ಸಾರಾಂಶ
ಮುಧೋಳ: ನಮೋ ಬ್ರಿಗೇಡ್ ಮುಧೋಳ ವತಿಯಿಂದ ಮಾ.19 ರಂದು ಸಂಜೆ 6 ಗಂಟೆಗೆ ಸ್ಥಳೀಯ ಹೇಮರಡ್ಡಿ ಕಲ್ಯಾಣ ಮಂಟಪದ ಆವರಣದಲ್ಲಿ ನಮೋ ಭಾರತ ಬಹಿರಂಗ ಸಮಾವೇಶ ನಡೆಯಲಿದೆ ಎಂದು ನಮೋ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಕ್ಷಯ ನಾಯ್ಕರ ತಿಳಿಸಿದರು.
ಕನ್ನಡ ಪ್ರಭ ವಾರ್ತೆ ಮುಧೋಳ
ನಮೋ ಬ್ರಿಗೇಡ್ ಮುಧೋಳ ವತಿಯಿಂದ ಮಾ.19 ರಂದು ಸಂಜೆ 6 ಗಂಟೆಗೆ ಸ್ಥಳೀಯ ಹೇಮರಡ್ಡಿ ಕಲ್ಯಾಣ ಮಂಟಪದ ಆವರಣದಲ್ಲಿ ನಮೋ ಭಾರತ ಬಹಿರಂಗ ಸಮಾವೇಶ ನಡೆಯಲಿದೆ ಎಂದು ನಮೋ ಬ್ರಿಗೇಡ್ ಜಿಲ್ಲಾ ಸಂಚಾಲಕ ಅಕ್ಷಯ ನಾಯ್ಕರ ತಿಳಿಸಿದರು.ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದಲ್ಲಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸುಲಿಬೆಲೆ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 10 ವರ್ಷಗಳ ಸಾಧನೆ ಮತ್ತು ಅಭಿವೃದ್ಧಿ ಯೋಜನೆಗಳ ಕುರಿತು ಸಾರ್ವಜನಿಕರನ್ನು ಉದ್ದೇಶಸಿ ಮಾತನಾಡಲಿದ್ದಾರೆ. ಮೋದಿ ಸರ್ಕಾರದ ಸಾಧನೆಗಳ ಕುರಿತು ಎಲ್ಇಡಿ ಪರದೆಯಲ್ಲಿ ವಿಡಿಯೋ ಪ್ರಸಾರ ಮಾಡಲಾಗುವುದು ಎಂದರು.
ಸಮಾವೇಶದಲ್ಲಿ ಬೆಳಗಲಿಯ ಶ್ರೀ ಸಿದ್ದರಾಮ ಶಿವಯೋಗಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ಡಾ. ಸಂಜಯ ಘಾರಗೆ ಅತಿಥಿ ಸ್ಥಾನ ವಹಿಸುವರು. ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಸೇರಿದಂತೆ ಬಿಜೆಪಿಯ ಹಿರಿಯ ಮುಖಂಡರು ಉಪಸ್ಥಿತರಿರುವರು ಎಂದು ಹೇಳಿದರು.ಸಮಾವೇಶಕ್ಕೆ ತಾಲೂಕಿನಿಂದ ಅಂದಾಜು 5 ರಿಂದ 6 ಸಾವಿರದಷ್ಟು ಜನ ಆಗಮಿಸುವ ನಿರೀಕ್ಷೆ ಇದೆ. ನರೇಂದ್ರ ಮೋದಿ ಅವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಸಮಾವೇಶ ಯಶಸ್ವಿಗೊಳಿಸಿ ಎಂದು ಮನವಿ ಮಾಡಿದರು.
ಮಾಧ್ಯಮಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಸದಾ ಜಾಧವ, ಬಾಗಲಕೋಟ ನಗರ ಘಟಕ ಸಂಚಾಲಕ ಪ್ರಕಾಶ ಅಂಗಡಿ, ಬಿಜೆಪಿ ನಗರ ಘಟಕ ಕಾರ್ಯದರ್ಶಿ ಆನಂದ ಗಣಾಚಾರಿ, ನಗರಸಭೆ ಸದಸ್ಯ ಸುನೀಲ ನಿಂಬಾಳಕರ ಇದ್ದರು.