸ ಸೇರಿದಂತೆ ನೂರಾರು ಸಂಖ್ಯೆಯ ಪೊಲೀಸರು ಮಾರುಕಟ್ಟೆ ಪ್ರಮುಖ ಬೀದಿಗಳಲ್ಲಿ ಸೋಮವಾರ ಪಥ ಸಂಚಲನ ನಡೆಸುವ ಮೂಲಕ ರೈತರು, ವರ್ತಕರಲ್ಲಿ ವಿಶ್ವಾಸ ಮೂಡಿಸಿದರಲ್ಲದೇ ಅಹಿತಕರ ಘಟನೆ ನಡೆದರೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ ನೀಡದರು
2 ಲಕ್ಷ ಚೀಲ ಆವಕ: ಘಟನೆ ನಡೆದ ಬಳಿಕ ಮೊದಲ ಬಾರಿಗೆ ಮಾರುಕಟ್ಟೆಗೆ ಇಂದು ದೊಡ್ಡ ಪ್ರಮಾಣದಲ್ಲಿ ಮತ್ತೆ ಆವಕವಾಗಿದ್ದು, ಮಾರುಕಟ್ಟೆಗೆ ಒಟ್ಟು 211190 ಚೀಲಗಳಷ್ಟು ಆವಕವಾಗಿದೆ. ರೈತರು ನಿರ್ಭಯದಿಂದ ಯಾವುದೇ ತಕರಾರಿಲ್ಲದೇ ಮೆಣಸಿನಕಾಯಿ ಮಾರಾಟ ಮಾಡಿ ತಮ್ಮ ಊರುಗಳಿಗೆ ತೆರಳುತ್ತಿರುವ ದೃಶ್ಯಗಳು ಕಂಡು ಬಂದವು. ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ: ಕಳೆದ ವಾರಕ್ಕೆ ಹೋಲಿಸಿದಲ್ಲಿ ದರದಲ್ಲಿ ಯಾವುದೇ ವ್ಯತ್ಯಾಸ ಕಾಣದೇ ಸ್ಥಿರತೆ ಮುಂದುವರೆದಿದ್ದು, ರೈತರು ನಿಟ್ಟುಸಿರು ಬಿಡುವಂತಾಯಿತು, ಕಡ್ಡಿತಳಿ ಕನಿಷ್ಠ ರು. 2289 ಗರಿಷ್ಠ ರು. 36439, ಸರಾಸರಿ ರು. 29509, ಡಬ್ಬಿತಳಿ ರು.2799, ಗರಿಷ್ಠ ರು. 40199, ಸರಾಸರಿ ರು. 34799, ಗುಂಟೂರು ಕನಿಷ್ಠ ರು. 1109, ಗರಿಷ್ಠ ರು. 17809, ಸರಾಸರಿ ರು. 12489 ಗಳಿಗೆ ಮಾರಾಟವಾಗಿರುವುದಾಗಿ ಮಾರುಕಟ್ಟೆ ಮೂಲಗಳು ದೃಢಪಡಿಸಿವೆ.ಮಾರುಕಟ್ಟೆ ಗೌರವ ಉಳಿಸಿದ ರೈತರುಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಕಚೇರಿಗೆ ಬೆಂಕಿ ಹಚ್ಚುವ ಮೂಲಕ ಕಳಂಕ ತಂದಿದ್ದ ರೈತರೇ, ಎರಡು ಲಕ್ಷಕ್ಕೂ ಅಧಿಕ ಮೆಣಸಿನಕಾಯಿ ಚೀಲಗಳನ್ನು ಮಾರಾಟಕ್ಕೆ ತರುವ ಮೂಲಕ ಮಾರುಕಟ್ಟೆ ಗೌರವ ಹೆಚ್ಚಿಸಿದ್ದಾರೆ. ಆನ್‌ಲೈನ್ ಟೆಂಡರ್, ಎಲೆಕ್ಟ್ರಾನಿಕ್ ತೂಕ, ಗುಣಮಟ್ಟದ ಬೆಳೆಗೆ ಸ್ಪರ್ಧಾತ್ಮಕ ದರ ಸಿಗುತ್ತಿದೆ. ಇಲ್ಲಿ ನಡೆಯುತ್ತಿರುವ ಪಾರದರ್ಶಕ ವ್ಯಾಪಾರಕ್ಕೆ ರೈತರಿಂದ ಮನ್ನಣೆ ಸಿಕ್ಕಿದ್ದು, ಅವರಿಗೆ ಅಭಿನಂದಿಸುತ್ತೇನೆ ವರ್ತಕರ ಸಂಘದ ಅಧ್ಯಕ್ಷ ಸುರೇಶಗೌಡ್ರ ಪಾಟೀಲ ಹೇಳಿದರು.