ಸಾರಾಂಶ
ಪರಿಸರ ಪ್ರೇಮತಂಡ ಮುಖ್ಯಸ್ಥ ಮಲ್ಲಿಕಾರ್ಜುನ ತೊದಲಬಾಗಿ ಹೇಳಿಕೆ
ಕನ್ನಡಪ್ರಭ ವಾರ್ತೆ ಕೊಪ್ಪಳಸಮಾಜದಲ್ಲಿರುವ ನಾಗರಿಕರು ತಮ್ಮ ಸಮುದಾಯಗಳಿಗೆ ಸೀಮಿತವಾಗಿರುವ ಮಂದಿರ-ಮಸೀದಿ, ಚರ್ಚ್‌ಗಳ ಅಭಿವೃದ್ಧಿಯ ಬದಲಾಗಿ ಸರ್ವಧರ್ಮ ಸಮನ್ವಯ ಆಗಿರುವ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಹಾಗೂ ಪರಿಸರ ಪ್ರೇಮತಂಡದ ಮುಖ್ಯಸ್ಥ ಮಲ್ಲಿಕಾರ್ಜುನ ತೊದಲಬಾಗಿ ಹೇಳಿದರು.
ನಗರದ ಸಿ.ಪಿ.ಎಸ್. ಶಾಲೆಯಲ್ಲಿ ಪರಿಸರ ಪ್ರೇಮತಂಡದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರಮದಾನ, ಶಾಲೆಗೆ ಬಣ್ಣ ಹಚ್ಚುವ, ಸಸಿ ನೆಡುವ ಹಾಗೂ ಆರೋಗ್ಯ ತಪಾಸಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಮನುಷ್ಯನಾಗಿ ಹುಟ್ಟಿದ ಮೇಲೆ ಪ್ರತಿಯೊಬ್ಬ ವ್ಯಕ್ತಿ ಸಾಯುವ ಮುನ್ನ ಸಮಾಜಕ್ಕೆ ತನ್ನದೆಯಾದ ಕೊಡುಗೆ ನೀಡಬೇಕು. ಶಾಲೆಗಳ ಅಭಿವೃದ್ಧಿ ಹೆಚ್ಚು ಮಹತ್ವ ನೀಡಬೇಕಿದೆ. ಶಾಲೆಯ ಪರಿಸರ ಉತ್ತಮವಾಗಿದ್ದಾಗ ಮಾತ್ರ ಮಕ್ಕಳು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಾರೆ. ಆ ನಿಟ್ಟಿನಲ್ಲಿ ನಮ್ಮ ತಂಡ ಹೆಚ್ಚು ಶ್ರಮ ವಹಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ ತಗಡಿನಮನಿ ಮಾತನಾಡಿ, ಸರ್ಕಾರಿ ಹುದ್ದೆಗಳನ್ನು ನಿರ್ವಹಿಸುವುದರ ಜೊತೆಯಲ್ಲಿ ಶಾಲೆಗಳ ಅಂದ-ಚಂದ ಹೆಚ್ಚುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ. ಇಂತಹ ಸಾಮಾಜಿಮುಖಿ ಕಾರ್ಯಗಳು ಇನ್ನೂ ಹೆಚ್ಚು ಆಗಬೇಕಿದೆ ಎಂದು ಹೇಳಿದರು.ಶಾಲೆಯ ಮುಖ್ಯೋಪಾಧ್ಯಾಯ ಎಂ.ಡಿ. ಗುಲಾಮಹುಸೇನ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯಕ್ರಮದ ವ್ಯವಸ್ಥಾಪಕ ಅಂಬಣ್ಣ ಕಟಿಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷ ಬೀರಪ್ಪ ಅಂಡಗಿ ಚಿಲವಾಡಗಿ, ಪರಿಸರ ಪ್ರೇಮತಂಡದ ಸದಸ್ಯರಾದ ರಾಮಣ್ಣ ಬಂಡಿಹಾಳ, ಶಿವಬಸಯ್ಯಾ, ಬಸವರಾಜ ಬಡಿಗೇರ, ಮಾರುತಿ ನಾಯಕ, ಶ್ರೀರಾಮ, ನಾಗರಾಜ ಮುಂತಾದವರು ಹಾಜರಿದ್ದರು. ಶಿಕ್ಷಕ ನಾಗಪ್ಪ ನರಿ ನಿರೂಪಿಸಿದರು. ಶಿಕ್ಷಕರಾದ ಕಾಶೀನಾಥ ಸಿರಿಗೇರಿ ಸ್ವಾಗತಿಸಿದರು ಮೊಹ್ಮದ ಆಬೀದ ಹುಸೇನ ಅತ್ತಾರ ವಂದಿಸಿದರು.